Sunday, 12th January 2025

National Youth Day: ಇಂದು ರಾಷ್ಟ್ರೀಯ ಯುವ ದಿನ – ಆಚರಣೆ ಹೇಗೆ? ಏನು? ಇಲ್ಲಿದೆ ಮಾಹಿತಿ

ಯುವಕರನ್ನು ದೇಶದ ಆಸ್ತಿ ಎನ್ನಲಾಗುತ್ತದೆ. ಯುವಕರು ದೇಶ ಕಟ್ಟುವ ಕೆಲಸ ಮಾಡಬೇಕು ಎಂಬುದು ನಮ್ಮ ಹಿಂದಿನ ತಲೆಮಾರಿನವರ ಆಶಯ. ಒಟ್ಟಾರೆ ಯುವಜನರಿಂದ ಪರಿವರ್ತನೆ ಸಾಧ್ಯ. ದೇಶದ ನಾಳಿನ ಸುಭದ್ರ ಭವಿಷ್ಯಕ್ಕೆ ಹಿಂದಿನ ಯುವಜನರೇ ಬುನಾದಿ. ಅಂದ ಹಾಗೆ ಇಂದು ರಾಷ್ಟ್ರೀಯ ಯುವದಿನ (National Youth Day). ಪ್ರತಿ ವರ್ಷ ಸ್ವಾಮಿ ವಿವೇಕಾನಂದರ (Swami Vivekananda) ಜನ್ಮದಿನದಂದು ರಾಷ್ಟ್ರೀಯ ಯುವ ದಿನವನ್ನು ಆಚರಿಸಲಾಗುತ್ತದೆ. ಈ ದಿನವು ಯುವಜನರಲ್ಲಿ ಜಾಗೃತಿ ಮೂಡಿಸುವ ದಿನವಾಗಿದೆ. ದೇಶಕ್ಕಾಗಿ ಯುವಕರು ಹೇಗೆ ಕೆಲಸ ಮಾಡಬೇಕು ಎಂಬ ಬಗ್ಗೆ ಜಾಗೃತಿ ಹಾಗೂ ಜ್ಞಾನ ಮೂಡಿಸುವ ದಿನ ಇದಾಗಿದೆ. ಯುವಕರನ್ನು ಪ್ರೇರೇಪಿಸುವ ಮತ್ತು ಸ್ವಾಮಿ ವಿವೇಕಾನಂದರ ವಿಚಾರಗಳನ್ನು ಹರಡುವ ಮೂಲಕ ದೇಶಕ್ಕೆ ಉತ್ತಮ ಭವಿಷ್ಯವನ್ನು ರೂಪಿಸುವುದು ಈ ಆಚರಣೆಯ ಹಿಂದಿನ ಮುಖ್ಯ ಉದ್ದೇಶವಾಗಿದೆ. ರಾಷ್ಟ್ರೀಯ ಯುವದಿನವು ಯುವ ದಿವಸ್‌ (Yuva Diwas) ಎಂದೂ ಖ್ಯಾತಿ ಪಡೆದಿದೆ.

ಇತಿಹಾಸ
1984ರಲ್ಲಿ ಭಾರತ ಸರ್ಕಾರವು ಜನವರಿ 12ರ ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನ ಎಂದು ಆಚರಿಸಲು ಕರೆ ನೀಡಿತು. ಇಲ್ಲಿಂದ ಇಲ್ಲಿಯವರೆಗೆ ಪ್ರತಿ ವರ್ಷ ರಾಷ್ಟ್ರೀಯ ಯುವ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ಸ್ವಾಮಿ ವಿವೇಕಾನಂದರ ಜೀವನ ಮತ್ತು ವಿಚಾರಗಳ ಮೂಲಕ ಯುವಕರನ್ನು ಪ್ರೇರೇಪಿಸಿ, ಆ ಮೂಲಕ ದೇಶದ ಉತ್ತಮ ಭವಿಷ್ಯವನ್ನು ರೂಪಿಸುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ. ತಮ್ಮ ಸಂದೇಶಗಳ ಮೂಲಕ ಯುವಕರನ್ನು ಬಡಿದೆಚ್ಚರಿಸಿ, ದೇಶ ಕಟ್ಟುವ ಕಾಯಕದಲ್ಲಿ ತೊಡಗುವಂತೆ ವಿವೇಕಾನಂದರು ಕರೆ ನೀಡಿದ್ದರು. ಅವರ ತತ್ವಗಳನ್ನು ಪಾಲಿಸುವಂತೆ ಮಾಡುವುದು ಈ ದಿನ ಮುಖ್ಯ ಉದ್ದೇಶವಾಗಿದೆ.

