Monday, 6th January 2025

Health Tips: ಬೆಳಗಿನ ಉಪಾಹಾರ ಹೇಗಿರಬೇಕು?

ಬೆಂಗಳೂರು: ಬೆಳಗಿನ ಉಪಾಹಾರವನ್ನು(Morning Breakfast) ತಿನ್ನಲೇಬೇಕು ಎಂಬುದು ಬಹುತೇಕರಿಗೆ ಮನದಟ್ಟಾಗಿರುವ ಸಂಗತಿ. ಉಪವಾಸ ಮಾಡುವ ಉದ್ದೇಶವಿದ್ದರೆ, ಮಧ್ಯಾಹ್ನವೋ ಅಥವಾ ಸಂಜೆಯೋ ಮಾಡುವ ಅಭ್ಯಾಸ ಸೂಕ್ತ ಎಂಬುದನ್ನು ಅಧ್ಯಯನಗಳೂ ಸೂಚಿಸುತ್ತವೆ. ಬೆಳಗ್ಗೆ ತಿನ್ನುವುದು ಅಗತ್ಯ ಎಂಬುದು ಹೌದು, ಏನು ಮತ್ತು ಎಷ್ಟು ಎಂಬುದು ನಮಗೆ ಗೊತ್ತೇ? ಬೆಳಗಿನ ಗಡಿಬಿಡಿಯಲ್ಲಿ ಒಂದಿಷ್ಟು ಸಿಹಿಯಾದ ಓಟ್ಸ್ ಹಾಕಿಕೊಂಡು, ಅದಕ್ಕಿಷ್ಟು ಹಾಲು ಸುರಿದುಕೊಂಡು ತಿಂದು ಹೋಗುವುದೇ? ಅರಳೆಯಂತೆ ಅರಳಿದ ಬ್ರೆಡ್‌ ತಿಂದು, ಫ್ರೂಟ್‌ ಜ್ಯೂಸ್‌ ಕುಡಿದು ಹೋಗುವುದು ಸರಿಯೇ? ಉಬ್ಬಿದ ಪೂರಿ ಜೊತೆಗಿಷ್ಟು ಆಲೂಗಡ್ಡೆ ಪಲ್ಯದ ಸಾಂಪ್ರದಾಯಿಕ ತಿಂಡಿ ಇದ್ದರೆ ಹೇಗೆ? ಯಾವುದನ್ನೇ ತಿನ್ನುವುದಾದರೂ, ಅದನ್ನು ಎಷ್ಟು ತಿನ್ನಬೇಕು? (Health Tips)

ದಿನದ ಅತ್ಯಂತ ಮುಖ್ಯವಾದ ಆಹಾರವೆಂದರೆ ಬೆಳಗಿನ ಉಪಾಹಾರ. ಅದರಲ್ಲಿ ಇಡೀ ದಿನಕ್ಕೆ ನಮಗೆ ಬೇಕಾಗುವ ಶೇ. 20 ರಿಂದ ಶೇ. 30 ರಷ್ಟು ಕ್ಯಾಲರಿಗಳು ದೇಹ ಸೇರಬೇಕು ಎನ್ನುತ್ತವೆ ಅಧ್ಯಯನಗಳು. ಅಂದರೆ ನಿಮಗೆ ಒಂದು ದಿನಕ್ಕೆ ಅಂದಾಜು 2000 ಕ್ಯಾಲರಿಗಳು ಬೇಕು ಎಂದಾದರೆ, ಬೆಳಗಿನ ತಿಂಡಿಯಲ್ಲಿ 400-600 ಕ್ಯಾಲರಿಯಷ್ಟು ಶಕ್ತಿ ದೇಹಕ್ಕೆ ದೊರೆಯಬೇಕು. ಈಗ ಮತ್ತೊಂದು ಮುಖ್ಯವಾದ ಪ್ರಶ್ನೆಯೆಂದರೆ, ಎಂತಹ ಕ್ಯಾಲರಿ ಬೇಕು? ಸಿಹಿಯಾದ ಓಟ್ಸ್ ಮಾತ್ರ ತಿಂದರೆ, ಫ್ರೂಟ್‌ ಜ್ಯೂಸ್‌ಗಳನ್ನೇ ಕುಡಿದರೆ ಸಕ್ಕರೆಯಂಥ ಅಂಶಗಳೇ ಹೆಚ್ಚು ದೊರೆಯುತ್ತವೆ, ಅದು ಬೇಕೇ? ಅರಳೆಯಂಥ ಬ್ರೆಡ್‌ನಲ್ಲಿ ಸರಳ ಪಿಷ್ಟಗಳೇ ಅಧಿಕ, ಅದು ಸಾಕೇ? ಕರಿದ ತಿಂಡಿಗಳಲ್ಲಿ ಬೇಕಾದ್ದಕ್ಕಿಂತ ಹೆಚ್ಚಿನ ಕೊಬ್ಬು ದೇಹ ಸೇರುತ್ತದೆ, ಅದು ಯಾಕೆ?

