Thursday, 28th November 2024

Priyanka Gandhi: ಅಮ್ಮ, ಅಣ್ಣನ ಜತೆ ಸಂಸತ್‌ಗೆ ಪ್ರಿಯಾಂಕಾ ಗಾಂಧಿ ಎಂಟ್ರಿ! ಸಂಸದೆಯಾಗಿ ಪ್ರಮಾಣ ವಚನ ಸ್ವೀಕಾರ

ನವದೆಹಲಿ : ವಯನಾಡ್‌ ಲೋಕಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ 4 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಪ್ರಚಂಡ ಗೆಲುವು ಸಾಧಿಸಿದ ಪ್ರಿಯಾಂಕಾ ಗಾಂಧಿ (Priyanka Gandhi) ಅವರು ಇಂದು ಸಂಸದರಾಗಿ (Member of Parliament) ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆ ಮೂಲಕ ಹಲವು ದಶಕಗಳ ನಂತರ ಮೊದಲ ಬಾರಿಗೆ ಗಾಂಧಿ ಕುಟುಂಬದ ಮೂವರು ಸದಸ್ಯರು ಒಟ್ಟಿಗೆ ಸಂಸತ್‌ಗೆ ಎಂಟ್ರಿ ಕೊಟ್ಟಿದ್ದಾರೆ (Priyanka Gandhi’s oath).

ಲೋಕಸಭೆಯ ಉಪಚುನಾವಣೆಯಲ್ಲಿ ಕೇರಳದ ವಯನಾಡ್‌ ಕ್ಷೇತ್ರದಿಂದ ಚುನಾವಣಾ ಕಣಕ್ಕಿಳಿದಿದ್ದ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಇಂದು ಲೋಕಸಭೆಯಲ್ಲಿ ಮೊದಲ ಬಾರಿಗೆ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಯ್‌ಬರೇಲಿ ಕ್ಷೇತ್ರದ ಸಂಸದರಾದ ತಮ್ಮ ಸಹೋದರ ರಾಹುಲ್ ಗಾಂಧಿ ಮತ್ತು ರಾಜ್ಯಸಭಾ ಸದಸ್ಯರಾದ ತಮ್ಮ ತಾಯಿ ಸೋನಿಯಾ ಗಾಂಧಿ ಅವರೊಂದಿಗೆ ಸಂಸತ್‌ಗೆ ಪ್ರವೇಶಿಸಿದ್ದಾರೆ.

ರಾಹುಲ್‌ ಗಾಂಧಿ (Rahul Gandhi) ಅವರ ರಾಜೀನಾಮೆ ಬಳಿಕ ತೆರವಾದ ವಯನಾಡ್‌ ಕ್ಷೇತ್ರಕ್ಕೆ ಪ್ರಿಯಾಂಕಾ ಗಾಂಧಿ ಅವರು ಸ್ಪರ್ಧೆ ಮಾಡಿದ್ದರು. 6.22 ಲಕ್ಷ ದಾಖಲೆ ಮತಗಳನ್ನು ಪಡೆಯುವ ಮೂಲಕ 4 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

ರಾಹುಲ್‌ ಗಾಂಧಿ ಅವರು ಈ ಹಿಂದೆ ವಯನಾಡ್‌ ಮತ್ತು ರಾಯ್‌ಬರೇಲಿ ಎರಡು ಕ್ಷೇತ್ರಗಳಿಂದಲೂ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ತಮ್ಮ ಕುಟುಂಬದ ಭದ್ರಕೋಟೆ ರಾಯ್‌ಬರೇಲಿ ಕ್ಷೇತ್ರವನ್ನು ಉಳಿಸಿಕೊಳ್ಳುವ ಸಲುವಾಗಿ ವಯನಾಡ್‌ ಕ್ಷೇತ್ರವನ್ನು ತೆರವುಗೊಳಿಸಿ ತಮ್ಮ ಪ್ರೀತಿಯ ಸಹೋದರಿ ಪ್ರಿಯಾಂಕಾ ಅವರಿಗೆ ಬಿಟ್ಟುಕೊಟ್ಟಿದ್ದರು. ಉಪ ಚುನಾವಣೆಯಲ್ಲಿ ತಂಗಿಯನ್ನು ಅಖಾಡಕ್ಕಿಳಿಸಿ ಅವರ ಪರ ಮತ ಪ್ರಚಾರವನ್ನೂ ನಡೆಸಿದ್ದರು. ಸತ್ಯನ್‌ ಮೊಕೇರಿ ಅವರ ವಿರುದ್ಧ ಸ್ಪರ್ಧಿಸಿದ್ದ ಪ್ರಿಯಾಂಕಾ ನಾಲ್ಕು ಲಕ್ಷಕ್ಕೂ ಅಧಿಕ ಮತಗಳಿಂದ ಅವರನ್ನು ಹೀನಾಯವಾಗಿ ಸೋಲಿಸಿದರು. 2024ರ ಲೋಕಸಭಾ ಚುನಾವಣೆಯಲ್ಲಿನ ರಾಹುಲ್‌ ಗಾಂಧಿ ಅವರ ಮತಗಳ ಅಂತರದ ದಾಖಲೆಯನ್ನು ಸ್ವತಃ‌ ಪ್ರಿಯಾಂಕಾ ಗಾಂಧಿ ಮುರಿದಿದ್ದಾರೆ.

