Saturday, 27th July 2024

ಮಹಿಳೆಯರಿಗೆ ಸರ್ಕಾರಿ ಬಸ್‌ನಲ್ಲಿ ಉಚಿತ ಪ್ರಯಾಣ: ನಮ್ಮ ಮೆಟ್ರೋಗೆ ಆತಂಕ

ಬೆಂಗಳೂರು: ಕಾಂಗ್ರೆಸ್ ಘೋಷಣೆ ಮಾಡಿದ 5 ಗ್ಯಾರಂಟಿಗಳಲ್ಲಿ ಮಹಿಳೆ ಯರಿಗೆ ಸರ್ಕಾರಿ ಬಸ್‌ನಲ್ಲಿ ಉಚಿತ ಪ್ರಯಾಣ ಘೋಷಣೆ ನಮ್ಮ ಮೆಟ್ರೋದ ಆತಂಕಕ್ಕೆ ಕಾರಣವಾಗಿದೆ.

ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ 5 ಗ್ಯಾರಂಟಿ ಗಳ ಬಗ್ಗೆ ಘೋಷಣೆಯಾಗಲಿದೆ.

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಘೋಷಣೆಯಡಿ ರಾಜ್ಯದ ಮಹಿಳೆಯರಿಗೆ ಸರ್ಕಾರಿ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ಒದಗಿಸಲು ಈಗಾಗಲೇ ಸಚಿವ ಸಂಪುಟ ಸಭೆಯಲ್ಲಿ ತಾತ್ವಿಕ ಒಪ್ಪಿಗೆ ನೀಡಿದೆ. ಈ ಸೌಲಭ್ಯ ಬೆಂಗಳೂರು ನಗರದಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್‌ಗಳಿಗೆ ಸಹ ಅನ್ವಯವಾಗುತ್ತದೆ.

ನಮ್ಮ ಮೆಟ್ರೋದಲ್ಲಿ ಪ್ರತಿದಿನ ಸುಮಾರು 5.80 ಲಕ್ಷ ಜನರು ಸಂಚಾರ ನಡೆಸುತ್ತಾರೆ. ಇವರಲ್ಲಿ ಸುಮಾರು 2.5 ಲಕ್ಷ ಮಹಿಳಾ ಪ್ರಯಾಣಿಕರು. ಮಹಿಳೆಯರನ್ನು ಸೆಳೆಯಲು ಮೆಟ್ರೋ ಪ್ರತಿ ರೈಲಿನಲ್ಲಿಯೂ ಮಹಿಳೆಯರಿಗಾಗಿ ಪ್ರತ್ಯೇಕ ಬೋಗಿ ಆಳವಡಿಕೆ ಮಾಡಿದೆ.

ಬಿಎಂಆರ್‌ಸಿಎಲ್‌ ಈ ವರ್ಷದ ಅಂತ್ಯದ ವೇಳೆಗೆ ಕೆ. ಆರ್. ಪುರ-ಬೈಯಪ್ಪನಹಳ್ಳಿ, ಆರ್. ವಿ. ರಸ್ತೆ-ಬೊಮ್ಮಸಂದ್ರ, ನಾಗಸಂದ್ರ-ಬಿಐಇಸಿ ನಡುವೆ ನಮ್ಮ ಮೆಟ್ರೋ ಸಂಚಾರ ಆರಂಭಿಸಿ ಹೆಚ್ಚು ಪ್ರಯಾಣಿಕರನ್ನು ಸೆಳೆಯಲು ಮುಂದಾಗಿದೆ. ಆದರೆ ಈಗ ಕಾಂಗ್ರೆಸ್‌ನ ಗ್ಯಾರಂಟಿ ಬಿಎಂಆರ್‌ಸಿಎಲ್‌ಗೆ ಮಹಿಳಾ ಪ್ರಯಾಣಿಕರು ದೂರವಾಗುತ್ತಾರೆ ಎಂಬ ಆತಂಕ ತಂದಿದೆ.

ಬಿಎಂಆರ್‌ಸಿಎಲ್ ನಿರೀಕ್ಷೆಯಂತೆ ಮೆಟ್ರೋ ಆದಾಯ ಸಂಗ್ರಹವಾಗುತ್ತಿಲ್ಲ. ನಷ್ಟದಲ್ಲಿರುವ ನಿಗಮಕ್ಕೆ ಈಗ ಮಹಿಳಾ ಪ್ರಯಾಣಿಕರು ಬಸ್‌ಗಳತ್ತ ಸಾಗಿದರೆ ಇನ್ನಷ್ಟು ನಷ್ಟವಾಗಲಿದೆ.

error: Content is protected !!