ಆಚರಣೆ
ವಿವೇಕಾನಂದರ ತತ್ವಗಳು, ಆದರ್ಶಗಳು ಇಂದಿಗೂ ಪ್ರಸ್ತುತ. ಇವರ ತತ್ವಗಳನ್ನು ಭಾರತ ಮಾತ್ರವಲ್ಲ, ಪ್ರಪಂಚದಾದ್ಯಂತ ಜನರು ಅನುಸರಿಸುತ್ತಾರೆ. ವಿವೇಕಾನಂದರು ಪ್ರಪಂಚದಾದ್ಯಂತ ಹಿಂಬಾಲಕರನ್ನು ಹೊಂದಿದ್ದಾರೆ.

ರಾಷ್ಟ್ರೀಯ ಯುವ ದಿನ ಅಥವಾ ಸ್ವಾಮಿ ವಿವೇಕಾನಂದರ ಜನ್ಮ ದಿನವನ್ನು ಪ್ರತಿ ವರ್ಷ ರಾಮಕೃಷ್ಣ ಮಠ (Ramakrishna Math), ರಾಮಕೃಷ್ಣ ಮಿಷನ್ (Ramakrishna Mission) ಮತ್ತು ಅವರ ಶಾಖೆಗಳ ಅನೇಕ ಕೇಂದ್ರಗಳಲ್ಲಿ ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯದ ಪ್ರಕಾರ ಅತ್ಯಂತ ಉತ್ಸಾಹ ಮತ್ತು ಸಂತೋಷದಿಂದ ಆಚರಿಸಲಾಗುತ್ತದೆ. ಮಹಾ ಮಂಗಳ ಆರತಿ, ಭಕ್ತಿಗೀತೆಗಳು, ಧ್ಯಾನ, ಧಾರ್ಮಿಕ ಭಾಷಣ, ಸಂಧ್ಯಾ ಆರತಿ ಮುಂತಾದ ಕಾರ್ಯಕ್ರಮಗಳ ಮೂಲಕ ಈ ದಿನವನ್ನು ಆಚರಿಸಲಾಗುತ್ತದೆ.

ಅಲ್ಲದೆ ಈ ದಿನದಂದು ಶಾಲಾ ಕಾಲೇಜುಗಳಲ್ಲಿ ವಿವೇಕಾನಂದರ ಕುರಿತು ಭಾಷಣ, ವಾಚನಗೋಷ್ಠಿಗಳು, ಹಾಡುಗಳು, ಸಮಾವೇಶಗಳು, ಪ್ರಬಂಧ-ಬರಹ ಸ್ಪರ್ಧೆಗಳು, ಸೆಮಿನಾರ್‌ಗಳು ಇತ್ಯಾದಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಶಿಕ್ಷಣವನ್ನು ಉತ್ತೇಜಿಸಲು, ಯುವಕರಲ್ಲಿ ನಂಬಿಕೆಯನ್ನು ಹೆಚ್ಚು ಮಾಡಲು, ದೇಶವನ್ನು ಅಭಿವೃದ್ಧಿಪಡಿಸಲು ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ಈ ದಿನದಂದು ಹಲವಾರು ಸ್ಪರ್ಧೆಗಳನ್ನು ನಡೆಸಲಾಗುತ್ತದೆ.

ಸ್ವಾಮಿ ವಿವೇಕಾನಂದರ ಪರಿಚಯ
ವಿವೇಕಾನಂದರು 1863ರ ಜನವರಿ 12 ರಂದು ಕೊಲ್ಕೊತ್ತಾದಲ್ಲಿ ಜನಿಸಿದರು. ಇವರ ಮೊದಲ ಹೆಸರು ನರೇಂದ್ರನಾಥ ದತ್ತಾ. ಇವರ ತಂದೆ ವಿಶ್ವನಾಥ ದತ್ತ, ಇವರ ತಾಯಿ ಭುವನೇಶ್ವರಿ ದೇವಿ. ನರೇಂದ್ರನಾಥರು ಜನಿಸುವಾಗ ಇವರ ಕುಟುಂಬದಲ್ಲಿ ಎಲ್ಲವೂ ಚೆನ್ನಾಗಿತ್ತು. ಆದರೆ ಇವರು ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಳ್ಳುತ್ತಾರೆ. ಕುಟುಂಬಕ್ಕೆ ಆಸರೆಯಾಗಿದ್ದ ತಂದೆ ಸಾವು ಇವರ ಕುಟುಂಬವನ್ನು ಬಡತನಕ್ಕೆ ತಳ್ಳುವಂತೆ ಮಾಡುತ್ತದೆ. ಉತ್ತಮ ವಿದ್ಯಾರ್ಥಿಯಾದರು ಕೆಲಸ ಸಿಗಲು ಬಹಳ ದಿನಗಳ ಕಾಲ ಪರದಾಡುತ್ತಾರೆ. ಮನೆ ಮನೆಗೆ ತೆರಳಿ ಕೆಲಸ ಕೇಳಿದರೂ ಸಿಗದಿದ್ದಾಗ ನಾಸ್ತಿಕರಾಗುತ್ತಾರೆ.

