ರಾಯ್‌ಪುರ: ರಾಯ್‌ಪುರದ ವಿಧಾನಸಭಾ ಕ್ಷೇತ್ರದ ಎಲ್ಲಾ 201 ಮತಗಟ್ಟೆಗಳಲ್ಲಿ ಸಂಪೂರ್ಣ ಮತದಾನ ಪ್ರಕ್ರಿಯೆಯ ಹೊಣೆಗಾರಿಕೆಯನ್ನು ಮಹಿಳೆಯರಿಗೆ ವಹಿಸಲಾಗಿದೆ.
ದೇಶದ ಪ್ರಜಾಪ್ರಭುತ್ವದ ಇತಿಹಾಸದಲ್ಲಿಯೇ ಮಹಿಳೆಯರು ವಿಧಾನಸಭೆಯ ಸಂಪೂರ್ಣ ಜವಾಬ್ದಾರಿ ನಿಭಾಯಿ ಸುತ್ತಿರುವುದು ಇದೇ ಮೊದಲು ಎಂದು ಅಧಿಕಾರಿಗಳು ಹೇಳಿದ್ದಾರೆ.
ರಾಜ್ಯದಲ್ಲಿ 70 ಸ್ಥಾನಗಳಿಗೆ ನಡೆಯುತ್ತಿರುವ ಎರಡನೇ ಮತ್ತು ಅಂತಿಮ ಹಂತದ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಡಿಸೆಂಬರ್ 3ರಂದು ಫಲಿತಾಂಶ ಪ್ರಕಟವಾಗಲಿದೆ.
ರಾಯ್‌ಪುರ ನಗರದ ಉತ್ತರ ಕ್ಷೇತ್ರದಲ್ಲಿ 201 ಮತಗಟ್ಟೆಗಳಿದ್ದು, ಎಲ್ಲವೂ ‘ಸಂಗ್ವಾರಿ ಬೂತ್’ ಆಗಿವೆ. ಅಧ್ಯಕ್ಷರಿಂದ ಹಿಡಿದು ಮತಗಟ್ಟೆ ಅಧಿಕಾರಿಯವರೆಗೆ ಎಲ್ಲರೂ ಮಹಿಳೆಯರೇ ಆಗಿದ್ದಾರೆ. ಇಡೀ ವಿಧಾನಸಭೆಯಲ್ಲಿ ಅಧ್ಯಕ್ಷೆ, ಮತಗಟ್ಟೆ ಅಧಿಕಾರಿ, ಭದ್ರತಾ ಸಿಬ್ಬಂದಿ ಸೇರಿದಂತೆ 804 ಮಹಿಳೆಯರಿಗೆ ಜವಾ ಬ್ದಾರಿ ನೀಡಲಾಗಿದೆ, ಇದರೊಂದಿಗೆ ಸುಮಾರು 200 ಮಹಿಳೆಯರನ್ನು ಮೀಸಲು ಆಗಿ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.
ಛತ್ತೀಸ್‌ಗಢದ ಮುಖ್ಯ ಚುನಾವಣಾಧಿಕಾರಿ ಹಾಗೂ ಐಎಎಸ್ ಅಧಿಕಾರಿ ರೀನಾ ಬಾಬಾ ಸಾಹೇಬ್ ಕಂಗಳೆ, “ಲಿಂಗ ಸಮಾನತೆಯ ವಿಷಯದಲ್ಲಿ ಛತ್ತೀಸ್ ಗಢವು ದೇಶದಲ್ಲಿ ಗಮನ ಸೆಳೆದಿದೆ. ಪ್ರತಿ ಹಂತದಲ್ಲೂ ಪುರುಷರಿಗಿಂತ ಮಹಿಳೆಯರ ಭಾಗವಹಿಸುವಿಕೆ ಅಧಿಕವಿದೆ. ಪರಿಣಾಮ ರಾಜಧಾನಿ ರಾಯ್ ಪುರದ ಉತ್ತರ ವಿಧಾನಸಭಾ ಕ್ಷೇತ್ರದ ಚುನಾವಣೆಯ ಕೆಲಸವನ್ನು ಮಹಿಳೆಯರಿಗೆ ವಹಿಸಲಾಗಿದೆ. ಇಲ್ಲಿನ ಲಿಂಗ ಅನುಪಾತವು ಸಹ ಆರೋಗ್ಯಕರ ವಾಗಿದೆ. ಅಂದರೆ ಪ್ರತಿ 1010 ಮಹಿಳೆಯರಿಗೆ 1000 ಪುರುಷರು ಇದ್ದಾರೆ. ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಪುರುಷ ಮತದಾರರಿಗಿಂತ ಮಹಿಳಾ ಮತದಾರರ ಸಂಖ್ಯೆಯೇ ಹೆಚ್ಚಿದೆ” ಎಂದರು.