Friday, 13th December 2024

ಬಿಬಿಎಂಪಿ ಪಶ್ಚಿಮ ವಲಯ ಕಚೇರಿ ಮೇಲೆ ಲೋಕಾಯುಕ್ತ ದಾಳಿ

lokayukta raid

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪಶ್ಚಿಮ ವಲಯ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.

4 ಲಕ್ಷ ಹಣದೊಂದಿಗೆ ಅಧಿಕಾರಿ, ಅವರ ಪಿಎ ವಶಕ್ಕೆ ಪಡೆಯಲಾಗಿದೆ. ಸೋಮ ವಾರ ಮಧ್ಯಾಹ್ನ ಮಲ್ಲೇಶ್ವರದಲ್ಲಿರುವ ಬಿಬಿಎಂಪಿ ಪಶ್ಚಿಮ ವಿಭಾಗದ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ.

ಲೋಕಾಯುಕ್ತ ಎಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್, ಬೆಂಗಳೂರು ಲೋಕಾಯುಕ್ತ ಎಸ್‌ಪಿ ಶ್ರೀನಾಥ್ ಜೋಶಿ ನೇತೃತ್ವದಲ್ಲಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ.

ಖಾತೆ ಬದಲಾವಣೆ ವಿಚಾರಕ್ಕೆ ಸಂಬಂಧಿಸಿ ದೂರು ನೀಡಲಾಗಿತ್ತು. ಈ ದೂರಿನ ಅನ್ವಯವೇ ದಾಳಿ ನಡೆಸಲಾಗಿದೆ ಎಂಬ ಮಾಹಿತಿ ಪ್ರಾಥಮಿಕ ಲಭ್ಯವಾಗಿದೆ. ಪಶ್ಚಿಮ ವಿಭಾಗದ ಜಂಟಿ ಆಯುಕ್ತ ಶ್ರೀನಿವಾಸ್ ಖಾತೆ ಬದಲಾವಣೆ ಮಾಡಲು ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದರು.

ಡಿವೈಸ್‌ಪಿ ಶಂಕರನಾರಾಯಣ, ಮಂಜಯ್ಯ ನೇತೃತ್ವದಲ್ಲಿ ಲೋಕಾಯುಕ್ತ ವಿಭಾಗದ 8 ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಖಾತೆ ಬದಲಾವಣೆ ಮಾಡಲು ನಾಲ್ಕೂವರೆ ಲಕ್ಷಕ್ಕೆ ಬೇಡಿಕೆ ಇಡಲಾಗಿತ್ತು ಎಂಬುದು ಆರೋಪವಾಗಿದೆ.

ಕರ್ನಾಟಕ ಹೈಕೋರ್ಟ್ ಆದೇಶದ ಅನ್ವಯ ಎಸಿಬಿ ರದ್ದುಗೊಳಿಸಿ, ಎಸಿಬಿಯ ಎಲ್ಲಾ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ವಹಿಸಿದ ಬಳಿಕ ನಡೆದ ಮೊದಲ ದಾಳಿ ಇದಾಗಿದೆ.

ಕರ್ನಾಟಕ ಹೈಕೋರ್ಟ್ ಆದೇಶದಂತೆ ಎಸಿಬಿ ರದ್ದುಗೊಳಿಸಲಾಗಿತ್ತು. ರಾಜ್ಯ ಸರ್ಕಾರ ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ಹಿಂದೆ ನೀಡಿದ್ದ ಅಧಿಕಾರ ಮರುಸ್ಥಾಪಿಸಿ ಶುಕ್ರವಾರ ಆದೇಶ ಹೊರಡಿಸಿತ್ತು.