ನವದೆಹಲಿ: ಬಹುಚರ್ಚಿತ ವಿಚಾರವಾಗಿರುವ ʻಒಂದು ರಾಷ್ಟ್ರ ಒಂದು ಚುನಾವಣೆʼ(One Nation One Election) ಪ್ರಸ್ತಾವಣೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ(Union Cabinet) ಅನುಮೋದನೆ ನೀಡಿದೆ. ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯನ್ನು ಏಕಕಾಲದಲ್ಲಿ ನಡೆಸುವ ಉದ್ದೇಶದಿಂದ ಉನ್ನತ ಸಮಿತಿ ಸಲ್ಲಿಸಿರುವ ಈ ವರದಿಗೆ ಕೇಂದ್ರ ಸರ್ಕಾರ ಅಸ್ತು ಎಂದಿದೆ. ಸಮಿತಿ ನೀಡಿದ ವರದಿಯನ್ನು ಇಂದು ಸಚಿವ ಸಂಪುಟದೆದುರು ಮಂಡಿಸಲಾಯಿತು.
ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ (Ramnath Kovind) ನೇತೃತ್ವದ ಸಮಿತಿಯು ʻಒಂದು ರಾಷ್ಟ್ರ, ಒಂದು ಚುನಾವಣೆ’ (One nation, One Election) ಕುರಿತ ವರದಿಯನ್ನು ಮಾ.15ರಂದು ಸರ್ಕಾರಕ್ಕೆ ಸಲ್ಲಿಸಿತ್ತು. ಏಕಕಾಲಿಕ ಚುನಾವಣೆಗಳು ಸಂಪನ್ಮೂಲಗಳನ್ನು ಉಳಿಸಲು ಸಹಾಯ ಮಾಡುತ್ತದೆ, ಅಭಿವೃದ್ಧಿ ಮತ್ತು ಸಾಮಾಜಿಕ ಒಗ್ಗಟ್ಟನ್ನು ಉತ್ತೇಜಿಸುತ್ತದೆ, “ಪ್ರಜಾಪ್ರಭುತ್ವದ ಅಡಿಪಾಯ” ವನ್ನು ಆಳಗೊಳಿಸುತ್ತದೆ ಎಂದು ಸಮಿತಿ ಹೇಳಿದೆ. ಇದೀಗ ಈ ವರದಿಗೆ ಕೇಂದ್ರ ಅಸ್ತು ಎಂದಿದ್ದು, ಮುಂಬುರುವ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲು ಯೋಜನೆ ರೂಪಿಸಲಾಗಿದೆ.
ಶೀಘ್ರದಲ್ಲೇ ಕಾನೂನು ಆಯೋಗದಿಂದ ವರದಿ
ಇನ್ನು ಈ ಬಗ್ಗೆ ಶೀಘ್ರದಲ್ಲೇ ಕಾನೂನು ಆಯೋಗ ತನ್ನ ವರದಿಯನ್ನು ಕೇಂದ್ರ ಸರ್ಕಾರದ ಮುಂದಿಡಲಿದೆ. ಪ್ರತ್ಯೇಕವಾಗಿ, ಕಾನೂನು ಆಯೋಗವು ಏಕಕಾಲಿಕ ಚುನಾವಣೆಗಳ ಬಗ್ಗೆ ತನ್ನದೇ ಆದ ವರದಿಯೊಂದಿಗೆ ಶೀಘ್ರದಲ್ಲೇ ಬರುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ, ಕಾನೂನು ಆಯೋಗವು 2029 ರಿಂದ ಸರ್ಕಾರದ ಎಲ್ಲಾ ಮೂರು ಹಂತಗಳಿಗೆ – ಲೋಕಸಭೆ, ರಾಜ್ಯ ವಿಧಾನಸಭೆಗಳು ಮತ್ತು ಪುರಸಭೆಗಳು ಮತ್ತು ಪಂಚಾಯತ್‌ಗಳಂತಹ ಸ್ಥಳೀಯ ಸಂಸ್ಥೆಗಳಿಗೆ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸಲು ಶಿಫಾರಸು ಮಾಡುವ ಸಾಧ್ಯತೆಯಿದೆ.
ʻಒಂದು ರಾಷ್ಟ್ರ, ಒಂದು ಚುನಾವಣೆ’ ಎಂದರೇನು?
