ನವದೆಹಲಿ: ಬದಲಾವಣೆ ಜಗದ ನಿಯಮ. ಹೀಗಾಗಿ ಹೊಸ ವರ್ಷ 2025ರಲ್ಲಿ ಜಗತ್ತು ಮತ್ತು ಭಾರತದಲ್ಲಿ ಯಾವೆಲ್ಲ ಬದಲಾವಣೆಗಳು ಆಗಲಿವೆ ಎಂಬ ಕುತೂಹಲ ಈಗ ಎಲ್ಲರಲ್ಲೂ ಇದೆ(Major Changes). ಆರ್ಥಿಕತೆ, ತಂತ್ರಜ್ಞಾನ, ಸಂಶೋಧನೆ, ರಾಜಕೀಯ, ಸಾಮಾಜಿಕ, ವಾಣಿಜ್ಯ, ಉದ್ಯಮ ಮುಂತಾದ ವಲಯಗಳಲ್ಲಿ ನಡೆಯಲಿರುವ ಬದಲಾವಣೆಗಳ ಬಗ್ಗೆ ತಿಳಿಯೋಣ.
ಆರ್ಥಿಕತೆಯಲ್ಲಿ ಜಪಾನನ್ನು ಹಿಂದಿಕ್ಕಲಿದೆಯೇ ಭಾರತ?
ಜಿಡಿಪಿ ಲೆಕ್ಕಾಚಾರದಲ್ಲಿ ಭಾರತ ಈಗ ವಿಶ್ವದ 5ನೇ ಅತಿ ದೊಡ್ಡ ಆರ್ಥಿಕತೆಯಾಗಿದೆ. ವಿಶ್ವದಲ್ಲೇ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಪ್ರಮುಖ ಆರ್ಥಿಕ ಶಕ್ತಿಯಾಗಿದೆ. ಈಗ ಭಾರತದ ಜಿಡಿಪಿ ಮೌಲ್ಯ 3 ಲಕ್ಷದ 89 ಸಾವಿರ ಕೋಟಿ ಡಾಲರ್ ಆಗಿದೆ. 2025ರಲ್ಲಿ ಭಾರತವು ಜಪಾನನ್ನು ಹಿಂದಿಕ್ಕಿ 4ನೇ ಅತಿ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮುವ ನಿರೀಕ್ಷೆ ಇದೆ. ಆಗ ಐತಿಹಾಸಿಕ ಸಾಧನೆಯಾಗಲಿದೆ.
ಸೆನ್ಸೆಕ್ಸ್ ಎಕ್ಸ್‌ಪೈರಿ ದಿನ ಬದಲಾವಣೆ:
ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಸೆನ್ಸೆಕ್ಸ್, ಬ್ಯಾಂಕೆಕ್ಸ್ ಮತ್ತು ಸೆನ್ಸೆಕ್ಸ್ 50 ಇಂಡೆಕ್ಸ್‌ಗಳ, ಪ್ರತಿ ವಾರದ ಡಿರೈವಟೀಸ್ ಕಾಂಟ್ರ್ಯಾಕ್ಟ್‌ಗಳ ಎಕ್ಸ್‌ಪೈರಿ ದಿನಗಳಲ್ಲಿ ಬದಲಾವಣೆಯಾಗಲಿದೆ. 2025ರ ಜನವರಿ 1ರಿಂದ ಪ್ರತಿ ಶುಕ್ರವಾರದ ಬದಲಿಗೆ ಗುರುವಾರಕ್ಕೆ ಸೆನ್ಸೆಕ್ಸ್ ವೀಕ್ಲಿ ಕಾಂಟ್ರ್ಯಾಕ್ಟ್‌ಗಳು ಎಕ್ಸ್‌ಪೈರ್ ಆಗಲಿದೆ. ಸೆನ್ಸೆಕ್ಸ್, ಬ್ಯಾಂಕೆಕ್ಸ್ ಮತ್ತು ಸೆನ್ಸೆಕ್ಸ್ 50ಯ ಮಾಸಿಕ ಕಾಂಟ್ರ್ಯಾಕ್ಟ್‌ಗಳು 2025ರ ಜನವರಿ 1ರಿಂದ ತಿಂಗಳ ಕೊನೆಯ ಗುರುವಾರ ಎಕ್ಸ್‌ಪೈರ್ ಆಗಲಿದೆ. ಈಗ ಇವುಗಳ ಎಕ್ಸ್‌ಪೈರಿ ದಿನಗಳು ಅನುಕ್ರಮವಾಗಿ ಕೊನೆಯ ಶುಕ್ರವಾರ, ಕೊನೆಯ ಸೋಮವಾರ ಮತ್ತು ಗುರುವಾರ ಆಗಿದೆ.
