ತುಮಕೂರು: ತಂದೆ-ತಾಯಿಗೆ ಸಮಾನವಾಗಿ ಸಮಾಜದಲ್ಲಿ ಗೌರವ ಪಡೆಯುವ ಶಿಕ್ಷಕ ಉತ್ತಮ ಸಮಾಜದ ನಿರ್ಮಾಣದ ಮೂಲಶಕ್ತಿ ಎಂದು ಸಿದ್ಧಗಂಗಾ ವೈದ್ಯಕೀಯ ಮಹಾವಿದ್ಯಾಲಯದ ಕಾರ್ಯಕಾರಿ ನಿರ್ದೇಶಕ ಡಾ.ಸಚ್ಚಿದಾನಂದ್ ಎಸ್ ತಿಳಿಸಿದರು.
ಸಿದ್ಧಗಂಗಾ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿ ಸಮಾಜದ ಆರೋಗ್ಯ ಕಾಪಾಡುವ ಜವಾಬ್ದಾರಿ ಹೊತ್ತಿರುವ ವಿದ್ಯಾರ್ಥಿಗಳಲ್ಲಿ ಸಮಾಜದ ಕುರಿತಾದ ಅನುಕಂಪ, ಸಹಾನು ಭೂತಿ ಹಾಗೂ ನಿಷ್ಠೆ ಬೆಳೆಸುವ ಕರ್ತವ್ಯ ಶಿಕ್ಷಕರ ಮೇಲಿದೆ ಎಂದರು.
ಸಿದ್ಧಗಂಗಾ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ಶಾಲಿನಿ ಮಾತನಾಡಿ ಶಿಕ್ಷಕರಿಗೆ ಮಾದರಿ ಯಾದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರವರ ಆದರ್ಶವನ್ನು ನಾವು ಸದಾ ಪಾಲಿಸಬೇಕು. ಶರಣರ ಮಾರ್ಗವನ್ನು ಅನುಸರಿಸಬೇಕು. ಮಕ್ಕಳಲ್ಲಿ ವ್ಯಕ್ತಿತ್ವ ವಿಕಸನ ರೂಪಿಸುವಂತಹ ಕರ್ತವ್ಯ ಪ್ರತಿಯೊಬ್ಬ ಶಿಕ್ಷಕರ ಮೇಲಿದ್ದು, ಶಿಷ್ಯನ ಏಳಿಗೆಯಾದಗಾಗಲೆಲ್ಲಾ ಗುರುವಿನ ಗೌರವ ಕೂಡ ಹೆಚ್ಚುತ್ತದೆ ಎಂದರು.
ಶಿಕ್ಷಕರ ದಿನದ ಅಂಗವಾಗಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಹಿರಿಯ ಆಂಗ್ಲಭಾಷಾ ಉಪನ್ಯಾಸಕ ಚನ್ನಪ್ಪ ಬಾರೀ ಗಿಡದ, ವೈದ್ಯ ಶಿಕ್ಷಕರು ಯುವವೈದ್ಯರನ್ನು ರೂಪಿಸುತ್ತಾ, ತಾವು ಕಲಿಯುತ್ತಾ ಬೆಳೆಯಬೇಕು. ಡಾ.ಶ್ರೀಶ್ರೀ ಶಿವಕುಮಾರ ಸ್ವಾಮೀಜಿಯವರು ಆಶೀರ್ವಾದದ ಫಲವಾಗಿ ಆರಂಭವಾದ ಸಿದ್ಧಗಂಗಾ ಆಸ್ಪತ್ರೆಯಲ್ಲಿ ರೂಪು ಗೊಳ್ಳುವ ವಿದ್ಯಾರ್ಥಿಗಳು ಮಾನವ ಸಮಾಜದ ಆರೋಗ್ಯದ ಸೇತುವೆಯಾಗಬೇಕು ಎಂದು ಕರೆನೀಡಿದರು.
ಸಿದ್ಧಗಂಗಾ ವೈದ್ಯಕೀಯ ಮಹಾವಿದ್ಯಾಲಯದ ಮೇಲ್ವಿಚಾರಕ ಡಾ.ನಿರಂಜನಮೂರ್ತಿ, ಸಿಇಓ ಡಾ.ಸಂಜೀವ ಕುಮಾರ್ ಸೇರಿದಂತೆ ವೈದ್ಯಕೀಯ ಹಾಗೂ ಅರೆ ವೈದ್ಯಕೀಯ ಕಾಲೇಜಿನ ಉಪನ್ಯಾಸಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.