Sunday, 22nd December 2024

Nelamangala Accident: ವಿಶ್ವದ ಅತ್ಯಂತ ಸುರಕ್ಷಿತ ಕಾರೂ ಆರು ಜೀವ ಉಳಿಸಲಿಲ್ಲ!ವೋಲ್ವೋ XC90 ಒಂದು ಕೋಟಿಯ ಕಾರು!

Nelamangala Accident:‌ Is Safe Car Enough? Volvo Crash That Killed CEO, Family Sparks Big Question

ಬೆಂಗಳೂರು: ಭಾರತದ ರಸ್ತೆಗಳಲ್ಲಿ ಎಂಥ ಪ್ರೀಮಿಯಮ್‌ ಕಾರುಗಳು ಅಥವಾ ಐಷಾರಾಮಿ ಕಾರುಗಳೂ ಸುರಕ್ಷಿತವಲ್ಲ ಎನ್ನುವುದನ್ನು ನೆಲಮಂಗಲ ಹೆದ್ದಾರಿಯಲ್ಲಿ (Nelamangala Accident) ಶನಿವಾರ ನಡೆದ ಭೀಕರ ಅಪಘಾತ ಸಾರಿ ಹೇಳಿದೆ.

ರಾಷ್ಟ್ರೀಯ ಅಥವಾ ರಾಜ್ಯ ಹೆದ್ದಾರಿಗಳಲ್ಲಿ ಸುರಕ್ಷತಾ ಕ್ರಮಗಳು ಕಟ್ಟು ನಿಟ್ಟಾಗಿ ಅಳವಡಿಸಿಲ್ಲವಾದರೆ ನೀವು ಎಷ್ಟೇ ಸುರಕ್ಷತಾ ಕಾರುಗಳು ಅಥವಾ ಪ್ರೀಮಿಯಮ್‌ ಕಾರುಗಳನ್ನು ಖರೀದಿಸಿದರೂ ಯಾವುದೇ ಪ್ರಯೋಜನವಿಲ್ಲ. ಇದಕ್ಕೆ ಉತ್ತಮ ಉದಾಹರಣೆ ಡಿಸೆಂಬರ್‌ 21 ರಂದು ನೆಲಮಂಗಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ್ದ ಭೀಕರ ಅಫಘಾತ!

ಶನಿವಾರ ಬೆಳಗ್ಗೆ ಸಾಫ್ಟವೇರ್‌ ಕಂಪನಿಯೊಂದರ ಸಿಇಒ ಚಂದ್ರಮ್‌ ತಮ್ಮ ಕುಟುಂಬ ಸಮೇತರಾಗಿ ಮಧ್ಯಪ್ರದೇಶದ ತಮ್ಮ ತವರೂರಿಗೆ ಇತ್ತೀಚೆಗೆ ಖರೀದಿಸಿದ್ದ ಅತ್ಯಾಧುನಿಕ ವೋಲ್ವೋ XC90 ಕಾರಿನಲ್ಲಿ ಪ್ರಯಾಣಿಸಿದ್ದರು. ಇದು ವಿಶ್ವದ ಅತ್ಯಂತ ಸುರಕ್ಷಿತ ಕಾರು ಎಂಬ ಹೇಳಲಾಗುತ್ತಿತ್ತು. ದುರದೃಷ್ಟವಶಾತ್‌ ನೆಲಮಂಗಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಂಟೇನರ್‌ ಟ್ರಕ್‌ ಡಿವೈಡರ್‌ ದಾಟಿ ವೋಲ್ವೋ ಕಾರಿನ ಮೇಲೆ ಅಚಾನಕ್‌ ಆಗಿ ಉರುಳಿ ಬಿದ್ದಿತ್ತು. ಇದರ ಪರಿಣಾಮ ಕಾರು ಅಪ್ಪಚ್ಚಿಯಾಗಿ, ಐಎಎಸ್‌ಟಿ ಸಾಫ್ಟ್‌ವೇರ್‌ ಕಂಪನಿಯ ಸಿಇಒ ಸೇರಿದಂತೆ ಅವರ ಕುಟುಂಬದ ಆರು ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದರು.

