Thursday, 26th December 2024

Health Tips: ಚಳಿಗಾಲದಲ್ಲಿ ಕೊಲೆಸ್ಟ್ರಾಲ್‌ ನಿಯಂತ್ರಣ ಹೇಗೆ?

health tips

ವಿಧ ವಿಧದ ಬ್ರೆಡ್‌, ಕೇಕ್‌ ಮತ್ತು ರುಚಿಕರ ಪೇಸ್ಟ್ರಿಗಳನ್ನು ಸವಿಯುವುದಕ್ಕೆ ಇದು ಸಕಾಲ. ಕ್ರಿಸ್‌ಮಸ್‌ ಮುಗಿದ ಬೆನ್ನಿಗೆ ವರ್ಷದಲ್ಲಿ ಬಳಸದೆ ಉಳಿದ ರಜೆಗಳನ್ನೆಲ್ಲ ಜಡಿದು, ಕುಟುಂಬ ಮತ್ತು ಸ್ನೇಹಿತರೊಂದಿಗೆ ಒಂದಿಷ್ಡು ತಿರುಗಾಡಿ, ಹೊಸ ವರ್ಷಕ್ಕೆಂದು ಪಾರ್ಟಿ ಮಾಡಿ, ವರ್ಷಾರಂಭಕ್ಕೆ ಮಾಮೂಲಿಗೆ ಬರುವಷ್ಟರಲ್ಲಿ ದೇಹ ತನ್ನ ಮಾಮೂಲಿ ದಿಕ್ಕನ್ನು ತಪ್ಪಿರುತ್ತದೆ. ಕೊಂಚ ಅನುಮಾನದಿಂದ ಕೊಲೆಸ್ಟ್ರಾಲ್‌(Cholesterol) ತಪಾಸಣೆ ಮಾಡಿಸಿದರೆ, ಸಂಖ್ಯೆಗಳು ಅಟ್ಟಕ್ಕೇರಿ ಕುಳಿತಿರುತ್ತವೆ. ಇನ್ನೂ ಚಳಿಗಾಲ ಮುಗಿದಿಲ್ಲ, ಆದರೆ ಊರ್ಧ್ವಮುಖಿಯಾಗಿರುವ ಕೊಲೆಸ್ಟ್ರಾಲ್‌ ಕಡಿಮೆ ಮಾಡದೆ ವಿಧಿಯಿಲ್ಲದಿದ್ದರಿಂದ ಪಥ್ಯ, ವ್ಯಾಯಾಮಗಳಿಗೆ ಮೊದಲಾಗುತ್ತೀರಿ(Health Tips).

ಚಳಿಗಾಲ ಎಂಬಲ್ಲಿಗೇ ಕೆಲವು ಆರೋಗ್ಯ ಸ್ಥಿತಿಗಳು ಅಂಕೆ ಮೀರಲು ಯತ್ನಿಸುತ್ತವೆ. ಅದರಲ್ಲಿ ನಮ್ಮ ಜೀವನಶೈಲಿಯೂ ಬೀಡುಬೀಸಾಗಿದ್ದರೆ ವಿಷಯ ಬಿಗಡಾಯಿಸುತ್ತದೆ. ಹೆಚ್ಚಿನ ಹೃದಯ ಸಂಬಂಧಿ ಸಾವುಗಳು ಸಂಭವಿಸುವುದು ಚಳಿಗಾಲದಲ್ಲಿ. ಚಳಿಗಾಲದಲ್ಲಿ ರಕ್ತದೊತ್ತಡ ನಿಯಂತ್ರಣಕ್ಕೆ ಇರುವಂಥ ಸವಾಲುಗಳೂ ಇದಕ್ಕೆ ಸಾಕಷ್ಟು ಕಾಣಿಕೆಯನ್ನು ನೀಡುತ್ತವೆ. ಇದರಿಂದ ಹೃದಯಾಘಾತ, ಪಾರ್ಶ್ವವಾಯುವಿನ ಭೀತಿ ಹೆಚ್ಚು. ಇದರೊಂದಿಗೆ ನಮ್ಮ ಜೀವನಶೈಲಿಯ ದೋಷದಿಂದ ಕೊಲೆಸ್ಟ್ರಾಲ್‌ ಸಹ ಹೆಚ್ಚಾದರೆ ಆರೋಗ್ಯ… ದೇವರಿಗೆ ಪ್ರೀತಿಯಾಗಲು ತಡವಿಲ್ಲ! ಹಾಗಾದರೆ ಚಳಿಗಾಲದಲ್ಲಿ ಕೊಲೆಸ್ಟ್ರಾಲ್‌ ನಿಯಂತ್ರಿಸುವುದು ಹೇಗೆ?

