ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅತ್ಯಾಚಾರಿಗಳು ಮಹಿಳೆಯರ ಮಾನಭಂಗ ಮಾಡುವುದಲ್ಲದೇ ನಂತರ ಅವರ ಜೊತೆ ಕ್ರೂರವಾಗಿ ವರ್ತಿಸುತ್ತಿದ್ದಾರೆ. ಇಂತಹ ಹಲವು ಪ್ರಕರಣಗಳು ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಇದೀಗ ಮಧ್ಯಪ್ರದೇಶದ ಇಂದೋರ್‌ನಲ್ಲಿ ಕೂಡ ಅಂತಹದೊಂದು ಘೋರ ಅತ್ಯಾಚಾರದ ಘಟನೆ ನಡೆದಿದೆ. 34 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ (Sexual Abuse)ನಡೆಸಿದಲ್ಲದೇ ಆಕೆಯನ್ನು ಬೆಲ್ಟ್‌ನಿಂದ ಥಳಿಸಿ, ನಂತರ ಅರ್ಧ ಗಂಟೆ ಬೆತ್ತಲೆಯಾಗಿ ನೃತ್ಯ ಮಾಡುವಂತೆ ಒತ್ತಾಯಿಸಿದ ಘಟನೆ ನಡೆದಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಎರಡು ತಿಂಗಳ ಹಿಂದೆ ನಡೆದ ಈ ಘಟನೆಯ ಕುರಿತು ಸಂತ್ರಸ್ತೆ ಈಗ ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದಾಳೆ.
ಸಂತ್ರಸ್ತ ಮಹಿಳೆ ಕನಾಡಿಯಾ ಪೊಲೀಸ್ ಠಾಣೆಯಲ್ಲಿ ಐವರ ವಿರುದ್ಧ ದೂರು ನೀಡಿದ್ದಾಳೆ. ಜೂನ್ 11ರಂದು ಆರೋಪಿಗಳು ತನ್ನನ್ನು ಬಲವಂತವಾಗಿ ಗೋದಾಮಿಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ. ಟಿವಿಯಲ್ಲಿ ಅಶ್ಲೀಲ ವಿಡಿಯೊಗಳನ್ನು ನೋಡಿದ ನಂತರ ಆರೋಪಿಗಳು ಅಸ್ವಾಭಾವಿಕ ಲೈಂಗಿಕ ಕ್ರಿಯೆಯನ್ನು ಸಹ ಮಾಡಿದ್ದಾರೆ. ಅಷ್ಟೇ ಅಲ್ಲದೇ ನಂತರ ತನ್ನನ್ನು ಬೆಲ್ಟ್‌ನಿಂದ ಥಳಿಸಿ, ಅರ್ಧ ಗಂಟೆ ಬೆತ್ತಲೆಯಾಗಿ ನೃತ್ಯ ಮಾಡುವಂತೆ ಒತ್ತಾಯಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾಳೆ.
ಆದರೆ ಪೊಲೀಸರು ದೂರನ್ನು ಸ್ವೀಕರಿಸದ ಕಾರಣ ಪೊಲೀಸರ ವಿರುದ್ಧ ಮಹಿಳೆ ಮಧ್ಯಪ್ರದೇಶ ಹೈಕೋರ್ಟ್ ಮೆಟ್ಟಿಲೇರಿದ್ದಾಳೆ. ಜುಲೈ 17 ರಂದು ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮಹಿಳೆ ಆರೋಪಿಸಿದ್ದಾಳೆ. ಆಕೆಯ ಅರ್ಜಿಯನ್ನು ಪರಿಗಣಿಸಿದ ಹೈಕೋರ್ಟ್ ಆಗಸ್ಟ್ 14 ರಂದು ಕನಾಡಿಯಾ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿಗೆ ಮಹಿಳೆಯ ದೂರನ್ನು 90 ದಿನಗಳಲ್ಲಿ ತನಿಖೆ ಮಾಡಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಆದೇಶ ನೀಡಿದೆ.
ಹಾಗಾಗಿ ಕೆಲವು ದಿನಗಳ ನಂತರ ಸೋಮವಾರ ತಡರಾತ್ರಿ ಐವರು ಆರೋಪಿಗಳ ವಿರುದ್ಧ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ, ವಿವರವಾದ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಾಕ್ಷ್ಯಾಧಾರಗಳ ಆಧಾರದ ಮೇಲೆ ಈ ಪ್ರಕರಣದಲ್ಲಿ ಅಗತ್ಯ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಉಪ ಪೊಲೀಸ್ ಆಯುಕ್ತ (ಡಿಸಿಪಿ) ಅಭಿನಯ್ ವಿಶ್ವಕರ್ಮ ಹೇಳಿದ್ದಾರೆ.