Monday, 25th November 2024

Jammu Kashmir Election: ಇಂದು ಜಮ್ಮು- ಕಾಶ್ಮೀರ 2ನೇ ಹಂತದ ಚುನಾವಣೆ, 26 ಕ್ಷೇತ್ರಗಳಲ್ಲಿ ಮತದಾನ

jammu kashmir election

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu Kashmir Election, Jammu Kashmir Assembly Election) ವಿಧಾನಸಭೆ ಚುನಾವಣೆಯ 2ನೇ ಹಂತದ ಮತದಾನ (voting) ಇಂದು ನಡೆಯಲಿದೆ. ಆರು ಜಿಲ್ಲೆಗಳ ಒಟ್ಟು 26 ವಿಧಾನಸಭಾ ಕ್ಷೇತ್ರಗಳಲ್ಲಿ 239 ಅಭ್ಯರ್ಥಿಗಳ ಭವಿಷ್ಯವನ್ನು ಇಂದು ಮತದಾರರು ನಿರ್ಧರಿಸಲಿದ್ದಾರೆ.

ಮತದಾನ ಬೆಳಗ್ಗೆ 7 ಗಂಟೆಗೆ ಆರಂಭವಾಗಿ ಸಂಜೆ 6 ಗಂಟೆಗೆ ಕೊನೆಗೊಳ್ಳಲಿದೆ. ಆರು ಜಿಲ್ಲೆಗಳಲ್ಲಿ 25 ಲಕ್ಷ ಮತದಾರರು ಮತ ಚಲಾಯಿಸಲಿದ್ದಾರೆ. ಕಾಶ್ಮೀರ ಕಣಿವೆಯಲ್ಲಿ ಮೂರು ಮತ್ತು ಜಮ್ಮು ವಿಭಾಗದಲ್ಲಿ ಮೂರು ಜಿಲ್ಲೆಗಳಿವೆ. ಐದು ವರ್ಷಗಳ ಹಿಂದೆ ವಿಶೇಷ ಸ್ಥಾನಮಾನ ಮತ್ತು ರಾಜ್ಯ ಸ್ಥಾನಮಾನವನ್ನು ರದ್ದುಪಡಿಸಿದ ನಂತರ ಪ್ರಕ್ಷುಬ್ಧ ಪ್ರದೇಶದಲ್ಲಿ ನಡೆಯುತ್ತಿರುವ ಮೊದಲ ವಿಧಾನಸಭಾ ಚುನಾವಣೆ ಇದಾಗಿದೆ.

1) ಮತದಾನವನ್ನು ಶಾಂತಿಯುತವಾಗಿ ನಡೆಸಲು ಎಲ್ಲಾ ಪ್ರದೇಶಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಅನೇಕ ಅಸೆಂಬ್ಲಿ ಕ್ಷೇತ್ರಗಳು ಪಾಕಿಸ್ತಾನದೊಂದಿಗಿನ ಗಡಿ ನಿಯಂತ್ರಣ ರೇಖೆಯ (LoC) ಉದ್ದಕ್ಕೂ ಇವೆ. ಭಾರತ ಮತ್ತು ಪಾಕ್‌ ಗಡಿಯಾಚೆಗಿನ ಶೆಲ್ ದಾಳಿಯ ಸಾಧ್ಯತೆಗಳು ಈ ಬಾರಿ ಕಡಿಮೆ ಎಂದು ಅಧಿಕಾರಿಗಳು ಊಹಿಸಿದ್ದಾರೆ.

2) ಆರು ಜಿಲ್ಲೆಗಳ ಪೈಕಿ ಮೂರು – ರಿಯಾಸಿ, ರಜೌರಿ ಮತ್ತು ಪೂಂಚ್-ಕಳೆದ ಮೂರು ವರ್ಷಗಳಲ್ಲಿ ಒಂದರ ಹಿಂದೊಂದು ಭಯೋತ್ಪಾದಕ ದಾಳಿಗೆ ತುತ್ತಾಗಿವೆ.

3) ಹನ್ನೊಂದು ಸೀಟುಗಳು ಅತ್ಯಂತ ಸೂಕ್ಷ್ಮವಾಗಿವೆ. 2021 ರಿಂದ ಹನ್ನೆರಡು ಭಯೋತ್ಪಾದಕ ದಾಳಿಗಳು ನಡೆದಿವೆ. ಇತ್ತೀಚೆಗೆ ರಿಯಾಸಿಯಲ್ಲಿ ತೀರ್ಥಯಾತ್ರೆ ಬಸ್ ಮೇಲೆ ಕ್ರೂರ ದಾಳಿಯಾಗಿದೆ.

