ಬೆಂಗಳೂರು: ಟಾಟಾ ಮೋಟಾರ್ಸ್ ತನ್ನ ಬಹುನಿರೀಕ್ಷಿತ ಕಾರು ಕರ್ವ್‌ನ (Tata Curvv) ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆವೃತ್ತಿಯ ಬೆಲೆಗಳನ್ನು ಪ್ರಕಟಿಸಿದೆ. ಲಾಂಚಿಂಗ್ ಆಫರ್ ರೀತಿಯಲ್ಲಿ ಬೆಲೆಯನ್ನು 10 ಲಕ್ಷ ರೂ.ಗಳಿಂದ ಹಿಡಿದು 17.7 ಲಕ್ಷ ರೂ.ಗಳವರೆಗೆ ಬಿಡುಗಡೆ (Tata Curvv Price) ಮಾಡಲಾಗಿದೆ. ತನ್ನ ಬಾಡಿ ಸ್ಟೈಲ್ ಮೂಲಕವೇ ಗಮನ ಸೆಳೆದಿರುವ ಟಾಟಾ ಕರ್ವ್ ಕಾರು ಬೆಲೆ, ಪವರ್ ಟ್ರೇನ್ ಆಯ್ಕೆಗಳೊಂದಿಗೆ ನಿರೀಕ್ಷೆ ಮೂಡಿಸಿತ್ತು. ಇದೀಗ ಈ ಮಧ್ಯಮ ಗಾತ್ರದ ಎಸ್ ಯುವಿ ವಿಭಾಗದ ಕಾರುಗಳಿಗೂ ಪೈಪೋಟ್ ನೀಡುವ ರೀತಿಯಲ್ಲಿ ಬೆಲೆ ನಿಗದಿಯಾಗಿದೆ. ಅಂದ ಹಾಗೆ ಈ ಬೆಲೆಗಳು ಅಕ್ಟೋಬರ್ 31ರ ಒಳಗೆ ಬುಕ್ ಮಾಡಿದರೆ ಮಾತ್ರ ಅನ್ವಯವಾಗುತ್ತದೆ.
ಕರ್ವ್ ಕಾರನ್ನು ಒಟ್ಟು ಎಂಟು ವೇರಿಯೆಂಟ್‌ಗಳಲ್ಲಿ ನೀಡಲಾಗಿದೆ. ಅವುಗಳೆಂದರೆ ಸ್ಮಾರ್ಟ್, ಪ್ಯೂರ್ + , ಪ್ಯೂರ್ + ಎಸ್, ಕ್ರಿಯೇಟಿವ್ ಎಸ್, ಕ್ರಿಯೇಟಿವ್ + ಎಸ್, ಅಕಾಂಪ್ಲಿಷ್ಡ್ ಎಸ್ ಮತ್ತು ಅಕಾಂಪ್ಲಿಷ್ಡ್ + ಎ. ಎಂಟ್ರಿ ಲೆವೆಲ್ ಪೆಟ್ರೋಲ್ ವೇರಿಯೆಂಟ್ ಬೆಲೆಯು ರೂ.10 ಲಕ್ಷಗಳಾದರೆ, ಡೀಸೆಲ್ ವೇರಿಯೆಂಟ್ ಬೆಲೆಯು ರೂ.11.5 ಲಕ್ಷಗಳಿಂದ ಪ್ರಾರಂಭವಾಗುತ್ತದೆ. ಡೈರೆಕ್ಟ್-ಇಂಜೆಕ್ಷನ್ ಟರ್ಬೊ-ಪೆಟ್ರೋಲ್ ಎಂಜಿನ್ ಅನ್ನು ಕ್ರಿಯೇಟಿವ್ ಎಸ್ ವೇರಿಯೆಂಟ್ ಬಳಿಕ ನೀಡಲಾಗಿದೆ. ಇವುಗಳ ಬೆಲೆಗಳು 14 ಲಕ್ಷ ರೂ.ಗಳಿಂದ ಪ್ರಾರಂಭವಾಗುತ್ತವೆ.