ಚಳಿಗಾಲದ ಆಹಾರಗಳು: ಈ ಋತುವಿನಲ್ಲಿ ಲಭ್ಯವಿರುವ ಹಣ್ಣು-ತರಕಾರಿಗಳಿಗೆ ಆದ್ಯತೆ ನೀಡಿ. ಸಿಟ್ರಸ್‌ ಹಣ್ಣುಗಳು, ಎಲೆಕೋಸು, ಬ್ರೊಕೊಲಿ, ಹೂಕೋಸಿನಂಥ ತರಕಾರಿಗಳು, ಗಜ್ಜರಿ, ಗೆಣಸು, ಬೀಟ್‌ನಂಥ ಗಡ್ಡೆಗಳಿಗೆ ತಟ್ಟೆಯಲ್ಲಿ, ನಂತರ ಹೊಟ್ಟೆಯಲ್ಲಿ ಜಾಗ ಕೊಡಿ. ಇವುಗಳಲ್ಲಿ ನಾರು, ವಿಟಮಿನ್‌ಗಳು ಮತ್ತು ಖನಿಜಗಳು ಭರಪೂರ ಇದ್ದು, ಈ ಋತುವಿಗೆ ಅಗತ್ಯವಾದ ಸತ್ವಗಳನ್ನು ದೇಹಕ್ಕೆ ಒದಗಿಸುತ್ತವೆ. ಜೊತೆಗೆ ಸೇಬು, ದಾಳಿಂಬೆ, ಪಪ್ಪಾಯದಂಥ ಹಣ್ಣುಗಳನ್ನೂ ಸೇವಿಸುತ್ತಿದ್ದರೆ ಚಳಿಗಾಲದಲ್ಲಿ ಕೊಲೆಸ್ಟ್ರಾಲ್‌ ನಿಯಂತ್ರಿಸುವುದು ಕಷ್ಟವಾಗಲಾರದು.

ಇಡಿ ಧಾನ್ಯಗಳು: ಸರಳ ಪಿಷ್ಟಗಳನ್ನು ನೀಡುವಂಥ ಮೈದಾ ತಿನಿಸುಗಳು ಮತ್ತು ಸಂಸ್ಕರಿತ ಆಹಾರಗಳನ್ನು ಕಡಿಮೆ ಮಾಡಿದಷ್ಟೂ ಒಳ್ಳೆಯದು. ಬಿಳಿ ಬ್ರೆಡ್‌, ಪಾಸ್ತಾ ಮುಂತಾದವುಗಳ ಬದಲಿಗೆ ಕೆಂಪಕ್ಕಿ, ಬಾರ್ಲಿ, ಸಿರಿಧಾನ್ಯಗಳು, ಕಿನೊವಾ, ಓಟ್‌ನಂಥವು ಆರೋಗ್ಯಕ್ಕೆ ಹಿತ. ಇವುಗಳಲ್ಲಿರುವ ಸಂಕೀರ್ಣ ಪಿಷ್ಟಗಳು ದೀರ್ಘಕಾಲದವರೆಗೆ ದೇಹಕ್ಕೆ ಅಗತ್ಯವಾದ ಪೋಷಣೆ ಮತ್ತು ಶಕ್ತಿಯನ್ನು ನೀಡುತ್ತಿರುತ್ತವೆ. ಇದರಿಂದ ಆಗಾಗ ತಿನ್ನಬೇಕೆಂಬ ಬಯಕೆಯನ್ನೂ ಹತ್ತಿಕ್ಕಬಹುದು. ಇವುಗಳ ನಾರಿನಂಶವು ದೇಹದಲ್ಲಿ ಕೊಲೆಸ್ಟ್ರಾಲ್‌ ಕಡಿತ ಮಾಡಲು ದೊಡ್ಡ ಕೊಡುಗೆಯನ್ನು ನೀಡುತ್ತದೆ