1881ರಲ್ಲಿ ಇವರ ಇಂಗ್ಲಿಷ್‌ ಪ್ರಾಧ್ಯಾಪಕರೊಬ್ಬರು ಶ್ರೀರಾಮಕೃಷ್ಣ ಪರಮಹಂಸರಿಗೆ ಇವರನ್ನು ಪರಿಚಯಿಸುತ್ತಾರೆ. ದಕ್ಷಿಣೇಶ್ವರದ ಕಾಳಿ ದೇವಸ್ಥಾನದಲ್ಲಿ ನರೇಂದ್ರನಾಥ ದತ್ತರು ರಾಮಕೃಷ್ಣ ಪರಮಹಂಸರನ್ನು ಭೇಟಿ ಮಾಡುತ್ತಾರೆ. ಅಲ್ಲಿಂದ ಅವರ ಶಿಷ್ಯರಾಗುತ್ತಾರೆ. ಅವರು ವೇದಾಂತ ಮತ್ತು ಯೋಗದ ಭಾರತೀಯ ತತ್ವಗಳನ್ನು ಪಾಶ್ಚಿಮಾತ್ಯ ಜಗತ್ತಿಗೆ ಪರಿಚಯಿಸಿದರು.

ವಿವೇಕಾನಂದರು ಅತ್ಯಂತ ದೇಶಭಕ್ತಿಯುಳ್ಳವರಾಗಿದ್ದರು, ಅವರು ಭಾರತದ ಮೇಲೆ ವಿಶೇಷ ಒಲವು ಹೊಂದಿದ್ದರು. ದೇಶದ ತತ್ತ್ವಚಿಂತನೆಗಳಿಗೆ ಅವರು ನೀಡಿದ ಕೊಡುಗೆಗಳಿಗಾಗಿ ಅವರನ್ನು ನಾಯಕ ಎಂದು ಪರಿಗಣಿಸಲಾಗುತ್ತದೆ. ಭಾರತದಲ್ಲಿ ವ್ಯಾಪಕವಾದ ಬಡತನದ ಬಗ್ಗೆಯೂ ಅವರು ಗಮನ ಸೆಳೆದರು ಮತ್ತು ದೇಶದ ಅಭಿವೃದ್ಧಿಗಾಗಿ ಬಡತನದ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸಲಹೆ ನೀಡಿದ್ದರು. 1893 ರಲ್ಲಿ ಚಿಕಾಗೋದಲ್ಲಿ ನಡೆದ ವಿಶ್ವ ಧರ್ಮ ಸಮ್ಮೇಳನದಲ್ಲಿ ಅಮೆರಿಕದ ಸಹೋದರ-ಸಹೋದರಿಯರೇ ಎಂದು ಹೇಳುವ ಮೂಲಕ ಭಾಷಣ ಆರಂಭಿಸಿದ್ದರು. ಭಾರತದ ಸಂಸ್ಕೃತಿ, ಅದರ ಪ್ರಾಮುಖ್ಯತೆ, ಹಿಂದೂ ಧರ್ಮದ ಬಗ್ಗೆ ವಿಶ್ವದೆಲ್ಲೆಡೆ ಪರಿಚಯಿಸಿದ ಖ್ಯಾತಿ ಇವರದ್ದು. ವಿವೇಕಾನಂದರು 1902 ಜುಲೈ 4 ರಂದು ನಿಧನರಾಗುತ್ತಾರೆ.

ಇವರ ಬೋಧನೆಗಳು ಯುವಕರನ್ನು ಪ್ರೇರೇಪಿಸುವುದಲ್ಲದೆ ದೇಶದ ಅಭಿವೃದ್ಧಿಗೆ ದಾರಿ ಮಾಡಿಕೊಟ್ಟವು. ಆದ್ದರಿಂದ, ಭಾರತದಲ್ಲಿ ಪ್ರತಿ ವರ್ಷ ಜನವರಿ 12 ಅನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನದಂದು ವಿವೇಕಾನಂದರ ತತ್ವ ಸಮಾಚಾರಗಳನ್ನು ಪಾಲಿಸಲು ಕರೆ ನೀಡಲಾಗುತ್ತದೆ.

ಈ ಸುದ್ದಿಯನ್ನೂ ಓದಿ: ವಿವೇಕಾನಂದ ಜಯಂತಿ ಆಚರಣೆ

Leave a Reply

Your email address will not be published. Required fields are marked *