ತಾಯಿ ಸೋನಿಯಾ ಗಾಂಧಿ ಮತ್ತು ಅವರ ಅಜ್ಜಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ನಂತರ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದ ಗಾಂಧಿ ಕುಟುಂಬದ ಮೂರನೇ ಮಹಿಳೆ ಎಂಬ ಹೆಗ್ಗಳಿಕೆಗೆ ಪ್ರಿಯಾಂಕಾ ಗಾಂಧಿ ಪಾತ್ರರಾಗಿದ್ದಾರೆ.

ತಮ್ಮ ಭರ್ಜರಿ ಗೆಲುವಿನ ನಂತರ, ಪ್ರಿಯಾಂಕಾ ಗಾಂಧಿ ವಾದ್ರಾ “ಸಂಸತ್ತಿನಲ್ಲಿ ಜನರ ಧ್ವನಿಯಾಗಲು ಎದುರು ನೋಡುತ್ತಿದ್ದೇನೆ” ಎಂದು ಹೇಳಿದ್ದರು.

“ನೀವು ನನ್ನ ಮೇಲೆ ಇಟ್ಟಿರುವ ನಂಬಿಕೆಗೆ ನಾನು ಕೃತಜ್ಞಳಾಗಿದ್ದೇನೆ. ಈ ಗೆಲುವು ನಿಮ್ಮ ಗೆಲುವಾಗಿದೆ. ನಿಮ್ಮ ಪ್ರತಿನಿಧಿಯಾಗಿ ನೀವು ನನ್ನನ್ನು ಆಯ್ಕೆ ಮಾಡಿದ್ದೀರಿ. ನಿಮ್ಮ ಕನಸು ಮತ್ತು ಭರವಸೆಗಳನ್ನು ಈಡೇರಿಸುತ್ತೇನೆ ಮತ್ತು ನಿಮಗಾಗಿ ಹೋರಾಡುತ್ತೇನೆ. ಸಂಸತ್ತಿನಲ್ಲಿ ನಿಮ್ಮ ಧ್ವನಿಯಾಗಲು ನಾನು ಎದುರು ನೋಡುತ್ತಿದ್ದೇನೆ” ಎಂದು ಪ್ರಿಯಾಂಕಾ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಪ್ರಿಯಾಂಕಾ ಗಾಂಧಿ ರಾಜಕೀಯದಲ್ಲಿ ಈ ಹಿಂದಿನಿಂದಲೂ ಸಕ್ರಿಯರಾಗಿದ್ದರೂ ಚುನಾವಣೆಗಳಲ್ಲಿ ಸ್ಪರ್ಧಿಸಿರಲಿಲ್ಲ. ಪಕ್ಷದ ಹಿತಾಸಕ್ತಿಗಾಗಿ 2019 ರಲ್ಲಿ ಪೂರ್ವ ಉತ್ತರ ಪ್ರದೇಶದ ಉಸ್ತುವಾರಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡರು. ನಂತರ ಪ್ರಿಯಾಂಕಾ ಗಾಂಧಿ ವಾದ್ರಾ ರಾಜಕೀಯಕ್ಕೆ ಪ್ರವೇಶಿಸಿದರು. ಒಂದು ವರ್ಷದ ನಂತರ ಅವರಿಗೆ ಪಕ್ಷವು ಇಡೀ ರಾಜ್ಯದ ಜವಾಬ್ದಾರಿಯನ್ನು ನೀಡಿತು.  2024 ರ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶ ಮತ್ತು ಇತರ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು.‌ ರಾಯ್ಬರೇಲಿ ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲಿದ್ದಾರೆ ಎಂಬ ಊಹಾಪೋಹಗಳಿದ್ದವು. ಆದರೆ ಪಕ್ಷ ನೀಡಿದ್ದ ಕೆಲವು ಜವಾಬ್ದಾರಿಗಳಿಂದಾಗಿ ಪ್ರಿಯಾಂಕಾ ನಿರಾಕರಿಸಿದ್ದರು. ಇದೀಗ ತಮ್ಮ ಕುಟುಂಬದ ಭದ್ರಕೋಟೆಯಾದ ವಯನಾಡ್‌ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು, ಮೊದಲ ಬಾರಿಗೆ ಸಂಸತ್‌ ಪ್ರವೇಶಿಸಿದ್ದಾರೆ.

ಈ ಸುದ್ದಿಯನ್ನೂ ಓದಿ : Rahul Gandhi: ಪ್ರಧಾನಿ ಮೋದಿ, ಆರ್‌ಎಸ್‌ಎಸ್‌ ವಿರುದ್ಧ ಅಮೆರಿಕದಲ್ಲಿ ರಾಹುಲ್‌ ಆಕ್ರೋಶ; ದೇಶದ್ರೋಹಿಗಳಿಗೆ ಇದೆಲ್ಲಾ ಅರ್ಥ ಆಗಲ್ಲ ಎಂದು ಬಿಜೆಪಿ ತಿರುಗೇಟು