Wednesday, 21st February 2024

ಜಿಪಿಎ ದುರುಪಯೋಗ: ಹೊಳಲ್ಕೆರೆ ಶಾಸಕರ ವಿರುದ್ಧ ಎಫ್‌ಐಆರ್‌

ಚಿತ್ರದುರ್ಗ: ಜಿಪಿಎ ದುರುಪಯೋಗ ಮಾಡಿಕೊಂಡು ಆಸ್ತಿ ಕಬಳಿಸಿದ ಆರೋಪದ ಮೇರೆಗೆ ಹೊಳಲ್ಕೆರೆ ಬಿಜೆಪಿ ಶಾಸಕ ಎಂ.ಚಂದ್ರಪ್ಪ ಅವರ ಪತ್ನಿ ಹಾಗೂ ಇಬ್ಬರು ಪುತ್ರರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಶಾಸಕರ ಪತ್ನಿ ಚಂದ್ರಕಲಾ, ಪುತ್ರರಾದ ಎಂ.ಸಿ.ರಘುಚಂದನ್, ಎಂ.ಸಿ. ದೀಪ್ ಚಂದನ್, ಉದ್ಯಮಿ ಕೆ.ನಾಗ ರಾಜ್‌, ಉಪನೋಂದಣಾಧಿಕಾರಿ ನಾಗರತ್ನಮ್ಮ ಸೇರಿ ಇತರರ ವಿರುದ್ಧ ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಖಾಸಗಿ ದೂರಿನ ವಿಚಾರಣೆ ನಡೆಸಿದ ಹೊಳಲ್ಕೆರೆಯ ಹಿರಿಯ ಸಿವಿಲ್‌ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ಸೂಚನೆಯ ಮೇರೆಗೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

ಹೊಳಲ್ಕೆರೆಯ ಎಂ.ಜಿ.ಶ್ರೀಧರ್‌ ಎಂಬವರು ಉದ್ಯಮಿ ಕೆ.ನಾಗರಾಜ್‌ ಅವರಿಗೆ ವ್ಯವಹಾರದ ಉದ್ದೇಶದಿಂದ ಜನರಲ್‌ ಪವರ್‌ ಆಫ್‌ ಅಟಾರ್ನಿ ಅಧಿಕಾರ ವನ್ನು 2016ರಲ್ಲಿ ನೀಡಿದ್ದರು. ಈ ನಡುವೆ ಶ್ರೀಧರ್‌ ಸಹೋದರಿ ಲತಾ ಸುಂದರ್‌ ಎಂಬವರು ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಕೇಳಿ ನ್ಯಾಯಾಲಯದ ಮೊರೆ ಹೋಗಿದ್ದರು. ಪ್ರಕರಣ ಇತ್ಯರ್ಥವಾಗುವ ಮೊದಲೇ ಶ್ರೀಧರ್‌ ಅನಾರೋಗ್ಯದಿಂದ ಮೃತಪಟ್ಟಿದ್ದರು.

ಈ ಸಂದರ್ಭವನ್ನು ದುರುಪಯೋಗ ಮಾಡಿಕೊಂಡ ನಾಗರಾಜ್‌, ಶಾಸಕರ ಕುಟುಂಬದ ಸದಸ್ಯರ ಹೆಸರಿಗೆ ಆಸ್ತಿ ಕ್ರಯಪತ್ರ ಮಾಡಿಕೊಟ್ಟಿದ್ದಾರೆ.

error: Content is protected !!