ವಂದೇ ಭಾರತ್ ಸ್ಲೀಪರ್ ರೈಲು:
ರೈಲ್ವೆ ಇಲಾಖೆಯು 10 ಹೊಸ ವಂದೇ ಭಾರತ್ ಸ್ಲೀಪರ್ ರೈಲುಗಳನ್ನು 2025ರಲ್ಲಿ ಬಿಡುಗಡೆ ಮಾಡುವ ನಿರೀಕ್ಷೆ ಇದೆ. ಪ್ರಯಾಣಿಕರಿಗೆ ವಿಶ್ವದರ್ಜೆಯ ಸೌಲಭ್ಯಗಳು ಈ ರೈಲಿನಲ್ಲಿ ಸಿಗಲಿವೆ. ಬೆಂಗಳೂರಿನ ನಮ್ಮ ಮೆಟ್ರೊ ಹಳದಿ ಮಾರ್ಗದ ಮೆಟ್ರೊ ರೈಲಿನ ಸಂಚಾರ 2025ರ ಜನವರಿಯಲ್ಲಿ ಆರಂಭವಾಗಲಿದೆ. ಆರ್ ವಿ ರಸ್ತೆಯಿಂದ ಬೊಮ್ಮಸಂದ್ರದ ತನಕ 19 ಕಿಲೋಮೀಟರ್ ಉದ್ದದ ಮಾರ್ಗ ಇದಾಗಿದ್ದು, ಲಕ್ಷಾಂತರ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ಎಟಿಎಂನಲ್ಲಿ ಸಿಗಲಿದೆ ಪಿಎಫ್ ದುಡ್ಡು:
ಉದ್ಯೋಗಿಗಳ ಭವಿಷ್ಯನಿಧಿ ಅಥವಾ ಇಪಿಎಫ್‌ಒ ಸಂಸ್ಥೆಯು ಮುಂದಿನ ವರ್ಷ ಜೂನ್‌ನಲ್ಲಿ ಇಪಿಎಫ್‌ಒ 3.o ಅನ್ನು ಜಾರಿಗೊಳಿಸುವ ನಿರೀಕ್ಷೆ ಇದೆ. ಪಿಎಫ್‌ಗೆ ಸಂಬಂಧಿಸಿ ಇದು ಕ್ರಾಂತಿಕಾರಕ ಸುಧಾರಣೆಯಾಗಲಿದ್ದು, ಮುಂಬರುವ ದಿನಗಳಲ್ಲಿ ಎಟಿಎಂ ಮೂಲಕ ನೇರವಾಗಿ ಪಿಎಫ್ ದುಡ್ಡನ್ನು ವಿತ್ ಡ್ರಾವಲ್ ಮಾಡುವ ವ್ಯವಸ್ಥೆಯನ್ನು ಪಿಎಫ್‌ದಾರರಿಗೆ ಸರ್ಕಾರ ಒದಗಿಸುವ ಸಾಧ್ಯತೆ ಇದೆ. ಪ್ರಸ್ತುತ ಪಿಎಫ್ ವಿತ್ ಡ್ರಾವಲ್ಸ್ ವಿಷಯದಲ್ಲಿ ಉಂಟಾಗುತ್ತಿರುವ ನಾನಾ ಅಡಚಣೆಗಳು ಇದರಿಂದ ದೂರವಾಗಲಿದೆ.
ಯುಪಿಐ 123 ಪೇ ಸೇವೆಯಲ್ಲಿ ಪೇಮೆಂಟ್ ಮಿತಿ ವಿಸ್ತರಣೆ:
ಜನರಿಗೆ ಫೀಚರ್ ಫೋನ್ ನೆರವಿನಿಂದ, ಇಂಟರ್‌ನೆಟ್ ಕನೆಕ್ಷನ್ ಇಲ್ಲದಿದ್ದರೂ, ಡಿಜಿಟಲ್ ಪೇಮೆಂಟ್‌ಗೆ ಅವಕಾಶ ನೀಡುವ ಯುಪಿಐ123 ಪೇ ಸೇವೆಯಲ್ಲಿ ಪ್ರತಿ ಹಣಕಾಸು ವರ್ಗಾವಣೆಯ ಮಿತಿಯನ್ನು ಜನವರಿ 1ರಿಂದ 5,000 ರೂ.ಗಳಿಂದ 10,000 ರೂ.ಗೆ ವಿಸ್ತರಿಸಲಾಗಿದೆ.
