Wednesday, 27th November 2024

Chikkaballapur News: ಒತ್ತಡ ನಿವಾರಣೆಗೆ ವಾರ್ಷಿಕ ಕ್ರೀಡಾಕೂಡ ಸಹಕಾರಿ: ವಲಯ ಪೊಲೀಸ್ ಅಧೀಕ್ಷಕ ಲಾಭೂರಾಮ್

ಚಿಕ್ಕಬಳ್ಳಾಪುರ : ಪೊಲೀಸರ ಕಾರ್ಯ ಒತ್ತಡದ ನಡುವೆ ಆರೋಗ್ಯದ ಕಡೆ ಗಮನ ಹರಿಸುವುದು ಕಷ್ಟ. ಸಾರ್ವಜನಿಕರೊಂದಿಗೆ ಶಾಂತಿಯಿಂದ ವರ್ತಿಸಲು, ಕೆಲಸದ ಒತ್ತಡದಿಂದ ಹೊರ ಬರಲು ಕ್ರೀಡೆ ಸಹಕಾರಿ ಎಂದು ಕೇಂದ್ರ ವಲಯದ ಆರಕ್ಷಕ ಮಹಾ ನಿರೀಕ್ಷಕ ಲಾಭೂರಾಮ್ ಹೇಳಿದರು.

ನಗರ ಹೊರವಲಯ ಅಣಕನೂರು ಬಳಿಯ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಕಚೇರಿ ಕವಾಯತು ಮೈದಾನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಏರ್ಪಡಿಸಿದ್ದ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸಮಯದ ಕಟ್ಟುಪಾಡುಗಳಿಗೆ ಒಳಗಾಗಿ ಸದಾ ಒತ್ತಡದಲ್ಲಿ ಕಾರ್ಯನಿರ್ವಹಿಸುವ ಪೊಲೀಸ್ ಸಿಬ್ಬಂದಿಗೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಬಹಳ ಮುಖ್ಯ.ನಿಮ್ಮ ಕೆಲಸದಲ್ಲಿ ಎಷ್ಟೇ ಒತ್ತಡವಿದ್ದರೂ ಕರ್ತವ್ಯದಲ್ಲಿ ಲೋಪವಾಗದಂತೆ ಎಚ್ಚರ ವಹಿಸಲು ದೈಹಿಕ ಮತ್ತು ಮಾನಸಿಕವಾಗಿ ಸದೃಢತೆಯೇ ಸಹಕಾರಿ.ಇದನ್ನು ವೃತ್ತಿಯಲ್ಲಿ ಸಾಧಿಸಿ ಪ್ರತಿದಿನವೂ ಲವಲವಿಕೆಯಿಂದ ಕೆಲಸ ಮಾಡಲು ಕ್ರೀಡಾಕೂಟ ಸೇರಿದಂತೆ ಒಂದಿಲ್ಲೊಂದು ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಸಾಧ್ಯವಿದೆ ಎಂದರು.

ಪೊಲೀಸ್ ವರಿಷ್ಟಾಧಿಕಾರಿ ಕುಶಾಲ್ ಚೌಕ್ಸೆ ಮಾತನಾಡಿ ಪೊಲೀಸ್ ಸಿಬ್ಬಂದಿಯ ಪರಮೋಚ್ಛ ಅರ್ಹತೆಯೇ ದೈಹಿಕವಾಗಿ ಸದೃಢತೆಯನ್ನು ಕಾಪಾಡಿಕೊಳ್ಳುವುದೇ ಆಗಿದೆ. ಆರೋಗ್ಯವಂತೆ ದೇಹವೇ ಆರೋಗ್ಯವಂತ ಮನಸ್ಸಿನ ಕೋಟೆಯಾಗಿದೆ. ಪೊಲೀಸ್ ಸಿಬ್ಬಂದಿ ತಮ್ಮ ಕರ್ತವ್ಯದ ನಡುವೆ ಬಿಡುವಿನ ವೇಳೆಯಲ್ಲಿ ಕ್ರೀಡಾ ಚಟವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಆ ಮೂಲಕ ದೇಹಾರೋಗ್ಯ, ಮಾನಸಿಕ ಆರೋಗ್ಯ ಕಾಪಾಡಿ ಕೊಳ್ಳಲು ಮನಸ್ಸು ಮಾಡಬೇಕು ಎಂದು ಕರೆ ನೀಡಿದರು.

೨೦೨೪ನೇ ವಾರ್ಷಿಕ ಕ್ರೀಡಾಕೂಟ ನವೆಂಬರ್ ೨೫ರಿಂದ ೨೭ರತನಕ ನಡೆಸಿದ್ದು ಹತ್ತು ಹಲವು ಆಟೋಟಗಳು ನಡೆದಿವೆ. ಬುಧವಾರ ನಡೆದ ಹಗ್ಗಜಗ್ಗಾಟ, ಕಬಡ್ಡಿ,ಪೊಲೀಸರ ಏಕತಾನತೆಯ ಬದುಕಿಗೆ ಕೊಂಚ ಬಿಡುವು ನೀಡಿ ಸಂತೋಷದಿಂದ ಭಾಗವಹಿಸುವಂತೆ ಮಾಡುವಲ್ಲಿ ಯಶಸ್ವಿಯಾಯಿತು. ಹಗ್ಗ ಜಗ್ಗಾಟದಲ್ಲಿ ನಕ್ಕುನಲಿದು ಜಿಲ್ಲೆಯ ಎಲ್ಲಾ ಪೊಲೀಸರು ಸಕ್ರಿಯವಾಗಿ ಭಾಗಿಯಾಗಿ ಕ್ರೀಡಾಸ್ಪೂರ್ತಿಯನ್ನು ಮೆರೆದರು.

ವೇದಿಕೆ ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ರಾಜಾ ಇಮಾಮ್ ಖಾಸಿಂ ಮತ್ತಿತರರು ಇದ್ದರು.