ನವದೆಹಲಿ: ವೈಷ್ಣೋದೇವಿ ಮಂದಿರದಲ್ಲಿ ಹೊಸ ವರ್ಷದ ದಿನದಂದೇ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 12 ಮಂದಿ ಮೃತಪಟ್ಟು, 13 ಮಂದಿ ಗಾಯಗೊಂಡಿದ್ದಾರೆ.
ದುರ್ಘಟನೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು, ಕಾಲ್ತುಳಿತ ಸಂಭವಿಸಿ ಜನರು ಮೃತಪಟ್ಟಿರುವುದು ದುರಾದೃಷ್ಟಕರ ಸಂಗತಿ. ಸುದ್ದಿ ತಿಳಿದು ಬಹಳ ನೋವಾಗಿದೆ ಎಂದು ಹೇಳಿದ್ದಾರೆ.
ಮಾತಾ ವೈಷ್ಣೋ ಭವನದಲ್ಲಿ ನೂಕುನುಗ್ಗಲು ಉಂಟಾಗಿ ದುರಂತ ಸಂಭವಿಸಿರುವುದು ಹೃದಯ ವಿದ್ರಾವಕ ವಾಗಿದೆ. ಕಾಲ್ತುಳಿತದಲ್ಲಿ ಜನರು ಪ್ರಾಣ ಕಳೆದುಕೊಂಡಿರುವುದು ಬೇಸರ ತರಿಸಿದೆ. ಗಾಯಾಳುಗಳು ಶೀಘ್ರಗತಿ ಯಲ್ಲಿ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಟ್ವೀಟ್ ಮಾಡಿದ್ದಾರೆ
ಜಮ್ಮುವಿನ ಕತ್ರಾದಲ್ಲಿರುವ ಮಾತಾ ವೈಷ್ಣೋ ದೇವಿಯಲ್ಲಿ ಕಾಲ್ತುಳಿತ ದುರಂತ ಸಂಭವಿಸಿದ ಬಳಿಕ ಪ್ರಧಾನಿ ಮೋದಿ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ. ಗಾಯಾಳುಗಳಿಗೆ ಸಾಧ್ಯವಿರುವ ಎಲ್ಲ ವೈದ್ಯಕೀಯ ನೆರವು ನೀಡಲು ಸೂಚನೆಗಳನ್ನು ನೀಡಿದ್ದಾರೆಂದು ತಿಳಿಸಿದ್ದಾರೆ.
ರಾಹುಲ್ ಗಾಂಧಿಯವರು ಟ್ವೀಟ್ ಮಾಡಿ, ಮಾತಾ ವೈಷ್ಣೋದೇವಿ ದೇಗುಲದಲ್ಲಿ ಕಾಲ್ತುಳಿತ ಸಂಭವಿಸಿದ್ದು ದುಃಖ ತಂದಿದೆ. ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇನೆ. ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.