Monday, 26th February 2024

ಭಾರತೀಯ ಮುಸ್ಲಿಮರು, ಪಾಕಿಸ್ಥಾನಿ ಮುಸ್ಲಿಮರಿಗಿಂತ ಹೆಚ್ಚು ಸುರಕ್ಷಿತವಾಗಿದ್ದಾರೆ

ಜೈಪುರ : ಪ್ರಧಾನಿ ನರೇಂದ್ರ ಮೋದಿ ವಿರುದ್ದ ಪಾಕ್ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ನೀಡಿದ ಆಕ್ಷೇಪಾರ್ಹ ಹೇಳಿಕೆಯನ್ನು ಅಖಿಲ ಭಾರತ ಸೂಫಿ ಸಜ್ಜದನಾಶಿನ್ ಕೌನ್ಸಿಲ್ ಅಧ್ಯಕ್ಷ ನಾಸಿರುದ್ದೀನ್ ಚಿಸ್ತಿ ಶನಿವಾರ ಖಂಡಿಸಿದ್ದಾರೆ.

ಬಿಲಾವಲ್ ಭುಟ್ಟೋ ಬಳಸಿದ ಭಾಷೆ ಅವರನ್ನು ಮಾತ್ರವಲ್ಲದೆ ಅವರ ಇಡೀ ರಾಷ್ಟ್ರದ ಸ್ಥಾನವನ್ನು ಕೆಳಗಿಳಿಸಿದೆ ಎಂದು ನಾಸಿರುದ್ದೀನ್ ಚಿಸ್ತಿ ಹೇಳಿದ್ದಾರೆ.

ನಮ್ಮ ಪ್ರಧಾನಿ ಮತ್ತು ನಮ್ಮ ತಾಯ್ನಾಡಿನ ವಿರುದ್ಧ ಪಾಕಿಸ್ಥಾನದ ವಿದೇಶಾಂಗ ಸಚಿವರು ಬಳಸಿರುವ ವಿಷಕಾರಿ ಭಾಷೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ಭಯೋ ತ್ಪಾದಕ ಒಸಾಮಾ ಬಿನ್ ಲಾಡೆನ್ ಪಾಕ್ ಸರ್ಕಾರದ ಮೂಗಿನ ಕೆಳಗೆ ಅಮೆರಿಕನ್ ಪಡೆಗಳಿಂದ ಪಾಕ್ ನಲ್ಲೇ ಅಂತ್ಯಗೊಂಡಿದ್ದಾನೆ ಎಂಬುದನ್ನು ಬಿಲಾವಲ್ ಭುಟ್ಟೋ ಮರೆತಿದ್ದಾರೆ ಎಂದು ಚಿಸ್ತಿ ಹೇಳಿದ್ದಾರೆ.

”ಭಾರತೀಯ ಮುಸ್ಲಿಮರು, ಪಾಕಿಸ್ಥಾನಿ ಮುಸ್ಲಿಮರಿಗಿಂತ ಹೆಚ್ಚು ಸುರಕ್ಷಿತ ಮತ್ತು ಉತ್ತಮ ಸ್ಥಿತಿಯಲ್ಲಿದ್ದಾರೆ ಎಂಬುದನ್ನು ಪಾಕಿಸ್ಥಾನ ನೆನಪಿನಲ್ಲಿಟ್ಟುಕೊಳ್ಳಬೇಕು” ಎಂದು ಚಿಸ್ತಿ ಹೇಳಿದ್ದಾರೆ.

”ಭಾರತವನ್ನು ತನ್ನ ಅಸ್ಥಿರ ದೇಶದೊಂದಿಗೆ ಹೋಲಿಸಬಾರದು, ಏಕೆಂದರೆ ಭಾರತೀಯ ಸಂವಿಧಾನವು ಎಲ್ಲರಿಗೂ ಧರ್ಮದ ಸ್ವಾತಂತ್ರ್ಯವನ್ನು ಖಾತರಿಪಡಿಸುತ್ತದೆ” ಎಂದು ಚಿಸ್ತಿ ಹೇಳಿದ್ದಾರೆ.

ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಬಿಲಾವಲ್ ಭುಟ್ಟೋ ಜರ್ದಾರಿ, “ಒಸಾಮಾ ಬಿನ್ ಲಾಡೆನ್ ಸತ್ತಿದ್ದರೂ, ಗುಜರಾತ್‌ನ ಕಟುಕ ಇನ್ನೂ ಜೀವಂತವಾಗಿದ್ದಾನೆ. ಆತ ಭಾರತದ ಪ್ರಧಾನಿಯಾಗುವ ಮೊದಲು ಅಮೆರಿಕಕ್ಕೆ ಪ್ರವೇಶಿಸುವುದನ್ನು ನಿಷೇಧಿಸಲಾಗಿತ್ತು” ಎಂದು ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದ್ದರು.

 

Read E-Paper click here

error: Content is protected !!