Wednesday, 27th November 2024

Chikkaballapur News: ದೇಶದ ಸರ್ವಾಂಗೀಣ ಪ್ರಗತಿ ಸಾಧಿಸಲು ಸಂವಿಧಾನವೇ ಕಾರಣವಾಗಿದೆ: ಮುಖ್ಯ ಶಿಕ್ಷಕಿ ರಾಮಸುಬ್ಬಮ್ಮ. ಜಿ

ಬಾಗೇಪಲ್ಲಿ: ಭಾರತ ದೇಶದ ಸಂವಿಧಾನ ಪ್ರಪಂಚದಲ್ಲಿಯೇ ಅತಿದೊಡ್ಡ ಲಿಖಿತ ಸಂವಿಧಾನ. ಸಂವಿಧಾನ ಭಾರತದಂತ ಬೃಹತ್ ವಿಸ್ತಾರವುಳ್ಳ ಹತ್ತಾರು ಧರ್ಮ, ಸಾವಿರಾರು ಜಾತಿ, ಭಾಷೆ, ಸಂಸ್ಕೃತಿ ಆಚರಣೆಗಳುಳ್ಳ ಜನರನ್ನು ಒಗ್ಗೂಡಿಸಿಕೊಂಡು ದೇಶದ ಸರ್ವಾಂಗೀಣ ಪ್ರಗತಿ ಸಾಧಿಸಲು ಸಂವಿಧಾನದ ಕಾರಣವಾಗಿದೆ ಎಂದು ಘಂಟವಾರಿಪಲ್ಲಿ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕಿ ರಾಮಸುಬ್ಬಮ್ಮ. ಜಿ ಹೇಳಿದರು.

ಕಸಬಾ ಹೋಬಳಿ ಘಂಟಂವಾರಿಪಲ್ಲಿ ಸರ್ಕಾರಿ ಪ್ರೌಢಶಾಲೆಯಲ್ಲಿ ಸಂವಿಧಾನದ ದಿನಾಚರಣೆ ಅಂಗವಾಗಿ  ಮಾತನಾಡಿದ ಅವರು ೧೯೪೭ ರ ಆಗಸ್ಟ್ ೧೫ ರಂದು ಬ್ರಿಟೀಷರಿಂದ ಭಾರತ ದೇಶ ಸ್ವಾತಂತ್ರ‍್ಯ ಪಡೆದುಕೊಂಡಿತು. ನಂತರ ದೇಶವನ್ನು ಮುನ್ನಡೆಸುವ ಸಲುವಾಗಿ ಪ್ರಜಾ ಪ್ರಭುತ್ವ ಸರ್ಕಾರವನ್ನು ಒಪ್ಪಿಕೊಳ್ಳಲಾಯಿತು. ದೇಶದ ಹಾಗು ಪ್ರಾಂತೀಯ ಪ್ರಜಾ ಸರ್ಕಾರಗಳ ರಚನೆ, ಶಾಸಕಾಂಗ ಹಾಗು ಸಂಸತ್ತಿನ ಕಾರ್ಯಗಳು, ಕಾರ್ಯಾಂಗದ ಚಟುವಟಿಕೆಗಳು, ನ್ಯಾಯಪಾಲನೆ ರೀತಿನೀತಿಗಳ ವಿಸ್ತೃತವಾದ ವಿವರಣೆಯುಳ್ಳ ಸರ್ವಕಾಲಕ್ಕು ಹೊಂದಿಕೊಳ್ಳುವ ದೇಶದ ಕಾನೂನನ್ನು ಡಾ.ಬಿ.ಆರ್.ಅಂಬೇಡ್ಕರ್ ನೇತೃತ್ವದಲ್ಲಿ ಸಂವಿಧಾನ ರಚಿಸಲಾಯಿತು ಎಂದು ಹೇಳಿದರು.

ಶಿಕ್ಷಕಿ ಎನ್.ಎನ್.ಸಂಧ್ಯಾ ಪ್ರತಿ ವರ್ಷ ನವೆಂಬರ್ ೨೬ ರಂದು ಸಂವಿಧಾನ ದಿನವಾಗಿ ಆಚರಿಸಲು ಸಂಕಲ್ಪ ಮಾಡಿತು. ಭಾರತ ದೇಶವಾಸಿಗಳ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಔದ್ಯೋಗಿಕ ಸಮಾನತೆ ಸ್ವಾತಂತ್ರ‍್ಯ ಹಕ್ಕುಗಳ ರಕ್ಷಿಸಿ ಎಲ್ಲರು ಭ್ರಾತೃತ್ವ ಸಹೋದರ ಭಾವನೆಯಿಂದ ಬಾಳುವಂತೆ ಅನುವುಮಾಡಿಕೊಟ್ಟಿರುವ ದೇಶದ ಪ್ರಬಲ ಕಾನೂನೆ ನಮ್ಮ ಸಂವಿಧಾನ. ಸಂವಿಧಾನ ನಮ್ಮ ಸ್ವಾಭಿಮಾನದ ಸಂಕೇತ. ಸಾರ್ವಭೌಮ ರಾಷ್ಟçದ ಹೆಗ್ಗುರುತು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಹ ಶಿಕ್ಷಕ ಕೆ.ಬಿ.ಆಂಜನೇಯ ರೆಡ್ಡಿ ಶಾಲಾ ಮಕ್ಕಳಿಗೆ ಸಂವಿಧಾನದ ಪ್ರತಿಜ್ಞಾ ವಿಧಿ ಬೋಧಿಸಿದರು.

ಈ ಸಂದರ್ಭದಲ್ಲಿ ಶಿಕ್ಷಕರಾದ ಜಿ.ವಿ.ಚಂದ್ರಶೇಖರ್, ಸಿ.ಎನ್.ನಾರಾಯಣ ಸ್ವಾಮಿ, ಎಲ್.ರವಿ,ಎನ್.ವರಲಕ್ಷ್ಮೀ,  ಸಿಬ್ಬಂದಿಗಳಾದ ಹೆಚ್.ಆರ್.ರಘುನಾಥ್, ರಾಮಚಂದ್ರಪ್ಪ ಹಾಗೂ ಶಾಲಾ ಮಕ್ಕಳು ಹಾಜರಿದ್ದರು.