ಯಾದಗಿರಿ: ಕಲ್ಯಾಣ ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರ ದಿ.ವಿಶ್ವನಾಥರಡ್ಡಿ ಮುದ್ನಾಳ ಅವರ ಪುತ್ರ, ಮಾಜಿ ಶಾಸಕ ವೆಂಕಟರಡ್ಡಿಗೌಡ ಮುದ್ನಾಳ (70) ತೀವ್ರ ಅನಾರೋಗ್ಯದಿಂದ ಮಂಗಳವಾರ ನಿಧನ ಹೊಂದಿದರು.
ಕಳೆದ ಹಲವು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಶಾಸಕ ವೆಂಕಟರಡ್ಡಿ ಮುದ್ನಾಳ (EX MLA Venkatareddy Mudnal) ಮಂಗಳವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆತ್ಯಾಪ್ತ ಬಳಗದಲ್ಲಿದ್ದ ಮುದ್ನಾಳ ಅವರು ಕಳೆದ ವಿಧಾನಸಭಾ ಚುನಾವಣೆಯ ನಂತರ ಸಾರ್ವಜನಿಕವಾಗಿ ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ಒಂದೂವರೆ ತಿಂಗಳ ಹಿಂದೆ ಮಾಜಿ ಶಾಸಕ ವೀರಬಸವಂತರಡ್ಡಿ ಅವರ ನಿಧನದಿಂದ ಬಡವಾಗಿದ್ದ ಬಿಜೆಪಿ ಇದೀಗ ಮುದ್ನಾಳ ನಿಧನದಿಂದ ಇಬ್ಬರು ಜಿಲ್ಲಾ ನಾಯಕರನ್ನು ಕಳೆದುಕೊಂಡತಾಗಿದೆ.
2018ರಲ್ಲಿ ಬಿಜೆಪಿಯಿಂದ ಯಾದಗಿರಿ ಮತಕ್ಷೇತ್ರದಿಂದ ಸ್ಪರ್ಧಿಸಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಮುದ್ನಾಳ ಅವರು 2023ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚನ್ನಾರಡ್ಡಿ ಪಾಟೀಲ ತುನ್ನೂರ ಎದುರು ಪರಾಭವಗೊಂಡಿದ್ದರು. ಕಲ್ಯಾಣ ಕರ್ನಾಟಕದ ಸ್ವಾಂತ್ರತ್ಯ ಹೋರಾಟಗಾರ ದಿ. ವಿಶ್ವನಾಥರಡ್ಡಿ ಮುದ್ನಾಳ ಅವರ ಪುತ್ರರಾಗಿದ್ದ ವೆಂಕಟರಡ್ಡಿ ಮುದ್ನಾಳ ಕಲ್ಯಾಣ ಕರ್ನಾಟಕ ಉತ್ಸವ ದಿನದಂದೇ ನಿಧನರಾಗಿ ದ್ದಾರೆ.
ನಾಳೆ ಅಂತ್ಯಕ್ರಿಯೆ : ಬುಧವಾರ ಸಾಯಂಕಾಲ ಸ್ವಗ್ರಾಮವಾದ ಮುದ್ನಾಳ ಗ್ರಾಮದಲ್ಲಿ ಅಂತ್ಯಕ್ರಿಯೆ ಜರುಗಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಇದನ್ನೂ ಓದಿ: Yadgir News: ಬಪ್ಪರಗಾ ಗ್ರಾಮದ ದಲಿತರಿಗೆ ಬಹಿಷ್ಕಾರ; ಸಾಮರಸ್ಯದಿಂದ ಬದುಕಲು ಮನವೊಲಿಸಿದ ಅಧಿಕಾರಿಗಳು