ಕಾರಿನ ಮೇಲೆ ಕಂಟೇನರ್‌ ಟ್ರಕ್‌ ಉರುಳಿದ್ದ ಫೋಟೋಗಳು ಹಾಗೂ ವಿಡಿಯೊಗಳು ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದ್ದವು. ಇದನ್ನು ನೋಡಿದ್ದ ಹಲವರು ವೋಲ್ವೋ ಕಾರಿನ ಸುರಕ್ಷತೆ ಬಗ್ಗೆ ಪ್ರಶ್ನೆ ಮಾಡಿದ್ದರೆ, ಇನ್ನು ಕೆಲವರು ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ವಿಶ್ವದ ಅತ್ಯಂತ ಸುರಕ್ಷತಾ ಕಾರಿಗೇ ಈ ರೀತಿಯಾಗಿದೆ, ಇನ್ನು ಮಾರುತಿ ಸುಜುಕಿ, ಹುಂಡೈ, ಮಹೀಂದ್ರಾ ನಂತಹ ಕಾರುಗಳಾಗಿದ್ದರೆ ಪರಿಸ್ಥಿತಿ ಯಾವ ರೀತಿ ಇರಬಹುದೆಂದು ಊಹಿಸಿ ಎಂದು ನೆಟ್ಟಿಗರು ಆಘಾತಕ್ಕೀಡಾಗಿದ್ದಾರೆ.

ಕಂಟೇನರ್‌ ಟ್ರಕ್‌ ಡ್ರೈವರ್‌ ಹೇಳಿದ್ದೇನು?

ಕಂಟೇನರ್‌ ಟ್ರಕ್‌ ಚಾಲಕ ಆರಿಫ್‌ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಯುತ್ತಿದ್ದಾರೆ ಹಾಗೂ ತಮ್ಮನ್ನ ಭೇಟಿಯಾಗಿದ್ದ ಸುದ್ದಿಗಾರರಿಗೆ ನಡೆದಿದ್ದ ದುರ್ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ.

“ನನ್ನ ಮುಂದೆ ಸಾಗುತ್ತಿದ್ದ ಕಾರು ತಕ್ಷಣ ಬ್ರೇಕ್‌ ಹಾಕಿತ್ತು. ಈ ವೇಳೆ ನಾನು ಕೂಡ ಬ್ರೇಕ್‌ ಹಾಕಿದ್ದರೆ, ಟ್ರಕ್‌ ಕಾರಿಗೆ ಡಿಕ್ಕಿ ಹೊಡೆಯುತ್ತಿತ್ತು. ಇದನ್ನು ತಪ್ಪಿಸುವ ಸಲುವಾಗಿ ಟ್ರಕ್‌ ಅನ್ನು ಬಲಬದಿಗೆ ತಿರುಗಿಸಲು ಪ್ರಯತ್ನಿಸಿದೆ. ಆದರೆ, ನಿಯಂತ್ರಣ ಕಳೆದುಕೊಂಡ ಟ್ರಕ್‌ ಡಿವೈಡರ್‌ ಮೇಲೆ ಹಾರಿತು. ಮೊದಲಿಗೆ ಹಾಲಿನ ಟ್ರಕ್‌ಗೆ ಡಿಕ್ಕಿ ಹೊಡೆದು ನಂತರ ವೋಲ್ವೋ ಕಾರಿನ ಮೇಲೆ ಉರುಳಿತ್ತು,” ಎಂದು ಆರಿಫ್‌ ಭಯಾನಕ ದುರ್ಘನೆಯನ್ನು ಬಿಚ್ಚಿಟ್ಟಿದ್ದರು.

ವೋಲ್ವೋ XC90 ಸೇಫ್ಟಿ ರೇಟಿಂಗ್ಸ್‌ ಏನು?

