Tuesday, 3rd December 2024

Murder Case: ಕ್ಯಾನ್ಸರ್‌ ರೋಗಿ ತಾಯಿಗೆ ತಪ್ಪು ಔಷಧ; ಡಾಕ್ಟರ್‌ಗೆ ಇರಿದ ಮಗ!

Murder Case

ಚೆನ್ನೈ: ಚೆನ್ನೈನ ಸರ್ಕಾರಿ ಆಸ್ಪತ್ರೆಯಲ್ಲಿ ತಾಯಿಗೆ ತಪ್ಪಾಗಿ ಔಷಧಗಳನ್ನು ನೀಡಿದ್ದಾರೆ ಎಂಬ ಸಿಟ್ಟಿನಿಂದ ಮಗನೊಬ್ಬ ವೈದ್ಯರೊಬ್ಬರಿಗೆ ಚಾಕುವಿನಿಂದ(Murder Case) ಅನೇಕ ಬಾರಿ ಇರಿದ ಘಟನೆ ನಡೆದಿದೆ. ವೈದ್ಯರಿಗೆ ಚಾಕುವಿನಿಂದ ಇರಿದು ಆತ ಶಾಂತಚಿತ್ತದಿಂದ ಹೊರಗೆ ಬಂದಿದ್ದಾನೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಆರೋಪಿಯನ್ನು ವಿಘ್ನೇಶ್ ಎಂಬುದಾಗಿ ಗುರುತಿಸಲಾಗಿದೆ. ಹಲ್ಲೆಗೊಳಗಾದ ವೈದ್ಯ ಬಾಲಾಜಿ ಜಗನ್ನಾಥನ್ ಎನ್ನಲಾಗಿದೆ. ಆರೋಪಿ ವಿಘ್ನೇಶ್, ವೈದ್ಯ ಬಾಲಾಜಿ ಜಗನ್ನಾಥನ್ ಅವರ ಬಳಿ ಈ ಹಿಂದೆ  ಚಿಕಿತ್ಸೆ ಪಡೆದಿದ್ದ ರೋಗಿಗಳಲ್ಲಿ ಒಬ್ಬರ ಮಗ ಎಂಬುದಾಗಿ ತಿಳಿದು ಬಂದಿದೆ. ಕಲೈನಾರ್ ಶತಮಾನೋತ್ಸವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ.

ವೈರಲ್ ವಿಡಿಯೊದಲ್ಲಿ ವಿಘ್ನೇಶ್ ವೈದ್ಯರನ್ನು ಚಾಕುವಿನಿಂದ ಇರಿದ ನಂತರ ಆಸ್ಪತ್ರೆಯ ಕಾರಿಡಾರ್‌ನಲ್ಲಿ ಶಾಂತವಾಗಿ ನಡೆದುಕೊಂಡು ಬರುತ್ತಿರುವುದು ಕಾಣಿಸುತ್ತಿದೆ. ಆರೋಪಿ ವಿಘ್ನೇಶ್ ಹಲ್ಲೆಗೆ ಬಳಸಿದ ಚಾಕುವನ್ನು ರಹಸ್ಯವಾಗಿ ಹಿಡಿದುಕೊಂಡು, ನಂತರ ಅದನ್ನು ಒರೆಸಿ ತನ್ನ ಬಲಕೈಯಲ್ಲಿ ಅಡಗಿಸಿಟ್ಟುಕೊಂಡಿದ್ದನಂತೆ. ನಂತರ ಅವನು ಶಾಂತವಾಗಿ ನಡೆದುಕೊಂಡು ಬಂದು ಅಲ್ಲಿ ಒಂದು ಕಡೆ ಚಾಕುವನ್ನು ಎಸೆದಿದ್ದಾನೆ. ಅವನ ಹಿಂದಿನಿಂದ ವ್ಯಕ್ತಿಯೊಬ್ಬರು ಕೂಗುತ್ತಾ, “ಆತ ವೈದ್ಯರ ಮೇಲೆ ಹಲ್ಲೆ ಮಾಡಿದ್ದಾನೆ, ಅವನನ್ನು ಹಿಡಿಯಿರಿ” ಎಂದು ಓಡಿ ಬಂದಿದ್ದಾರೆ. ಆಗ ಭದ್ರತಾ ಸಿಬ್ಬಂದಿ ವಿಘ್ನೇಶ್ ಕಡೆಗೆ ಬೆರಳು ತೋರಿಸುತ್ತಾ, ಅವನ ಬಳಿ ಓಡಿ ಬಂದು ಹಿಡಿದುಕೊಂಡಿದ್ದಾರೆ. ಆದರೆ ವಿಘ್ನೇಶ್ ಪರಾರಿಯಾಗಲು ಭಾರಿ ಪ್ರಯತ್ನ ನಡೆಸಿದ್ದಾನೆ. ನಂತರ ಪೊಲೀಸರು ಅವನನ್ನು ಹಿಡಿದು ಬಂಧಿಸಿದ್ದಾರೆ. ಆತನನ್ನು ಸೈದಾಪೇಟೆ ನ್ಯಾಯಾಲಯದ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದ್ದು, ನಂತರ 15 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

ಇದನ್ನೂ ಓದಿ:ಹಾವೆಂದರೆ ಭಯ ಪಡೋರು ಇಲ್ಲೊಮ್ಮೆ ನೋಡಿ; ದೈತ್ಯ ಅನಕೊಂಡ ಎತ್ತಿಕೊಂಡು ಯುವಕನ ಸಾಹಸ! ವಿಡಿಯೊ ಇದೆ

ಡಾ. ಜಗನ್ನಾಥ್ ಅವರು ಪ್ರಸಿದ್ಧ ಕ್ಯಾನ್ಸರ್ ತಜ್ಞ ಮತ್ತು ಸರ್ಕಾರಿ ಕಲೈನಾರ್ ಶತಮಾನೋತ್ಸವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಶಿಕ್ಷಕರಾಗಿದ್ದಾರೆ. ತನ್ನ ತಾಯಿಯ ಚಿಕಿತ್ಸೆಗೆ ಸಂಬಂಧಿಸಿದ ವಿಚಾರದ ಬಗ್ಗೆ ಮಾತನಾಡುವ ಸಮಯದಲ್ಲಿ ವಿಘ್ನೇಶ್ ಹೊರರೋಗಿ ರೂಂನೊಳಗೆ ವೈದ್ಯರನ್ನು ಅನೇಕ ಬಾರಿ ಇರಿದಿದ್ದಾನೆ. ವೈದ್ಯರು ತಮ್ಮ ತಾಯಿಗೆ ತಪ್ಪು ಔಷಧಿಗಳನ್ನು ಸೂಚಿಸಿದ್ದಾರೆ ಎಂದು ಶಂಕಿಸಿ ಆತ ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಈ ದಾಳಿಯಲ್ಲಿ ಡಾ.ಜಗನ್ನಾಥ್ ಅವರಿಗೆ ಏಳು ಇರಿತದ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಮತ್ತು ಅವರ ಆರೋಗ್ಯ ಸ್ಥಿರವಾಗಿದೆ.