ನವದೆಹಲಿ : ರಾಜಧಾನಿ ನವದೆಹಲಿಯಲ್ಲಿ ಹೆಚ್ಚುತ್ತಿರುವ ಕರೋನಾ ವೈರಸ್ ಪ್ರಕರಣವನ್ನು ನಿಯಂತ್ರಿಸಲು ದೆಹಲಿ ಸರ್ಕಾರ ಇದೇ ಸೋಮವಾರ ರಾತ್ರಿಯಿಂದ ಮುಂದಿನ ಸೋಮವಾರ ಬೆಳಿಗ್ಗೆಯವರೆಗೆ ಕರ್ಫ್ಯೂ ಘೋಷಿಸಿದೆ ಎಂಬುದು ವರದಿಯಾಗಿದೆ.
ಮುಖ್ಯಮಂತ್ರಿ ಕೇಜ್ರಿವಾಲ್ ಮತ್ತು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರು ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್-19 ಪರಿಸ್ಥಿತಿಯ ಬಗ್ಗೆ ಹಿರಿಯ ಸರ್ಕಾರಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಈ ಆದೇಶ ಹೊರ ಬಿದ್ದಿದೆ. ಭಾರತದ ಅತ್ಯಂತ ಹಾನಿಗೊಳಗಾದ ನಗರಗಳಲ್ಲಿ ದೆಹಲಿ ಒಂದಾಗಿದೆ, ದೆಹಲಿಯಲ್ಲಿ ಈಗಾಗಲೇ ವಾರಾಂತ್ಯದ ಕರ್ಫ್ಯೂ ಏ.30 ರವರೆಗೆ ಜಾರಿ ಯಲ್ಲಿದೆ.
ಕೋವಿಡ್-19 ರೋಗಿಗಳಿಗೆ ಆಮ್ಲಜನಕ ಮತ್ತು ಹಾಸಿಗೆಗಳ ತೀವ್ರ ಕೊರತೆ’ ದೆಹಲಿ ಎದುರಿಸುತ್ತಿದೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಭಾನುವಾರ ಹೇಳಿದ್ದರು. ಆಸ್ಪತ್ರೆಯ ಹಾಸಿಗೆಗಳು ಮತ್ತು ತಕ್ಷಣದ ಆಮ್ಲಜನಕ ಪೂರೈಕೆಗೆ ಸಹಾಯ ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದ ಕೆಲವು ಗಂಟೆಗಳ ನಂತರ ಮುಖ್ಯಮಂತ್ರಿ ಈ ಹೇಳಿಕೆ ನೀಡಿದರು.