ಉತ್ತರ ಪ್ರದೇಶದ ಸಿದ್ಧಾರ್ಥ್ ನಗರದ ಬನ್ಸಿ ಕೊಟ್ವಾಲಿಯ ಗೊನ್ಹಟಾಲ್ ಪ್ರದೇಶದಲ್ಲಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಪತಿಯನ್ನು ಆ್ಯಂಬುಲೆನ್ಸ್‌ನಲ್ಲಿ ಕರೆದುಕೊಂಡು ಹೋಗುತ್ತಿದ್ದ ಮಹಿಳೆಯ ಮೇಲೆ ಆಂಬ್ಯುಲೆನ್ಸ್ ಒಳಗೇ ಅತ್ಯಾಚಾರ (Sexual Abuse ನಡೆಸಲಾಗಿದೆ. ಅಷ್ಟೇ ಅಲ್ಲ, ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಆಕೆಯ ಪತಿಯನ್ನು ಆಂಬ್ಯುಲೆನ್ಸ್‌ನಿಂದ ಹೊರಗೆ ಎಸೆಯಲಾಗಿದೆ. ಈ ಘಟನೆಯ ಬಳಿಕ ಆಕೆಯ ಪತಿ ಗೋರಖ್ಪುರ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾರೆ ಎಂದು ವರದಿಯಾಗಿದೆ.
ಆಗಸ್ಟ್ 30ರ ರಾತ್ರಿ ಈ ಘಟನೆ ನಡೆದಿದ್ದು, ಸಂತ್ರಸ್ತೆ ತನ್ನ ಅನಾರೋಗ್ಯ ಪೀಡಿತ ಪತಿ ಹರೀಶ್ ಅವರೊಂದಿಗೆ ಖಾಸಗಿ ಆಂಬ್ಯುಲೆನ್ಸ್‌ನಲ್ಲಿ ಮನೆಗೆ ಹಿಂದಿರುಗುತ್ತಿದ್ದರು. ಹರೀಶ್ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಬಸ್ತಿಯ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆದಿದ್ದರು. ಅವರ ಸ್ಥಿತಿ ಮತ್ತಷ್ಟು ಹದಗೆಟ್ಟಿದ್ದರಿಂದ, ಸಂತ್ರಸ್ತೆಯ ಪತಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಲಕ್ನೋಗೆ ಕಳುಹಿಸಲಾಯಿತು. ಆದರೆ ಲಕ್ನೋ ವೈದ್ಯಕೀಯ ಕಾಲೇಜಿನಲ್ಲಿ ಬೆಡ್ ಖಾಲಿ ಇಲ್ಲದ ಕಾರಣ, ಸಂತ್ರಸ್ತೆ ತನ್ನ ಪತಿಯನ್ನು ಇಂದಿರಾ ನಗರದ ಇಂಪೀರಿಯಾ ನ್ಯೂರೋಸೈನ್ಸ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಿದ್ದಳು. ಆದರೆ ಆಸ್ಪತ್ರೆಯ ವೆಚ್ಚ ಭರಿಸಲು ಆಗದ ಕಾರಣ, ಆಕೆ ಎರಡು ದಿನಗಳ ಚಿಕಿತ್ಸೆಯ ನಂತರ ಪತಿಯನ್ನು ಮನೆಗೆ ಕರೆದೊಯ್ಯಲು ನಿರ್ಧರಿಸಿ ಖಾಸಗಿ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿಕೊಂಡು ತನ್ನ ಗ್ರಾಮಕ್ಕೆ ಹಿಂದಿರುಗುತ್ತಿದ್ದಾಗ, ಆಂಬ್ಯುಲೆನ್ಸ್ ಚಾಲಕ ಮುಂದೆ ಪೊಲೀಸ್ ತಪಾಸಣೆ ಇದೆ ಎಂದು ಹೇಳಿ ಮುಂಭಾಗದ ಸೀಟಿನಲ್ಲಿ ಕುಳಿತುಕೊಳ್ಳುವಂತೆ ಆಕೆಗೆ ಒತ್ತಾಯಿಸಿದ್ದಾನೆ.
ಆಗ ಅವಳು ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡು ಮುಂದೆ ಕುಳಿತಾಗ ಚಾಲಕ ಮತ್ತು ಅವನ ಸಹಾಯಕ ಇಬ್ಬರೂ ಅವಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಅವಳು ಪ್ರತಿರೋಧಿಸಿದಾಗ ಮತ್ತು ಕಿರುಚಲು ಪ್ರಯತ್ನಿಸಿದಾಗ, ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಪತಿಯನ್ನು ವಾಹನದಿಂದ ನಿರ್ಜನ ಪ್ರದೇಶದಲ್ಲಿ ಎಸೆದು ಆಕೆಯ ಆಭರಣಗಳನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ. ಇದರಿಂದಾಗಿ ಆಕೆಯ ಪತಿಗೆ ಮತ್ತಷ್ಟು ಗಾಯವಾಗಿ ಆತನ ಸ್ಥಿತಿ ಗಂಭೀರವಾಗಿ ಮೃತಪಟ್ಟಿದ್ದಾನೆ.
ಇದನ್ನೂ ಓದಿ: ಮಹಿಳೆ ಮೇಲೆ ಅತ್ಯಾಚಾರ, ಬೆತ್ತಲೆಯಾಗಿ ನೃತ್ಯ ಮಾಡುವಂತೆ ಒತ್ತಾಯಿಸಿ ಬೆಲ್ಟ್‌ನಿಂದ ಹಲ್ಲೆ
ಸಂತ್ರಸ್ತೆ ಈ ಬಗ್ಗೆ ಬಸ್ತಿಯ ಪೊಲೀಸರಿಗೆ ದೂರು ನೀಡಿದರೂ ಕೂಡ ಆಂಬ್ಯುಲೆನ್ಸ್ ಸಿಬ್ಬಂದಿಯನ್ನು ಬಂಧಿಸಲು ಬಸ್ತಿಯ ಪೊಲೀಸರು ಯಾವುದೇ ಪ್ರಯತ್ನ ಮಾಡಲಿಲ್ಲ ಎಂದು ಸಂತ್ರಸ್ತೆ ಹೇಳಿದ್ದಾರೆ. ಪತಿಯ ಅಂತಿಮ ವಿಧಿಗಳು ಪೂರ್ಣಗೊಂಡ ನಂತರ, ಸಂತ್ರಸ್ತೆ ಲಕ್ನೋದ ಗಾಜಿಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಆದರೆ ಆಕೆಯ ಸಹೋದರ ಅನೂಪ್ ಪ್ರಕಾರ, ಆಂಬ್ಯುಲೆನ್ಸ್ ಕಾರ್ಮಿಕರಲ್ಲಿ ಒಬ್ಬನನ್ನು ಪೊಲೀಸರು ಬಂಧಿಸಿದರೂ ಕೂಡ ನಂತರ ಬಿಡುಗಡೆ ಮಾಡಿದ್ದಾರೆ.