Thursday, 26th December 2024

Camp: ಯಶಸ್ವಿಯಾಗಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ

ಗೌರಿಬಿದನೂರು: ಜನಸಾಮಾನ್ಯರ ಆರೋಗ್ಯವನ್ನು ಕಾಪಾಡಲು ಇಂತಹ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಗಿಂದಾಗ್ಗೆ ಹಮ್ಮಿಕೊಳ್ಳುವ ಮೂಲಕ ಬಡಜನರಿಗೆ ಸಾಕಷ್ಟು ಪ್ರಯೋಜನವಾಗಲಿದೆ ಎಂದು ಶಾಸಕ ಕೆಎಚ್.ಪುಟ್ಟಸ್ವಾಮಿಗೌಡರು ತಿಳಿಸಿದರು.

ಅವರು ತಾಲೂಕಿನ ತೊಂಡೇಬಾವಿ ರೈಲ್ವೆ ನಿಲ್ದಾಣದ ಸಮೀಪವಿರುವ ಶ್ರೀ ಸ್ವಾಮಿ ಶಿವಾನಂದ ಸೇವಾಶ್ರಮ ಶಾಲೆಯ ಆವರಣದಲ್ಲಿ,ಆರ್ ಎಲ್.ಜಾಲಪ್ಪ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ,ಶ್ರೀ ದೇವರಾಜು ಅರಸು ವೈದ್ಯಕೀಯ ಮಹಾವಿದ್ಯಾಲಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ,ಅದಾನಿ ಫೌಂಡೇಶನ್, ಎಸಿಸಿ ತೊಂಡೇಬಾವಿ ಸಿಮೆಂಟ್ ವರ್ಕ್ಸ್‌ ಮತ್ತು ತೊಂಡೇಬಾವಿ ಗ್ರಾಮ ಪಂಚಾಯತಿ ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ,ಸಾರ್ವಜನಿಕರ ಬೃಹತ್ ಆರೋಗ್ಯ ತಪಾಸಣಾ ಶಿಬಿರವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟನೆ ನೆರೆವೇರಿಸಿ ಮಾತನಾಡುತ್ತಿದ್ದರು.

ಇಂದಿನ ದಿನಗಳಲ್ಲಿ ಜನಸಾಮಾನ್ಯರಿಗೆ ಅರೋಗ್ಯವೇ ಮಹಾ ಭಾಗ್ಯ ಎನ್ನುವಂತಾಗಿದೆ,ಬಡಜನರು ತಮ್ಮ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯಲು ಹಣಕಾಸು ತೊಂದರೆಗಳಿಂದಾಗಿ ದೊಡ್ಡ ಆಸ್ಪತ್ರೆಗಳಿಗೆ ಹೋಗಲು ಸಾಧ್ಯವಾಗದೆ ಸಾವು ನೋವುಗಳನ್ನು ಅನುಭವಿಸುತ್ತಿದ್ದಾರೆ, ಇಂತಹ ಸಂಧರ್ಭದಲ್ಲಿ, ತಜ್ಞ ವೈದ್ಯರನ್ನು ಕರೆಸಿ ಸ್ಥಳೀಯವಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರಗಳನ್ನು ಏರ್ಪಡಿಸಿ,ಜನರ ಆರೋಗ್ಯವನ್ನು ಕಾಪಾಡುವ ಕೆಲಸ ನಿಜಕ್ಕೂ ಅತ್ಯಂತ ಶ್ಲಾಘನೀಯ ಕೆಲಸ ಎಂದು ಪ್ರಶಂಸಿದ ಅವರು ಇಂತಹ ಅರೋಗ್ಯ ಶಿಬಿರದ ಪ್ರಯೋಜನವನ್ನು ಜನರು ಪಡೆದುಕೊಳ್ಳಬೇಕೆಂದು ತಿಳಿಸಿದರು.

ನಂತರ ನಡೆದ ಆರೋಗ್ಯ ತಪಾಸಣಾ ಶಿಬಿರದಲ್ಲಿ,ಸುತ್ತಮುತ್ತಲಿನ ಸಾವಿರಾರು ಮಂದಿ ಜನರು ಪಾಲ್ಗೊಂಡು ತಮ್ಮ ಆರೋಗ್ಯವನ್ನು ತಜ್ಞ ವೈದ್ಯರಿಂದ ತಪಾಸಣೆ ಮಾಡಿಸಿಕೊಂಡು ವೈದ್ಯರ ಸಲಹೆ ಮೇರೆಗೆ ಉಚಿತ ಔಷದಿಗಳನ್ನು ಪಡೆದುಕೊಂಡರು.

ಶಿಬಿರದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಶಿಬಿರದ ಆಯೋಜಕರು ತಿಂಡಿ ಊಟದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಏರ್ಪಡಿಸಿದ್ದು ವಿಶೇಷವಾಗಿತ್ತು.

ಉದ್ಘಾಟನಾ ಸಮಾರಂಭದಲ್ಲಿ ಶ್ರೀ ದೇವರಾಜು ಅರಸು ವೈದ್ಯಕೀಯ ಮಹಾವಿದ್ಯಾಲಯ ಆಡಳಿತ ಮಂಡಳಿಯ ಅಧ್ಯಕ್ಷ ಜಿಎಚ್.ನಾಗರಾಜ್, ಎಸಿಸಿ ಸಿಮೆಂಟ್ ಕಾರ್ಖಾನೆಯ ಹಿತೇಶ್ ಗೋಯಲ್,ಹೆಚ್ ಆರ್,ವಿಭಾಗದ ಮಂಜುನಾಥ್, ಕೋಚಿಮುಲ್ ನಿರ್ದೇಶಕ ಜೆ.ಕಾಂತರಾಜು,ಗ್ರಾಮ ಪಂಚಾಯತಿ ಅಧ್ಯಕ್ಷೆ ಕಾಮಾಕ್ಷಿ,ತಾಲೂಕು ಆರೋಗ್ಯಾಧಿಕಾರಿ ಚಂದ್ರ ಮೋಹನ್,ಪಂಚಾಯತಿ ಅಭಿವೃದ್ಧಿ ಅಧಿಕಾರಿ ಬಸವರಾಜು ಬಲ್ಲೊಟಿ,ತಾ.ಪಂ ಮಾಜಿ ಸದಸ್ಯ ನಾರಾಯಣಸ್ವಾಮಿ ಮುಖಂಡರಾದ ಶಿವಶಂಕರರೆಡ್ಡಿ,ಶಿಬಿರದ ಆಯೋಜಕ ಸಯೈದ್ ಹಾಗೂ ಇನ್ನಿತರರು ಭಾಗವಹಿಸಿದ್ದರು.