Saturday, 14th December 2024

ಮೀಸಲಾತಿ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಇಂದು ಕಡೆಯ ದಿನ

#BBMP

ಬೆಂಗಳೂರು: ಬಿಬಿಎಂಪಿ ಚುನಾವಣೆಯ ಸಂಬಂಧ ಮೀಸಲಾತಿ ಪಟ್ಟಿಗೆ ಪ್ರತಿಪಕ್ಷಗಳು ಸೇರಿದಂತೆ ಆಡಳಿತ ಪಕ್ಷದ ಸದಸ್ಯ ರಿಂದಲೂ ತೀವ್ರವಾದ ಆಕ್ಷೇಪ ಕೇಳಿ ಬಂದಿತ್ತು. ಆಕ್ಷೇಪಣೆಯನ್ನು ಸಲ್ಲಿಸಲು ಆ.10 ಕಡೆಯ ದಿನವಾಗಿದೆ.

2000ಕ್ಕೂ ಹೆಚ್ಚು ಆಕ್ಷೇಪಣೆಗಳು ಸಲ್ಲಿಕೆಯಾಗಿದೆ ಎಂಬ ಮಾಹಿತಿಯಿದ್ದು, ಇದನ್ನು ಪರಿಶೀಲನೆ ಮಾಡಿ ವಾರದೊಳಗೆ ಮೀಸಲಾತಿ ಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಲು ಚಿಂತಿಸಿದೆ.

ಬಿಬಿಎಂಪಿಯಲ್ಲಿದ್ದ 198 ವಾರ್ಡ್‌ಗಳನ್ನು 2011ರ ಜನಸಂಖ್ಯಾ ಆಧಾರದಲ್ಲಿ 243 ವಾರ್ಡ್‌ಗಳಾಗಿ ಮರು ವಿಂಗಡಣೆಯನ್ನು ಮಾಡಲಾಯಿತು. ಮರುವಿಂಗಡಣೆ ಬಳಿಕ ಸುಪ್ರೀಂ ಕೋರ್ಟ್‌ ಬೀಸಿದ ಚಾಟಿಗೆ ಬೆದರಿದ ರಾಜ್ಯ ಸರ್ಕಾರ ತರಾತುರಿಯಲ್ಲೇ ಮೀಸಲಾತಿ ಪಟ್ಟಿಯನ್ನು ಬಿಡುಗಡೆ ಮಾಡಿತ್ತು.

ಮೀಸಲಾತಿ ಪ್ರಕಟಿಸುವ ವೇಳೆ ಬಿಬಿಎಂಪಿ ಕಾಯ್ದೆ ಉಲ್ಲಂಘನೆಯಾಗಿದೆ ಎನ್ನಲಾಗಿದೆ. ಬಿಜೆಪಿ ತನಗೆ ಅನುಕೂಲವಾಗುವಂತೆ ಮೀಸಲಾತಿ ಪಟ್ಟಿ ಬಿಡುಗಡೆ ಮಾಡಿದೆ. ಈ ಮೀಸಲಾತಿಗೆ ತೀವ್ರವಾದ ಆಕ್ಷೇಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮೀಸಲಾತಿಯನ್ನು ಅಲ್ಪ ತಿದ್ದುಪಡಿ ಮಾಡಿ ಬಿಡುಗಡೆ ಮಾಡುವ ಸಾಧ್ಯತೆಗಳಿವೆ.