Wednesday, 27th November 2024

ಅಂಬೇಡ್ಕರ್ ವಿಚಾರಧಾರೆಗಳನ್ನು ಅಳವಡಿಸಿಕೊಳ್ಳಲು ನಿರಂತರ ಅಧ್ಯಯನ ಅಗತ್ಯ

ತುಮಕೂರು: ವಿದ್ಯಾರ್ಥಿಗಳು ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಅಳವಡಿಸಿಕೊಳ್ಳಲು ನಿರಂತರವಾಗಿ ಅಧ್ಯಯನದಲ್ಲಿ ತೊಡಗಿಸಿಕೊಳ್ಳುವುದು ಅಗತ್ಯ ಎಂದು ತುಮಕೂರು ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಕರಿಯಣ್ಣ ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತುಮಕೂರು ವಿಶ್ವವಿದ್ಯಾಲಯದ ಡಾ: ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರ, ವಿಶ್ವವಿದ್ಯಾಲಯ ಕಲಾ ಕಾಲೇಜು, ವಿಶ್ವವಿದ್ಯಾ ನಿಲಯ ವಿಜ್ಞಾನ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ “ಭಾರತ ರತ್ನ ಡಾ: ಬಿ.ಆರ್. ಅಂಬೇಡ್ಕರ್ ಓದು” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಡಾ.ಬಿ.ಆರ್. ಅಂಬೇಡ್ಕರ್ ಅವರು ಈ ದೇಶದ ಎಲ್ಲಾ ಶೋಷಿತ ಸಮುದಾಯಗಳು ನಾಯಕರಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಮುಂದೆ ಬರಲು ಶಕ್ತಿ ತುಂಬಿದ್ದಾರೆ. ಜಗತ್ತಿನ ಶ್ರೇಷ್ಟ ಆರ್ಥಿಕ ತಜ್ಞರ ಜೊತೆ ನಿಕಟ ಸಂಬ0ಧ ಹೊಂದಿದುದರ ಫಲವಾಗಿ ಒಬ್ಬ ಆರ್ಥಿಕ ಆಯಾಮದ ಮೇಧಾವಿಯನ್ನು ಅಂಬೇಡ್ಕರ್ ಅವರಲ್ಲಿ ಕಾಣಲು ಸಾಧ್ಯವಾಯಿತು. ಸಾಮಾಜಿಕ ಪಿಡುಗುಗಳ ವಿರುದ್ಧ ಎಚ್ಚರದಿಂದ ಇದ್ದು, ದುಶ್ಚಟಗಳಿಗೆ ಬಲಿಯಾಗದೇ ಬಲಿಷ್ಠ ಭಾರತ ನಿರ್ಮಾಣ ಮಾಡಬೇಕೆಂದು ತಿಳಿಸಿದರು.

ತುಮಕೂರು ವಿಶ್ವ ವಿದ್ಯಾನಿಲಯದ ಕುಲಸಚಿವ ಪ್ರೊ. ಕೆ.ಶಿವಚಿತ್ತಪ್ಪ ಮಾತನಾಡಿ, ಸಾಮಾಜಿಕ ನ್ಯಾಯ, ಸಮಾನತೆ, ಬ್ರಾತೃತ್ವದ ಕಲ್ಪನೆಯ ಭಾರತದ ಕನಸು ಹೊತ್ತ ಅಂಬೇಡ್ಕರ್ ಅವರು, ತಮ್ಮ ವಿಚಾರಧಾರೆಗಳ ಮೂಲಕ ಈ ದೇಶದ ಜನರಿಗೆ ಬೆಳಕಾಗಿ ದ್ದಾರೆ. ಜ್ಞಾನದ ಬೆಳಕು ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಪ್ರಜ್ವಲಿಸಿ, ದೇಶದ ಬೌದ್ಧಿಕ ಆಸ್ತಿಯಾಗಬೇಕು. ಅಕ್ಷರವನ್ನೇ ಆಯುಧ ವಾಗಿಸಿಕೊಂಡು ದೇಶ ಕಟ್ಟುವಲ್ಲಿ ಸದಾ ತೊಡಗಿಕೊಳ್ಳಬೇಕು ಎಂದು ತಿಳಿಸಿದರು.

ಪರೀಕ್ಷಾಂಗ ಕುಲಸಚಿವ ಪ್ರೊ: ನಿರ್ಮಲ್‌ರಾಜು ಮಾತನಾಡಿ, ಅಂಬೇಡ್ಕರ್ ಓದು ಕಾರ್ಯಕ್ರಮದಿಂದ ಅಂಬೇಡ್ಕರ್ ಅವರ ಚಿಂತನೆಗಳನ್ನು ಸಾಂದರ್ಭಿಕವಾಗಿ ಅರಿಯುವುದಕ್ಕಿಂತ ನಿತ್ಯ ಜೀವನದಲ್ಲಿ ಅವರಿಗಿದ್ದ ಜ್ಞಾನದಾಹ, ಸಮಯಪ್ರಜ್ಞೆ, ಪಾಂಡಿತ್ಯ, ಶಿಸ್ತು, ನಾಯಕತ್ವ, ಛಲ ಎಲ್ಲವೂ ಅತ್ಯಗತ್ಯವಾಗಿ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು. ಅಂಬೇಡ್ಕರ್ ಅವರನ್ನು ಓದುವುದಲ್ಲ ಈ ದೇಶದ ಯುವಕರೇ ಅಂಬೇಡ್ಕರ್ ಆಗಬೇಕು. ಅವರ ಮೌಲ್ಯಗಳನ್ನು ಪುನರುಜ್ಜೀವನ ಮಾಡಬೇಕು. ಶಿಕ್ಷಣ, ಸಂಘಟನೆ ಹೋರಾಟದಿಂದ ಈ ದೇಶದ ಸಾಮಾಜಿಕ ನ್ಯಾಯ, ಸಮಾನತೆ, ಪ್ರಜಾಸತ್ತಾತ್ಮಕ ಮೌಲ್ಯಗಳು, ನೈತಿಕ ಮೌಲ್ಯಗಳು ಗಟ್ಟಿಗೊಳ್ಳುವಂತೆ ಅಂಬೇಡ್ಕರ್ ಆಗಿ ಪರಿವರ್ತನೆಗೊಳ್ಳಬೇಕು. ಜಗತ್ತಿಗೆ ಜ್ಞಾನದ ಚಿಹ್ನೆಯಾದ ಅಂಬೇಡ್ಕರ್ ಅವರ ಜ್ಞಾನ ದಾಹದ ವ್ಯಕ್ತಿತ್ವ ಇಂದಿನ ಯುವ ಸಮುದಾಯಕ್ಕೆ ಆದರ್ಶವಾಗಬೇಕು ಎಂದರು.