ಏನು ತಿನ್ನಬೇಕು?: ಹೆಚ್ಚಿನ ಪ್ರೊಟೀನ್‌ ದೇಹಕ್ಕೆ ಬೇಕಾಗುವುದು ಈಗಲೇ. ಇದರ ಜೊತೆಗೆ ಸಾಕಷ್ಟು ನಾರು, ಸಂಕೀರ್ಣ ಪಿಷ್ಟಗಳು ಮತ್ತು ಉತ್ತಮ ಕೊಬ್ಬನ್ನು ನೀಡುವಂಥ ಆಹಾರ ಬೆಳಗಿನ ಹೊತ್ತು ಅಗತ್ಯ. ಹಾಲು, ಮೊಟ್ಟೆ, ವಾಲ್‌ನಟ್‌, ನೆನೆಸಿದ ಶೇಂಗಾ, ಬಾದಾಮಿಯಂಥ ಬೀಜಗಳು ನಮ್ಮ ಪ್ರೊಟೀನ್‌ ಮತ್ತು ಕೊಬ್ಬಿನ ಖಜಾನೆಯನ್ನು ತುಂಬಿಸಬಲ್ಲವು. ಓಟ್ಸ್ ಮಾದರಿಯ ತಿಂಡಿ ಇಷ್ಟವೆಂದರೆ ಓಟ್‌ಮೀಲ್‌ ಬೇಯಿಸಿಕೊಂಡು, ಅದಕ್ಕೆ ಹಾಲು, ಹಣ್ಣುಗಳು, ಬೀಜಗಳನ್ನೆಲ್ಲ ಸೇರಿಸಿಕೊಳ್ಳಿ. ಹಣ್ನುಗಳಲ್ಲಿರುವ ನೈಸರ್ಗಿಕವಾದ ಸಿಹಿಯಂಶ ನಾಲಗೆಗೂ ಹಿತ ನೀಡುತ್ತದೆ. ಬ್ರೆಡ್‌ ಮಾತ್ರವೇ ಗಂಟಲಲ್ಲಿ ಇಳಿಯುವುದು ಎಂದಿರಾ? ಇಡೀ ಗೋಧಿ, ಮಲ್ಟಿಗ್ರೇನ್‌ ಅಥವಾ ಸಿರಿಧಾನ್ಯಗಳ ಬ್ರೆಡ್‌ ಧಾರಾಳವಾಗಿ ಲಭ್ಯವಿದೆ. ಇದಕ್ಕೆ ಬಗೆಬಗೆಯ ತರಕಾರಿಗಳು, ಚೀಸ್‌ಗಳನ್ನೆಲ್ಲ ಸೇರಿಸಿ ಸ್ಯಾಂಡ್‌ವಿಚ್‌ ಮಾಡಿಕೊಳ್ಳಿ. ಮೊಟ್ಟೆ ತಿನ್ನುವವರಿಗೆ ಬ್ರೆಡ್‌-ಆಮ್ಲೆಟ್‌ ಸುಲಭ ಉಪಾಹಾರ.

