Sunday, 15th December 2024

ಕೇವಲ ಸ್ಥಾನ, ಸವಲತ್ತುಗಳನ್ನು ಅನುಭವಿಸುವುದಷ್ಟೇ ಅಲ್ಲ, ಆರೋಗ್ಯ, ಪರಿಸರದ ರಕ್ಷಣೆಯನ್ನೂ ಮಾಡಲಿ: ಎನ್‌ಜಿಟಿ ತರಾಟೆ

ನವದೆಹಲಿ: ಅಧಿಕಾರಿಗಳು ಸಾರ್ವಜನಿಕ ಆರೋಗ್ಯ ಮತ್ತು ಪರಿಸರವನ್ನು ರಕ್ಷಿಸಬೇಕೆ ಹೊರತು, ಕೇವಲ ಸ್ಥಾನ ಮತ್ತು ಸವಲತ್ತುಗಳನ್ನು ಅನುಭವಿಸುತ್ತಾ ಕೂರಬಾರದು ಎಂದು ಯಮುನಾ ನದಿಗೆ ಕಲುಷಿತ ನೀರು ಸೇರುವುದನ್ನು ತಡೆಯುವಲ್ಲಿ ವಿಫಲರಾಗಿರುವ ದೆಹಲಿ ಮತ್ತು ಉತ್ತರ ಪ್ರದೇಶದ ಅಧಿಕಾರಿಗಳನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಮಂಗಳವಾರ ತೀವ್ರ ತರಾಟೆಗೆ ತೆಗೆದುಕೊಂಡಿದೆ.

ಎನ್‌ಜಿಟಿ ನ್ಯಾಯಮೂರ್ತಿ ಆದರ್ಶ್ ಕುಮಾರ್ ಗೋಯೆಲ್ ನೇತೃತ್ವದ ನ್ಯಾಯಪೀಠವು, ಇದುವರೆಗೂ ಒಬ್ಬ ವ್ಯಕ್ತಿ ಯನ್ನೂ ಕೂಡ ವಿಚಾರಣೆಗೆ ಒಳಪಡಿಸಲಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದೆ.

ಅನೇಕ ಕೈಗಾರಿಕೆಗಳು ಸಂಸ್ಕರಿಸದ ಕಲುಷಿತ ನೀರನ್ನು ನಿರ್ಭಯದಿಂದ ಹೊರ ಹಾಕುತ್ತಿವೆ. ಅಪರಾಧ ಮಾಡಲು ದೇಶ ಮುಕ್ತವಾಗಿದೆಯೇ ಎಂದು ಅಧಿಕಾರಿ ಗಳನ್ನು ನ್ಯಾಯಮಂಡಳಿ ಪ್ರಶ್ನಿಸಿದೆ.

ನೋಯ್ಡಾ ಪ್ರಾಧಿಕಾರ, ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳು, ರಾಜ್ಯ ಪರಿಸರ ಪರಿಣಾಮ ಮೌಲ್ಯಮಾಪನ ಪ್ರಾಧಿಕಾರ (ಎಸ್‌ಇಐಎಎ), ಯುಪಿ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಯುಪಿ ಪೊಲೀಸರ ಶಾಸನಬದ್ಧ ಅಧಿಕಾರಗಳಿಗೆ ಯಾವುದೇ ಕೊರತೆ ಇಲ್ಲ, ಆದರೂ ನೊಯ್ಡಾ ಅಸಹಾಯಕವಾಗಿದೆ. ಏಕೆಂದರೆ ನಮಗೆ ಶಕ್ತಿ ಇಲ್ಲ ಎಂದು ನೊಯ್ಡಾ ಪರ ವಕೀಲರು ತಿಳಿಸಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.

ಮುಗ್ಧ ನಾಗರಿಕರ ದುಃಖದ ವೆಚ್ಚದಲ್ಲಿ ಕೇವಲ ಸ್ಥಾನ ಮತ್ತು ಸವಲತ್ತುಗಳನ್ನು ಅನುಭವಿಸುವುದಷ್ಟೇ ನಮ್ಮ ಕೆಲಸವಲ್ಲ ಎಂಬುದನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.’ ಎಂದು ಪೀಠ ಹೇಳಿದೆ.

ಇಲ್ಲಿಯವರೆಗೆ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸುವ ಮತ್ತು ಕಾನೂನು ಉಲ್ಲಂಘನೆ ಮಾಡಿದವರನ್ನು ಬಂಧಿಸುವ, ಸಂಸ್ಥೆಗಳನ್ನು ಕಪ್ಪುಪಟ್ಟಿಗೆ ಸೇರಿಸುವ, ಶಾಸನಬದ್ಧ ಒಪ್ಪಿಗೆಗಳನ್ನು ಹಿಂಪಡೆಯುವ, ಮರುಸ್ಥಾಪನೆ ಕ್ರಮಗಳಿಗೆ ಪರಿಹಾರವನ್ನು ಪಡೆಯುವ ಯಾವುದೇ ಅರ್ಥಪೂರ್ಣ ಕ್ರಮವಿಲ್ಲ ಎಂದು ನ್ಯಾಯಪೀಠ ಹೇಳಿದೆ.