ಲಕ್ನೋ: ಉತ್ತರ ಪ್ರದೇಶದಲ್ಲಿ ಮತ್ತೆ ರೈಲು ಹಳಿಗಳ ಮೇಲೆ ಕಬ್ಬಿಣದ ರಾಡ್ ಪತ್ತೆಯಾಗಿದ್ದು (Train derailment Attempt), ಅದೃಷ್ಟವಶಾತ್ ಭಾರೀ ದುರಂತ ತಪ್ಪಿದೆ. ಲಲಿತ್‌ಪುರ ಜಿಲ್ಲೆಯ ಜಖೌರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರೈಲು ಹಳಿ ಮೇಲೆ ಕಬ್ಬಿಣದ ರಾಡ್‌ಗಳನ್ನು ಇಟ್ಟು ರೈಲನ್ನು ಹಳಿತಪ್ಪಿಸಲು ಯತ್ನಿಸಿದ ಆರೋಪದ ಮೇಲೆ ಪೊಲೀಸರು ಶನಿವಾರ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಗುರುವಾರ (ಅಕ್ಟೋಬರ್ 3) ರಾತ್ರಿ ದೆಲ್ವಾರಾ ರೈಲು ನಿಲ್ದಾಣ ಪ್ರದೇಶದಲ್ಲಿ, ರೈಲು ಸಂಖ್ಯೆ 12624 (ಪಾತಲ್ ಎಕ್ಸ್‌ಪ್ರೆಸ್) ಎಂಜಿನ್‌ಗೆ ಕಬ್ಬಿಣದ ರಾಡ್ ಸಿಲುಕಿದೆ. ಗೇಟ್‌ಮ್ಯಾನ್ ನೀಡಿದ ಮಾಹಿತಿಯ ಮೇರೆಗೆ ಲೊಕೊ ಪೈಲಟ್ ರೈಲನ್ನು ನಿಲ್ಲಿಸಿದ್ದರಿಂದ ದೊಡ್ಡ ರೈಲು ಅಪಘಾತ ತಪ್ಪಿತು. ಅಪರಿಚಿತ ವ್ಯಕ್ತಿಯೊಬ್ಬ ರೈಲು ಹಳಿ ಮೇಲೆ ಕಬ್ಬಿಣದ ರಾಡ್‌ಗಳನ್ನು ಇಟ್ಟು ರೈಲು ಹಳಿತಪ್ಪಿಸಲು ಯತ್ನಿಸಿದ್ದಾರೆ ಎಂದು ದೇಲ್ವಾರಾ ರೈಲ್ವೆ ನಿಲ್ದಾಣದ ಸ್ಟೇಷನ್ ಮಾಸ್ಟರ್ ಶುಕ್ರವಾರ ಜಖೌರಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ಲಲಿತ್‌ಪುರ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಎಂಡಿ ಮುಸ್ತಾಕ್ ಶನಿವಾರ ತಿಳಿಸಿದ್ದಾರೆ.
ಪೊಲೀಸರು ರೈಲ್ವೆ ಸಿಬ್ಬಂದಿ ಸತ್ಯಂ ಯಾದವ್ (32) ಎಂಬ ವ್ಯಕ್ತಿಯನ್ನು ಅರೆಸ್ಟ್ ಮಾಡಿದ್ದು, ಘಟನೆ ನಡೆದ ಸ್ಥಳದ ಸಮೀಪದಲ್ಲಿ ಈತ ಹಲವು ಕಬ್ಬಿಣದ ರಾಡ್‌ಗಳು ಮತ್ತು ಇತರ ವಸ್ತುಗಳನ್ನು ಇಟ್ಟುಕೊಂಡಿರುವುದು ಕಂಡುಬಂದಿದೆ ಎಂದು ಎಸ್‌ಪಿ ಹೇಳಿದರು. ಜಖೋರಾ ಪೊಲೀಸರು ಶನಿವಾರ ಯಾದವ್ ಮನೆ ಮೇಲೆ ದಾಳಿ ನಡೆಸಿ ಬಂಧಿಸಿದ್ದಾರೆ ಆತನ ಮನೆಯಿಂದ ಕದ್ದ ಕಬ್ಬಿಣದ ಸರಳುಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ
ಗುರುವಾರ ರಾತ್ರಿ ತಾನು ಕಬ್ಬಿಣದ ರಾಡ್‌ಗಳನ್ನು ಕದ್ದು ರೈಲ್ವೇ ಹಳಿಯಲ್ಲಿ ನಡೆದುಕೊಂಡು ಹೋಗುತ್ತಿದ್ದೆ ಎಂದು ಯಾದವ್ ಪೊಲೀಸರಿಗೆ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದು, ಏಕಾಏಕಿ ಪಾತಾಳ ಎಕ್ಸ್ ಪ್ರೆಸ್ ರೈಲು ಬಂದು ಅವಸರದಲ್ಲಿ ಕಬ್ಬಿಣದ ಸರಳುಗಳನ್ನು ರೈಲ್ವೆ ಹಳಿ ಮೇಲೆ ಎಸೆದು ಪರಾರಿಯಾಗಿದ್ದಾನೆ.