ಸರಳವಾಗಿ ಹೇಳುವುದಾದರೆ, ಭಾರತದ ಲೋಕಸಭೆ ಮತ್ತು ಎಲ್ಲ ವಿಧಾನಸಭೆಗಳ ಸದಸ್ಯರ ಆಯ್ಕೆಗೆ ಮತದಾನ ಏಕಕಾಲದಲ್ಲಿ ನಡೆಯುವುದು. ಏಕಕಾಲದಲ್ಲಿ ಸಾಧ್ಯವಾಗದಿದ್ದರೆ ಒಂದೇ ವರ್ಷದಲ್ಲಿ ನಡೆಸುವುದು. ದೇಶದ ಗಾತ್ರ ಮತ್ತು ಪ್ರದೇಶಗಳ ನಡುವಿನ ಭೌಗೋಳಿಕ ಸಾಂಸ್ಕೃತಿಕ ವ್ಯತ್ಯಾಸಗಳನ್ನು ಗಮನಿಸಿದರೆ, ಏಕಕಾಲದ ಚುನಾವಣೆಗೆ ಹಲವು ಸವಾಲುಗಳಿವೆ. ಸಾರಿಗೆ ಸಂಪರ್ಕ, ಸಂಪನ್ಮೂಲ, ಸಾಂವಿಧಾನಿಕ, ಕಾನೂನು ಮತ್ತು ಪ್ರಾಯೋಗಿಕ ಸಮಸ್ಯೆಗಳು ಇವೆ.
ಏಕಕಾಲದ ಚುನಾವಣೆ ಏಕೆ?
ಕಳೆದ ವರ್ಷ ರಾಮನಾಥ್ ಕೋವಿಂದ್ ನೇತೃತ್ವದ ಸಮಿತಿಯನ್ನು ಘೋಷಿಸುವ ಮೊದಲು, ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಇದರ ಹಿಂದಿನ ಉದ್ದೇಶವನ್ನು ಲೋಕಸಭೆಯ ಮುಂದಿಟ್ಟರು. ಪ್ರತಿ ವರ್ಷವೂ ಒಂದೊಂದು ಚುನಾವಣೆ ನಡೆಸುವುದರಿಂದ ಹಲವಾರು ಬಾರಿ ಚುನಾವಣಾ ಅಧಿಕಾರಿಗಳು ಮತ್ತು ಭದ್ರತಾ ಪಡೆಗಳ ನಿಯೋಜನೆ ಮಾಡಬೇಕಾಗುತ್ತದೆ. ಇದನ್ನು ಕಡಿತಗೊಳಿಸುವುದರಿಂದ ಸಾರ್ವಜನಿಕ ಖಜಾನೆಗೆ ಉಳಿತಾಯ; ರಾಜಕೀಯ ಪಕ್ಷಗಳು ತಮ್ಮ ಪ್ರಚಾರದ ವೆಚ್ಚವನ್ನು ಕಡಿಮೆ ಮಾಡುವುದರಿಂದ ಏಕಕಾಲಿಕ ಚುನಾವಣೆಗಳು ಹಣಕಾಸಿನ ಉಳಿತಾಯಕ್ಕೆ ಕಾರಣವಾಗುತ್ತವೆ.
ಅಸಮಕಾಲಿಕ ಚುನಾವಣೆ ಎಂದರೆ ನೀತಿ ಸಂಹಿತೆ ಪದೇ ಪದೆ ಜಾರಿಗೆ ಬರುತ್ತಿರುತ್ತದೆ. ಇದು ಕೇಂದ್ರ ಅಥವಾ ರಾಜ್ಯದ ಕಲ್ಯಾಣ ಯೋಜನೆಗಳ ಜಾರಿಯ ಮೇಲೆ, ಆಡಳಿತಾತ್ಮಕ ನಿರ್ಧಾರಗಳ ಮೇಲೆ, ಸೇವಾ ಕಾರ್ಯಕ್ರಮಗಳ ಮೇಲೆ ಪರಿಣಾಮ ಬೀರುತ್ತದೆ. ಏಕಕಾಲದ ಚುನಾವಣೆಯು ಮತದಾನದ ಪ್ರಮಾಣವನ್ನು ಸುಧಾರಿಸಬಹುದು. ಇದು ಪ್ರಸ್ತುತ ರಾಜ್ಯದಿಂದ ರಾಜ್ಯಕ್ಕೆ ಮತ್ತು ಸಾರ್ವತ್ರಿಕ ಚುನಾವಣೆಯಿಂದ ಅಸೆಂಬ್ಲಿ ಚುನಾವಣೆಗೆ ಬೇರೆ ಬೇರೆ ಇದೆ.
ಈ ಸುದ್ದಿಯನ್ನೂ ಓದಿ: ಒಂದು ದೇಶ ಒಂದು ಚುನಾವಣೆಗೆ ಕೇಂದ್ರ ಸಿದ್ಧತೆ