ನೆಲಮಂಗಳ ಭೀಕರ ಅಪಘಾತದಲ್ಲಿ ಸಿಲುಕಿದ್ದ ವೋಲ್ವೋ XC90 ಕಾರಿನ ಬೆಲೆ ಬೆಂಗಳೂರಿನಲ್ಲಿ ಬರೋಬ್ಬರಿ 1.20 ಕೋಟಿ ರೂ. ಗಳಿಗೂ ಜಾಸ್ತಿ ಇದೆ. ವಿಶ್ವದಲ್ಲಿಯೇ ಅತ್ಯಂತ ಸುರಕ್ಷತಾ ಕಾರುಗಳಲ್ಲಿ ವೋಲ್ವೋ ಅಗ್ರ ಸ್ಥಾನದಲ್ಲಿದೆ. ರಾಷ್ಟ್ರೀಯ ಹೆದ್ದಾರಿ ಸಂಚಾರ ಸುರಕ್ಷತಾ ಆಡಳಿತ (National Highway Traffic Safety Administration) ಪ್ರಾಧಿಕಾರವು ವೋಲ್ವೋ XC90 ಕಾರಿಗೆ 5 ಸ್ಟಾರ್‌ ರೇಟಿಂಗ್ಸ್‌ ನೀಡಿದೆ. ಐಷಾರಾಮಿ ಎಸ್‌ಯುವಿನಲ್ಲಿ ಏಳು ಏರ್‌ಬ್ಯಾಗ್‌ಗಳು, ಪ್ರಿ-ಟೆನ್ಷನರ್‌ಗಳು ಮತ್ತು ವಿಪ್ಲ್ಯಾಶ್ ರಕ್ಷಣೆ ಸೇರಿದಂತೆ ವೈಶಿಷ್ಟ್ಯಗಳನ್ನು ಹೊಂದಿದೆ. ಅಲ್ಲದೆ ಕ್ರಾಸ್-ಟ್ರಾಫಿಕ್ ಎಚ್ಚರಿಕೆಗಳೊಂದಿಗೆ ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಸಿಸ್ಟಮ್ ಮತ್ತು ಸ್ಟೀರ್ ಅಸಿಸ್ಟ್‌ನೊಂದಿಗೆ ಲೇನ್ ಕೀಪಿಂಗ್ ಸಹಾಯದಂತಹ ಬೆಂಬಲ ವೈಶಿಷ್ಟ್ಯಗಳನ್ನು ಅಳವಡಿಸಿಕೊಳ್ಳಲಾಗಿದೆ.

ವೋಲ್ವೋ XC90 ಕಾರಿನ ವೈಶಿಷ್ಟ್ಯಗಳು

ಇಂಧನ: ಪೆಟ್ರೋಲ್‌
ಇಂಜಿನ್‌ ಸಾಮರ್ಥ್ಯ: 1969 ಸಿಸಿ
ಟ್ರಾನ್ಸ್‌ಮಿಷನ್‌: ಆಟೋಮ್ಯಾಟಿಕ್‌
ಮೈಲೇಜ್‌: 11.04 ಕಿಮೀ
ಪವರ್‌:300 ಬಿಎಚ್‌ಪಿ
ಟಾರ್ಕ್‌: 420 ಎನ್‌ಎಂ

2023ರ ರಸ್ತೆ ಅಪಘಾತಗಳ ಸಾವಿನ ಅಂಕಿಅಂಶಗಳು

ಕೇಂದ್ರ ಸರ್ಕಾರದ ಅಂಕಿಅಂಶಗಳ ಪ್ರಕಾರ ಕಳೆದ ವರ್ಷ ದೇಶದಲ್ಲಿ ರಸ್ತೆ ಅಪಘಾತಗಳಿಂದ ಬರೋಬ್ಬರಿ 1.7 ಕೋಟಿ ಜನರು ಸಾವಿಗೀಡಾಗಿದ್ದಾರೆ. ಅಂದರೆ ಪ್ರತಿ ನಿತ್ಯ 470 ಮಂದಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅದರಲ್ಲಿಯೂ ರಸ್ತೆ ಅಪಘಾತದಲ್ಲಿ ಸಾವಿಗೀಡಾಗುತ್ತಿರುವ ಬಹುತೇಕ ಮಂದಿ 18 ರಿಂದ 34 ವಯಸ್ಸಿನ ಯುವಕರು ಎಂಬುದು ಬೇಸರದ ಸಂಗತಿಯಾಗಿದೆ.

ಈ ಸುದ್ದಿಯನ್ನು ಓದಿ: Accident: ಭದ್ರಾಪುರ ಬಳಿ ಭೀಕರ ಅಪಘಾತ