ದತ್ತಗೀತೆಗಳನ್ನು ಪಠಿಸುವ ಮೂಲಕ ನೂರಾರು ಭಕ್ತರು ದತ್ತಮಾಲೆಯನ್ನು ಧರಿಸಿದರು. ಇದೇ ವೇಳೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ ದತ್ತಮಾಲೆಯನ್ನು ಧರಿಸಿದರು.
ದತ್ತಜಯಂತಿ ಕಾರ್ಯಕ್ರಮ ಸೋಮವಾರದಿಂದ ಆರಂಭವಾಗಿದ್ದು, ಡಿಸೆಂಬರ್ 8ರ ವರೆಗೂ ನಡೆಯಲಿದೆ. ಡಿಸೆಂಬರ್ 6ರಂದು ಮಹಿಳೆಯರಿಂದ ಅನುಸೂಯ ಜಯಂತಿ, ಶೋಭಾಯಾತ್ರೆ ಹಾಗೂ ದತ್ತ ಪಾದುಕೆ ದರ್ಶನ ನಡೆಯಲಿದೆ. ಡಿಸೆಂಬರ್ 7ರಂದು ದತ್ತಭಕ್ತರಿಂದ ಭೀಕ್ಷಾಟನೆ, ಚಿಕ್ಕಮಗಳೂರು ನಗರದಲ್ಲಿ ಬೃಹತ್ ಶೋಭಾ ಯಾತ್ರೆ ನಡೆಯಲಿದೆ.
ಡಿಸೆಂಬರ್ 8ರಂದು ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸುವ ದತ್ತಭಕ್ತರು ದತ್ತಿಪೀಠಕ್ಕೆ ತೆರಳಿ ದತ್ತಪಾದುಕೆ ದರ್ಶನ ಪಡೆ ಯುವ ಮೂಲಕ ದತ್ತಜಯಂತಿ ಕಾರ್ಯಕ್ರಮ ತೆರೆ ಬೀಳಲಿದೆ.
ದತ್ತಮಾಲೆ ಧರಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ, “ದತ್ತಪೀಠ ವಿಚಾರ ಸಂಬಂಧ ರಾಜ್ಯ ಸರ್ಕಾರ ನ್ಯಾಯಾಲಯದ ಆದೇಶದ ಮೇರೆಗೆ ಸಚಿವ ಸಂಪುಟ ಉಪ ಸಮಿತಿ ಯನ್ನು ರಚನೆ ಮಾಡಿತ್ತು. ಸಮಿತಿ ಶಿಫಾರಸನ್ನು ಪರಿಗಣಿಸಿ ರಾಜ್ಯ ಸರ್ಕಾರ ಆಡಳಿತ ಮಂಡಳಿಯನ್ನು ರಚಿಸಿದೆ” ಎಂದರು.
ದತ್ತಪೀಠಕ್ಕೆ ನ್ಯಾಯ ಕೊಡಿಸುವಂತಹ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದ್ದು, ಈ ವರ್ಷದ ದತ್ತ ಜಯಂತಿ ಹಿಂದೂ ಅರ್ಚಕರ ಪೂಜೆಯೊಂದಿಗೆ ಯಾವುದೇ ವಿವಾದಕ್ಕೆ ಅವಕಾಶವಿಲ್ಲದಂತೆ ನೆರವೇರಲಿದೆ. ಬಾಬಾಬುಡನ್ ದರ್ಗಾದಲ್ಲಿ ಮುಜಾ ವರ್‍ರಿಂದ ಪೂಜೆಯಾದರೇ, ದತ್ತಪೀಠದಲ್ಲಿ ಹಿಂದೂ ಅರ್ಚಕರಿಂದ ಪೂಜೆ ನಡೆಯಲಿದೆ. ಹಿಂದೂ ಅರ್ಚಕರ ನೇಮಕ ಸಂಬಂಧ ಇರುವ ಅಡೆತಡೆಗಳನ್ನು ನಿವಾರಿಸುವ ಕೆಲಸವನ್ನು ಮಾಡಲಾಗಿದೆ. ಆಡಳಿತ ಮಂಡಳಿ ಅರ್ಚಕರ ನೇಮಕ ಕೈಗೊಳ್ಳಲಿದೆ ಎಂದರು.
ದತ್ತಪೀಠದಲ್ಲಿ ನಿರಂತರ ಹಿಂದೂ ಅರ್ಚಕರಿಂದ ಪೂಜೆ ಸಂಬಂಧ ಆಡಳಿತ ಮಂಡಳಿ ಸಭೆ ಸೇರಿ ನಿರ್ಣಾಯ ತಗೆದುಕೊಂಡ ನಂತರ ಪೂರ್ಣಾವಧಿ ಅರ್ಚಕರ ನೇಮಕ ಪ್ರಕ್ರಿಯೇ ನಡೆಯಲಿದೆ. ತಾತ್ಕಾಲಿಕ ಅರ್ಚಕರನ್ನು ನೇಮಕ ಮಾಡಿ ಪೂಜೆ ಪ್ರಾರಂಭಿ ಸುವ ಕೆಲಸವನ್ನು ಆಡಳಿತ ಮಂಡಳಿ ಮಾಡಲಿದೆ ಎಂದು ಮಾಹಿತಿ ನೀಡಿದರು.