ಡಾ.ಬಿ.ಆರ್.ಅಂಬೇಡ್ಕರ್ ಕೇಂದ್ರದ ನಿರ್ದೇಶಕ ಪ್ರೊ.ಬಸವರಾಜು ಮಾತನಾಡಿ, ಅಂಬೇಡ್ಕರ್ ಅವರ ವಿಚಾರಧಾರೆ ಮತ್ತು ವ್ಯಕ್ತಿತ್ವವನ್ನು ಜಾತಿಯ ಕಾರಣಕ್ಕೆ ಸಂಕುಚಿತಗೊಳಿಸಲಾಗಿದೆ. ಚಿಂತಕರು ಮಾನವ ಹೊಸ ಚಿಂತನೆಗಳಲ್ಲಿ ಬೌದ್ಧಿಕ ವಿಕಾಸ ಗೊಳ್ಳಲು ಹೊಸ ಮಾದರಿಯನ್ನು ನೀಡಿದರೆ ಸರ್ವಶ್ರೇಷ್ಠ ರೀತಿಯಲ್ಲಿ ಜಗತ್ತೇ ಒಪ್ಪುವಂತ ಅನೇಕ ಉದಾತ್ತ ಚಿಂತನೆಗಳನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿ ದೇಶದ ಕೀರ್ತಿಯನ್ನು ಭೂತ, ಭವಿಷ್ಯ, ವರ್ತಮಾನಕ್ಕೆ ಒಗ್ಗುವ ರೀತಿಯಲ್ಲಿ ವಿಸ್ತರಿಸಿದ್ದಾರೆ. ಇವರ ಎಲ್ಲಾ ಸಾಧನೆಗಳು ಇಂದಿನ ಯುವ ಸಮುದಾಯಕ್ಕೆ ಮಾದರಿಯಾಗಬೇಕು ಎಂದು ತಿಳಿಸಿದರು.

ಅಂಬೇಡ್ಕರ್ ಓದು ಕುರಿತು ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ತುಮಕೂರು ವಿಶ್ವವಿದ್ಯಾನಿಲಯದ ಕಲಾ ಕಾಲೇಜಿನ ಪ್ರಥಮ ಬಿ.ಎ ವಿದ್ಯಾರ್ಥಿ ರಂಗನಾಥ್ ಪ್ರಥಮ ಬಹುಮಾನ, ಸುಪ್ರಿತ ಜಿ, ದ್ವಿತೀಯ ಬಹುಮಾನ, ಮಹಾಲಕ್ಷ್ಮೀಜಿ ತೃತೀಯ ಬಹುಮಾನ; ಆಶುಭಾಷಣ ಸ್ಪರ್ಧೆಯಲ್ಲಿ ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜಿನ ಪ್ರಥಮ ಬಿ.ಎಸ್ಸಿ ವಿದ್ಯಾರ್ಥಿನಿ ಉಷಾರಾಣಿ ಪ್ರಥಮ ಬಹುಮಾನ, ವಿಶ್ವ ಎಸ್.ಜಿ ದ್ವಿತೀಯ ಬಹುಮಾನ, ವಿನಯ್ ಪಿ.ವಿ ತೃತೀಯ ಬಹುಮಾನ; ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಉಮೇಶ್ ಕೆ.ಪಿ, ದ್ವಿತೀಯ ಬಹುಮಾನವನ್ನು ಶ್ರೀಲಕ್ಷ್ಮೀ ಎ.ಜೆ. ಅವರು ಪಡೆದಿರುತ್ತಾರೆ.

ವಿಜೇತರಿಗೆ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ.ಶೇಟ್ ಪ್ರಕಾಶ್ ಎಂ. ಬಹುಮಾನ ವಿತರಣೆ ಮಾಡಿದರು. ಸಂಶೋಧನಾ ಸಹಾಯಕ ಕೆ.ಎನ್.ಲಕ್ಷ್ಮೀರಂಗಯ್ಯ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಡಾ: ಆಶಾರಾಣಿ, ಹನುಮಯ್ಯ, ಗಾಯಿತ್ರಿ, ಸಂಶೋಧನಾರ್ಥಿ ಮಲ್ಲಿಕಾರ್ಜುನ್ ಹಾಜರಿದ್ದರು.