4) ಹೊಸ ಶಾಸಕರನ್ನು ಆಯ್ಕೆ ಮಾಡಲಿರುವ 26 ಕ್ಷೇತ್ರಗಳೆಂದರೆ- ಕಂಗನ್ (ST), ಗಂದರ್‌ಬಾಲ್, ಹಜರತ್‌ಬಾಲ್, ಖಾನ್ಯಾರ್, ಹಬ್ಬಕದಲ್, ಲಾಲ್ ಚೌಕ್, ಚನ್ನಪೋರಾ, ಝದಿಬಲ್, ಈದ್ಗಾ, ಸೆಂಟ್ರಲ್ ಶಾಲ್ತೆಂಗ್, ಬುಡ್ಗಾಮ್, ಬೀರ್ವಾ, ಖಾನ್ಸಾಹಿಬ್, ಚ್ರಾರ್-ಇ-ಶರೀಫ್, ಚದೂರ, ಗುಲಾಬ್‌ಗಢ (ST), ರಿಯಾಸಿ, ಶ್ರೀ ಮಾತಾ ವೈಷ್ಣೋ ದೇವಿ, ಕಲಾಕೋಟೆ – ಸುಂದರ್‌ಬನಿ, ನೌಶೇರಾ, ರಾಜೌರಿ (ST), ಬುಧಾಲ್ (ST), ತನ್ನಮಂಡಿ (ST), ಸುರನ್‌ಕೋಟೆ (ST), ಪೂಂಚ್ ಹವೇಲಿ ಮತ್ತು ಮೆಂಧರ್ (ST).

5) ಹಂತ 2 ರಲ್ಲಿ ಪ್ರಮುಖ ಅಭ್ಯರ್ಥಿಗಳು ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಬಿಜೆಪಿ ಜೆ & ಕೆ ಮುಖ್ಯಸ್ಥ ರವೀಂದರ್ ರೈನಾ ಮತ್ತು ಜೆಕೆಪಿಸಿಸಿ ಅಧ್ಯಕ್ಷ ತಾರಿಕ್ ಹಮೀದ್ ಕರ್ರಾ.

6) ಒಮರ್ ಅಬ್ದುಲ್ಲಾ ಅವರು ಗಂದರ್ಬಲ್ ಮತ್ತು ಬುದ್ಗಾಮ್ ಎಂಬ ಎರಡು ವಿಧಾನಸಭಾ ಕ್ಷೇತ್ರಗಳಿಂದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದರೆ, ಕರ್ರಾ ಅವರು ಸೆಂಟ್ರಲ್ ಶಾಲ್ಟೆಂಗ್‌ನಿಂದ ಸ್ಪರ್ಧಿಸುತ್ತಿದ್ದಾರೆ. ಜೆ & ಕೆ ಬಿಜೆಪಿ ಮುಖ್ಯಸ್ಥ ರವೀಂದರ್ ರೈನಾ ಅವರು 2014 ರಿಂದ ರಜೌರಿಯ ನೌಶೆರಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.

7) ಅತ್ಯಂತ ಶ್ರೀಮಂತ ಅಭ್ಯರ್ಥಿ J&K ಅಪ್ನಿ ಪಕ್ಷದ ಮುಖ್ಯಸ್ಥ ಅಲ್ತಾಫ್ ಬುಖಾರಿ. ಅವರ ಆಸ್ತಿ ₹165 ಕೋಟಿ ಮೀರಿದೆ. ಅವರು ಶ್ರೀನಗರದ ಚನ್ನಪೋರಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಪಿಡಿಪಿಯ ಮೊಹಮ್ಮದ್ ಇಕ್ಬಾಲ್ ಟ್ರಂಬೂ, ನ್ಯಾಷನಲ್ ಕಾನ್ಫರೆನ್ಸ್‌ನ ಮುಷ್ತಾಕ್ ಗುರು ಮತ್ತು ಬಿಜೆಪಿಯ ಹಿಲಾಲ್ ಅಹ್ಮದ್ ವಾನಿ ಅವರನ್ನು ಎದುರಿಸುತ್ತಿದ್ದಾರೆ.

8) ಪ್ರಚಾರ ಹೆಚ್ಚಾಗಿ ಭಯೋತ್ಪಾದನೆ, 370 ನೇ ವಿಧಿಯ ರದ್ದತಿ, ರಾಜ್ಯತ್ವದ ಮರುಸ್ಥಾಪನೆ ಮತ್ತು ಕಾಶ್ಮೀರ ವಿವಾದದ ಕುರಿತು ಪಾಕಿಸ್ತಾನದೊಂದಿಗೆ ಮಾತುಕತೆಯ ಪುನರಾರಂಭದ ಸುತ್ತ ಕೇಂದ್ರೀಕೃತವಾಗಿದ್ದವು.

9) ಮತದಾನವನ್ನು ವೀಕ್ಷಿಸಲು ಕೇಂದ್ರಾಡಳಿತ ಪ್ರದೇಶಕ್ಕೆ ಭೇಟಿ ನೀಡುವಂತೆ ಭಾರತ ಸರ್ಕಾರವು ವಿದೇಶಿ ರಾಜತಾಂತ್ರಿಕರ ನಿಯೋಗವನ್ನು ಆಹ್ವಾನಿಸಿದೆ.

ಇದನ್ನೂ ಓದಿ: BSF Personnel : ಜಮ್ಮು& ಕಾಶ್ಮೀರದಲ್ಲಿ ಬಸ್ ಕಂದಕಕ್ಕೆ ಉರುಳಿ 3 ಬಿಎಸ್ಎಫ್ ಸಿಬ್ಬಂದಿ ಸಾವು, 28 ಮಂದಿ ಗಾಯ