ಆಟೊಮ್ಯಾಟಿಕ್ ವೇರಿಯೆಂಟ್‌ಗಳ ಬೆಲೆಗಳನ್ನು ಇನ್ನೂ ಘೋಷಿಸದ ಕಾರಣ ಕರ್ವ್ ನ ಸಂಪೂರ್ಣ ಬೆಲೆ ಪಟ್ಟಿಯನ್ನು ಟಾಟಾ ಇನ್ನೂ ಬಹಿರಂಗಪಡಿಸಿಲ್ಲ ಎಂಬುದನ್ನು ಗಮನಿಸಬೇಕಾಗುತ್ತದೆ . ಸದ್ಯಕ್ಕೆ, ಎಂಟ್ರಿ ಲೆವೆಲ್ ಪೆಟ್ರೋಲ್-ಡಿಸಿಟಿ ವೇರಿಯೆಂಟ್ 12.5 ಲಕ್ಷ ರೂ.ಗಳಿಂದ ಪ್ರಾರಂಭವಾಗಿದರೆ, ಎಂಟ್ರಿ ಲೆವೆಲ್ ಡೀಸೆಲ್ ಎಂಜಿನ್ ಇರುವ ಡಿಸಿಟಿ ವೇರಿಯೆಂಟ್ 14 ಲಕ್ಷ ರೂ.ಗಳಿಂದ ಪ್ರಾರಂಭವಾಗುತ್ತದೆ. ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಹೊಂದಿರುವ 125 ಬಿಹೆಚ್ ಪಿ ಟರ್ಬೊ-ಪೆಟ್ರೋಲ್ ಎಂಜಿನ್ ಹೊಂದಿರುವ ಕರ್ವ್ ಕಾರಿನ ಬೆಲೆಗಳು 16.4 ಲಕ್ಷ ರೂ.ಗಳಿಂದ ಪ್ರಾರಂಭವಾಗುತ್ತವೆ.
ಎಂಜಿನ್ ಆಯ್ಕೆ ಈ ರೀತಿ ಇವೆ
ಹೊಸ ಅಟ್ಲಾಸ್ ಪ್ಲಾಟ್ ಫಾರ್ಮ್ ಅನ್ನು ಆಧರಿಸಿ, ಕರ್ವ್ ಮೂರು ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ. 120 ಬಿಹೆಚ್ ಪಿ, 170 ಎನ್ಎಂ ಟಾರ್ಕ್ ಕೊಡುವ 1.2-ಲೀಟರ್ ಮೂರು ಸಿಲಿಂಡರ್ ಟರ್ಬೊ-ಪೆಟ್ರೋಲ್ ಎಂಜಿನ್ , 118 ಬಿಹೆಚ್ ಪಿ ಪವರ್ ಕೊಡುವ 1.5-ಲೀಟರ್ ಡೀಸೆಲ್ ಎಂಜಿನ್ ಮತ್ತು ಟಾಟಾದ ಹೊಸ 1.2-ಲೀಟರ್ ಡೈರೆಕ್ಟ್-ಇಂಜೆಕ್ಷನ್ ಟರ್ಬೊ-ಪೆಟ್ರೋಲ್ ‘ಹೈಪೆರಿಯನ್’ ಎಂಜಿನ್ 125 ಬಿಹೆಚ್ ಪಿ ಮತ್ತು 225 ಎನ್ಎಂ ಸಾಮರ್ಥ್ಯ ಹೊಂದಿದೆ. ಎಲ್ಲಾ ಮೂರು ಎಂಜಿನ್ ಗಳು 6-ಸ್ಪೀಡ್ ಮ್ಯಾನುವಲ್ ಮತ್ತು 7-ಸ್ಪೀಡ್ ಡ್ಯುಯಲ್-ಕ್ಲಚ್ ಆಟೋಮ್ಯಾಟಿಕ್ ಆಯ್ಕೆಯೊಂದಿಗೆ ಬರುತ್ತವೆ. ಇದು ಡ್ಯುಯಲ್ ಕ್ಲಚ್ ಕಾರು ನೀಡುವ ಭಾರತದ ಏಕೈಕ ಮಾಸ್ ಮಾರ್ಕೆಟ್ ಡೀಸೆಲ್ ಕಾರು.
