Friday, 18th October 2024

ತಿರುಪತಿಯಲ್ಲೂ ಶ್ರೀರಾಮನಿಗೆ ಸ್ವಾಗತ ಕೋರಲು ಸಕಲ ಸಿದ್ಧತೆ

ತಿರುಪತಿ: ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ರಾಮನ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತಿದ್ದರೆ ಇತ್ತ ತಿರುಪತಿಯಲ್ಲಿ ಅದರ ನೇರ ದರ್ಶನ ಪಡೆಯಲು ಭಕ್ತರಿಗೆ ಅನುಕೂಲ ಮಾಡಲಾಗಿದೆ.
ಈಗಾಗಲೇ ತಿರುಪತಿಯಿಂದ ಒಂದು ಲಕ್ಷ ಲಡ್ಡು ಅಯೋಧ್ಯೆಗೆ ಕಳುಹಿಸಲಾಗಿದೆ. ತಿರುಪತಿ ಲಡ್ಡು ಪ್ರಸಾದವನ್ನು ಭಕ್ತರಿಗೆ ಅಯೋಧ್ಯೆಯಲ್ಲಿ ವಿತರಿಸ ಲಾಗುತ್ತದೆ. ಅಯೋಧ್ಯೆಯ ರಾಮಮಂದಿರ ಉದ್ಘಾಟನಾ ಸಮಾರಂಭದಲ್ಲಿ ಟಿಟಿಡಿ ಅಧ್ಯಕ್ಷ ಭೂಮನ ಕರುಣಾಕರ್ ರೆಡ್ಡಿ ಉಪಸ್ಥಿತರಿರುವರು. ಈ ವೇಳೆ ಹಣೆಯ ಮೇಲೆ ತಿಲಕ ಶ್ರೀರಾಮನ ನಾಮವಿರುವ ಕೆಂಪು ವಸ್ತ್ರವನ್ನು ಹಾಕಿಕೊಂಡು ಅಯೋಧ್ಯೆಗೆ ಆಗಮಿಸಿದ ಕರುಣಾಕರ ರೆಡ್ಡಿ ಅವರಿಗೆ ರಾಮಮಂದಿರ ಟ್ರಸ್ಟ್‌ನ ಪ್ರತಿನಿಧಿ ಸಾಧ್ವಿ ರೀತಂಬರಿ ಅವರು ಅದ್ಧೂರಿ ಸ್ವಾಗತ ಕೋರಿದರು.
ನಂತರ ಶ್ರೀ ಕರುಣಾಕರ ರೆಡ್ಡಿ ಅವರು ರಾಮ ಮಂದಿರಕ್ಕೆ ಭೇಟಿ ನೀಡಿ ಅಲ್ಲಿ ನಡೆಯುತ್ತಿರುವ ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಕಲಿಯುಗದಲ್ಲಿ ತಿರುಮಲದಲ್ಲಿ ಬೆಳಗಿದ ವೆಂಕಟೇಶ್ವರ ಸ್ವಾಮಿ, ತ್ರೇತಾಯುಗದಲ್ಲಿ ಶ್ರೀರಾಮಚಂದ್ರ ಮೂರ್ತಿ ಒಂದೇ ಎಂದು ಭೂಮನ ಹೇಳಿದರು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸಹಕರಿಸಿದ ಎಲ್ಲ ಭಕ್ತರಿಗಾಗಿ ಪ್ರಾರ್ಥಿಸಿದರು.
ಅಯೋಧ್ಯೆ ಕಾರ್ಯಕ್ರಮಗಳನ್ನು ಎಸ್‌ವಿಬಿಸಿ ತೆಲುಗು ವಾಹಿನಿಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಬಳಿಕ ಎಂದಿನಂತೆ ತಿರುಮಲ ಶ್ರೀವಾರಿ ಕಲ್ಯಾಣಂ ನೇರಪ್ರಸಾರವಾಗಲಿದೆ. ಭಕ್ತರು ಈ ವಿಷಯಗಳನ್ನು ಗಮನಿಸಬೇಕು ಮತ್ತು ಎಸ್‌ವಿಬಿಸಿ ತೆಲುಗು, ತಮಿಳು, ಕನ್ನಡ ಮತ್ತು ಹಿಂದಿ ವಾಹಿನಿ ಗಳಲ್ಲಿ ಅಯೋಧ್ಯೆ ಬಲರಾಮು ಮೂರ್ತಿ ಪ್ರಾಣಪ್ರತಿಷ್ಠಾ ಕಾರ್ಯಕ್ರಮವನ್ನು ವೀಕ್ಷಿಸುವಂತೆ ಟಿಟಿಡಿ ಮನವಿ ಮಾಡಿದೆ.