ಇವೆಲ್ಲ ಅಲ್ಲ, ಸಾಂಪ್ರದಾಯಿಕ ಉಪಾಹಾರಗಳೇ ಬೇಕೆ? ರಾಗಿ ದೋಸೆ, ಓಟ್‌ಮೀಲ್‌ ಇಡ್ಲಿ, ಜವೆಗೋಧಿ ಅಥವಾ ಗೋಧಿ ನುಚ್ಚಿನ ಉಪ್ಪಿಟ್ಟು, ತೌಡು ಸೇರಿರುವ ಹಿಟ್ಟುಗಳ ಚಪಾತಿಗಳೆಲ್ಲ ರುಚಿಗೆ ಮಾತ್ರವಲ್ಲ, ದೀರ್ಘಕಾಲದವರೆಗೆ ಹಸಿವಾಗದಂತೆ ತಡೆಯುವುದಕ್ಕೂ ಸೂಕ್ತವಾದವು. ಸಾಕಷ್ಟು ಪ್ರಮಾಣದಲ್ಲಿ ಇಡೀ ಧಾನ್ಯಗಳು, ಹಣ್ಣು-ತರಕಾರಿಗಳು, ಮತ್ತು ಉತ್ತಮ ಕೊಬ್ಬು ಹೊಂದಿರುವ ಅವಕಾಡೊ, ಕಾಯಿ-ಬೀಜಗಳು ಬೆಳಗಿನ ಆಹಾರದಲ್ಲಿ ಅಗತ್ಯವಾಗಿ ಬೇಕು.

ಹೆಚ್ಚು-ಕಡಿಮೆ ಆದರೇನು?: ಅದಷ್ಟೇ ಕ್ಯಾಲರಿ ತಿನ್ನಬೇಕು ಎಂದು ಹೇಳುವುದೇಕೆ? ಕಡಿಮೆಯಾದರೆ ಕುಂದೇನು? ಹೆಚ್ಚಾದರೆ ಹಾಳಾಗುವುದೇನು? ಇವೆರಡಕ್ಕೂ ಆಹಾರ ವಿಜ್ಞಾನಿಗಳಲ್ಲಿ ಉತ್ತರವಿದೆ. ಬೆಳಗಿನ ಉಪಾಹಾರದಲ್ಲಿ ಒಳ್ಳೆಯ ಕ್ಯಾಲರಿಗಳು ತೀರಾ ಕಡಿಮೆಯಾದರೆ ದಿನವಿಡೀ ಆಯಾಸ, ಚೈತನ್ಯಹೀನತೆ ಕಾಡಬಹುದು. ಏಕಾಗ್ರತೆಯ ಕೊರತೆಯಾಗಿ ಮಾಡುವ ಕೆಲಸಗಳು ಫಲ ನೀಡದಿರಬಹುದು. ಹಾಗೆಂದು ಅಗತ್ಯಕ್ಕಿಂತ ಹೆಚ್ಚು ತಿನ್ನುವುದೂ ಸಮಸ್ಯೆಯೇ. ದೇಹದ ಚಯಾಪಚಯವನ್ನು ನಿಧಾನಗೊಳಿಸಿ, ಸೊಂಟದ ಸುತ್ತಳತೆಯನ್ನು ಹೆಚ್ಚಿಸುತ್ತದೆ. ದೇಹದ ತೂಕ ಹೆಚ್ಚಾಗಿ, ಬೇಡದ ಸಮಸ್ಯೆಗಳನ್ನೆಲ್ಲ ಕರೆದು ಗಂಟಿಕ್ಕಿಕೊಳ್ಳುವುದಕ್ಕೆ ಮೂಲವಾಗುತ್ತದೆ.

ಈ ಸುದ್ದಿಯನ್ನೂ ಓದಿ: Health Tips: ಚಳಿಗಾಲಕ್ಕಿರಲಿ ಬಿಸಿ ಬಿಸಿ ಗೆಣಸು