ಆರೋಗ್ಯಕರ ಕೊಬ್ಬು: ತೀರಾ ಕೊಬ್ಬಿಲ್ಲದ ಆಹಾರಗಳು ದೇಹಕ್ಕೆ ತೊಂದರೆ ಕೊಡುತ್ತವೆ. ಹಾಗೆಂದು ಹುರಿದ, ಕರಿದ ತಿನಿಸುಗಳನ್ನು ಮೆಲ್ಲಬೇಕೆಂದಲ್ಲ. ಬದಲಿಗೆ, ಕೊಬ್ಬಿನ ಮೀನುಗಳು, ಬೆಣ್ಣೆ ಹಣ್ಣು, ಬಾದಾಮಿ, ವಾಲ್‌ನಟ್‌, ಅಗಸೆ ಬೀಜ, ಚಿಯಾ ಬೀಜದಂಥ ಆಹಾರಗಳಲ್ಲಿ ಉತ್ತಮ ಕೊಬ್ಬು ದೇಹಕ್ಕೆ ದೊರೆಯುತ್ತದೆ. ಹೆಚ್ಚೆಚ್ಚು ಒಮೇಗಾ ೩ ಕೊಬ್ಬಿನಾಮ್ಲ ತಿನ್ನುವುದರಿಂದ ಶರೀರದಲ್ಲಿ ಕೆಟ್ಟ ಕೊಬ್ಬು ಜಮೆಯಾಗದಂತೆ ತಡೆಯಲು ಸಾಧ್ಯ.

ಚಟುವಟಿಕೆ: ಚಳಿ ಎಷ್ಟೇ ಇದ್ದರೂ ದೇಹ ತಿಂದಿದ್ದನ್ನು ಕರಗಿಸಬೇಡವೇ? ಹಾಗೆ ಕರಗಿಸಿದರೆ ಮಾತ್ರವೇ ಕೊಲೆಸ್ಟ್ರಾಲ್‌ ತಹಬಂದಿಗೆ ಬಂದೀತು. ದಿನಕ್ಕೆ 30 ನಿಮಿಷಗಳಂತೆ ವಾರಕ್ಕೈದು ದಿನಗಳು ವ್ಯಾಯಾಮ ಮಾಡಿದರೂ ಆರೋಗ್ಯದಲ್ಲಿ ಸುಧಾರಣೆ ತರುವುದಕ್ಕೆ ಸಾಧ್ಯವಿದೆ. ನಡಿಗೆ, ಯೋಗ, ಜಿಮ್‌, ಏರೋಬಿಕ್ಸ್‌, ಪಿಲಾಟೆ, ಜುಂಬಾ, ಬ್ಯಾಡ್ಮಿಂಟನ್‌, ನೃತ್ಯ ಮುಂತಾದ ಯಾವ ರೀತಿಯ ಚಟುವಟಿಕೆಯೂ ಆಗಬಹುದು. ಅವರವರ ಆರೋಗ್ಯ ಸರಿ ಹೊಂದುವಂಥ ವ್ಯಾಯಾಮಗಳು ಅಗತ್ಯವಾಗಿ ಬೇಕು.

ನಿದ್ದೆ ಮತ್ತು ಒತ್ತಡ: ಇವೆರಡೂ ದೇಹದಲ್ಲಿನ ಕೊಲೆಸ್ಟ್ರಾಲ್‌ ಮಟ್ಟವನ್ನು ಹಿಗ್ಗಿಸಬಲ್ಲವು. ಪ್ರತಿದಿನ ನಿಗದಿತ ಸಮಯಕ್ಕೆ ಮಲಗಿ, 7-8 ತಾಸು ನಿದ್ದೆ ಮಾಡಿ. ಅರ್ಧಕ್ಕರ್ಧ ಮಾನಸಿಕ ಒತ್ತಡ ಇದರಲ್ಲೇ ಕಡಿಮೆಯಾಗುತ್ತದೆ. ಪ್ರಕೃತಿಯೊಂದಿಗೆ, ಆಪ್ತರೊಂದಿಗೆ ಮಾತಾಡುವುದು, ಮೆಚ್ಚಿನ ಹವ್ಯಾಸದಲ್ಲಿ ತೊಡಗಿಸಿಕೊಳ್ಳುವುದು, ಪ್ರಾಣಾಯಾಮ, ಧ್ಯಾನ ಮುಂತಾದವು ನಿದ್ದೆಯನ್ನು ಹೆಚ್ಚಿಸಿ, ಒತ್ತಡವನ್ನು ಕಡಿಮೆ ಮಾಡುತ್ತವೆ.

ಈ ಸುದ್ದಿಯನ್ನೂ ಕೊಡಿ: Health Tips: ಅತಿಯಾಗಿ ಕಾಫಿ ಸೇವಿಸಿದರೆ ಆತಂಕದ ಕಾಯಿಲೆ!