ಫೀಚರ್‌ಗಳು ಮತ್ತು ಸೇಫ್ಟಿ
ಕರ್ವ್ ನ ಕ್ಯಾಬಿನ್ ಅನ್ನು ನೆಕ್ಸಾನ್ ಮತ್ತು ನೆಕ್ಸಾನ್ ಇವಿಯಂತೆ ನಿರ್ಮಿಸಲಾಗಿದೆ. ಡ್ಯುಯಲ್-ಟೋನ್ ಬರ್ಗಂಡಿ ಮತ್ತು ಬ್ಲ್ಯಾಕ್ ಥೀಮ್ ರೀತಿಯ ಕೆಲವು ಬದಲಾವಣೆಗಳನ್ನು ಹೊರತುಪಡಿಸಿ. ಡ್ಯಾಶ್‌ಬೋರ್ಡ್ ವಿನ್ಯಾಸ ಮತ್ತು ಸೆಂಟರ್ ಕನ್ಸೋಲ್ ಒಂದೇ ರೀತಿಯಿದೆ., ನಾಲ್ಕು-ಸ್ಪೋಕ್ ಸ್ಟೀರಿಂಗ್, ಹ್ಯಾರಿಯರ್ ಮತ್ತು ಸಫಾರಿಯಂತೆ ಇದೆ.
ಗೆಸ್ಚರ್ ಕಂಟ್ರೋಲ್ ಪವರ್ ಟೈಲ್ ಗೇಟ್, 18-ಇಂಚಿನ ಅಲಾಯ್ ವೀಲ್‌ಗಳು, ಫ್ಲಶ್ ಡೋರ್ ಹ್ಯಾಂಡಲ್‌ಗಳು, 12.3-ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಫುಲ್ ಡಿಜಿಟಲ್ ಡ್ರೈವರ್ ಡಿಸ್ ಪ್ಲೇ, ಪನೋರಮಿಕ್ ಸನ್ ರೂಫ್, ರಿಕ್ಲೈನಿಂಗ್ ರಿಯರ್ ಸೀಟ್ ಮತ್ತು ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳಿವೆ. ಕರ್ವ್‌ನ ಸುರಕ್ಷತಾ ಸೂಟ್ ಆರು ಏರ್ ಬ್ಯಾಗ್‌ಗಳು, ಲೆವೆಲ್ 2 ಅಡಾಸ್, ಇಎಸ್ ಸಿ, ನಾಲ್ಕು ಚಕ್ರಗಳಿಗೆ ಡಿಸ್ಕ್ ಬ್ರೇಕ್‌ಗಳು, ಟಿಪಿಎಂಎಸ್, 360-ಡಿಗ್ರಿ ಕ್ಯಾಮೆರಾ, ಆಟೋ-ಹೋಲ್ಡ್ ಜತೆಗೆ ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕಿಂಗ್ ಸಿಸ್ಟಮ್ ಕಾರಿನಲ್ಲಿದೆ.
ಪ್ರತಿಸ್ಪರ್ಧಿ ಕಾರುಗಳು
ಕರ್ವ್ ಹೊಸ ಸಿಟ್ರೋಯನ್ ಬಸಾಲ್ಟ್ ಕೂಪೆ-ಎಸ್ ಯುವಿಗೆ ಪೈಪೋಟಿ ನೀಡಲಿದೆ. ಮಿಡ್ ಸೈಜ್ ಎಸ್‌ಯುವಿಗಳಾದ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಮಾರುತಿ ಗ್ರ್ಯಾಂಡ್ ವಿಟಾರಾ, ಟೊಯೊಟಾ ಹೈರೈಡರ್, ಹೋಂಡಾ ಎಲಿವೇಟ್, ಫೋಕ್ಸ್‌ವ್ಯಾಗನ್ ಟೈಗನ್, ಎಂಜಿ ಆಸ್ಟರ್ ಮತ್ತು ಸ್ಕೋಡಾ ಕುಶಾಕ್‌ಗಳಿಗೂ ಪೈಪೋಟಿ ನೀಡಲಿದೆ.