ಕೆಲವು ದಿನಗಲ ಹಿಂದೆ ಮಧ್ಯಪ್ರದೇಶದಲ್ಲೂ ಇಂತಹದ್ದೇ ಒಂದು ಘಟನೆ ನಡೆದಿದ್ದು, ಬುರ್ಹಾನ್‌ಪುರ ಜಿಲ್ಲೆಯಲ್ಲಿ ಸೆ.18ರಂದು ಸೇನಾ ಯೋಧರನ್ನು ಹೊತ್ತೊಯ್ಯುತ್ತಿದ್ದ ರೈಲನ್ನು ಗುರಿಯಾಗಿಸಿ ಭಾರೀ ಸ್ಫೋಟಕ್ಕೆ ಸಂಚು ರೂಪಿಸಿರುವ ವಿಚಾರ ಬೆಳಕಿಗೆ ಬಂದಿತ್ತು. ಸಗ್ಪಥಾ ರೈಲ್ವೇ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಸೇನೆಯ ವಿಶೇಷ ರೈಲೊಂದು ಜಮ್ಮು-ಕಾಶ್ಮೀರದಿಂದ ಕರ್ನಾಟಕಕ್ಕೆ ಹೊರಟಿತ್ತು. ಈ ರೈಲನ್ನು ಗುರಿಯಾಗಿಸಿ ಕಿಡಿಗೇಡಿಗಳು ಸ್ಫೋಟಕ್ಕೆ ಸಂಚು ರೂಪಿಸಿದ್ದರು. ರೈಲ್ವೇ ಹಳಿಯುದ್ದಕ್ಕೂ ಸ್ಫೋಟಕಗಳನ್ನು ಅಳವಡಿಸಿ ವಿಧ್ವಂಸಕ ಕೃತ್ಯಕ್ಕೆ ಪ್ಲ್ಯಾನ್ ಮಾಡಿಕೊಂಡಿದ್ದರು. ಸ್ಫೋಟಕಗಳ ಮೇಲೆ ರೈಲು ಹೋಗುತ್ತಿದ್ದಂತೆ ಲೋಕೋ ಪೈಲಟ್‌ಗೆ ಇದರ ಅರಿವಾಗಿದ್ದು, ತಕ್ಷಣ ರೈಲನ್ನು ನಿಲ್ಲಿಸಿದ್ದಾರೆ. ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ. ಸ್ಥಳಕ್ಕೆ ಭಯೋತ್ಪಾದಕ ನಿಗ್ರಹ ದಳ(ATS) ಮತ್ತು ಎನ್‌ಐಎ ಸ್ಥಳಕ್ಕೆ ಧಾವಿಸಿ ತನಿಖೆ ಕೈಗೆತ್ತಿಕೊಂಡಿತ್ತು.
ಈ ಸುದ್ದಿಯನ್ನೂ ಓದಿ: Train Accident: ಪೆಟ್ರೋಲಿಯಂ ಉತ್ಪನ್ನ ಸಾಗಿಸುತ್ತಿದ್ದ ಗೂಡ್ಸ್ ರೈಲು ಹಳಿ ತಪ್ಪಿ ಪಲ್ಟಿ