ಕಾರುಗಳ ದರ ಏರಿಕೆ:
ಆಟೊಮೊಬೈಲ್ ವಲಯದ ಹಲವಾರು ಪ್ರಮುಖ ಕಂಪನಿಗಳು ಜನವರಿಯಿಂದ ತಮ್ಮ ಕಾರುಗಳ ದರದಲ್ಲಿ 3%ರಿಂದ 4% ತನಕ ದರ ಹೆಚ್ಚಳಕ್ಕೆ ನಿರ್ಧರಿಸಿವೆ. ಮಾರುತಿ ಸುಜುಕಿ, ಹುಂಡೈ, ಮಹೀಂದ್ರಾ, ಮರ್ಸಿಡಿಸ್ ಬೆನ್ಜ್ ಕಾರುಗಳ ದರದಲ್ಲಿ ಏರಿಕೆಯಾಗಲಿದೆ. ಎಂಟ್ರಿ ಲೆವೆಲ್‌ನಿಂದ ಲಕ್ಸುರಿ ವಾಹನಗಳ ತನಕ ದರ ಏರಿಕೆಯಾಗಲಿದೆ.
ಚಿನ್ನ, ಬೆಳ್ಳಿ ವೇಸ್ಟೇಜ್ ನಿಯಮ ಪರಿಷ್ಕರಣೆ:
ಸರ್ಕಾರ ಜನವರಿ 1ರಿಂದ ರಫ್ತು ಉದ್ದೇಶದ ಚಿನ್ನ, ಬೆಳ್ಳಿ ಮತ್ತು ಪ್ಲಾಟಿನಂ ಅಭರಣಗಳ ವೇಸ್ಟೇಜ್ ಮಿತಿ ಕುರಿತ ನಿಯಮವನ್ನು ಪರಿಷ್ಕರಣೆಗೊಳಿಸಿದೆ. ಹ್ಯಾಂಡ್‌ಮೇಡ್ ಚಿನ್ನ ಮತ್ತು ಪ್ಲಾಟಿನಂ ಆಭರಣಗಳ ವೇಸ್ಟೇಜ್ ಮಿತಿಯನ್ನು 2.25%ಕ್ಕೆ ಇಳಿಸಲಾಗುತ್ತಿದೆ. ಬೆಳ್ಳಿ ಆಭರಣಗಳಿಗೆ 3%ಕ್ಕೆ ಕಡಿತಗೊಳಿಸಲಾಗಿದೆ.
ಎಐ ತಂತ್ರಜ್ಞಾನದಲ್ಲಿ ಹೊಸ ಟ್ರೆಂಡ್:
ತಂತ್ರಜ್ಞಾನ ವಲಯದಲ್ಲೂ 2025ರಲ್ಲಿ ಹೊಸ ಟ್ರೆಂಡ್‌ಗಳು ಬೆಳವಣಿಗೆಯಾಗುವ ನಿರೀಕ್ಷೆ ಇದೆ. ಜನರೇಟಿವ್ ಎಐ, ವರ್ಚುವಲ್ ರಿಯಾಲಿಟಿ, ಆಗ್ಯುಮೆಂಟೆಡ್ ರಿಯಾಲಿಟಿ, ಇಂಟರ್‌ನೆಟ್ ಆಫ್ ಥಿಂಗ್ಸ್, ಬ್ಲಾಕ್ ಚೈನ್, ಗ್ರೀನ್ ಎನರ್ಜಿ ಟೆಕ್ನಾಲಜಿ ಇತ್ಯಾದಿ ತಂತ್ರಜ್ಞಾನಗಳಲ್ಲಿ ಹೊಸ ಬದಲಾವಣೆ ಮತ್ತು ಸುಧಾರಣೆ ನಿರೀಕ್ಷಿಸಲಾಗಿದೆ.
ಈ ಸುದ್ದಿಯನ್ನೂ ಓದಿ: Money Tips: CIBIL Score Vs CIBIL Report; ಸಾಲ ಪಡೆಯಲು ಯಾವುದು ಮುಖ್ಯ?