Saturday, 23rd November 2024

Haliyal News: ಕಾರ್ಪೋರೆಟ್ ಸಂಸ್ಥೆಗಳ ಪ್ರತಿನಿಧಿ ಗಳೊಂದಿಗೆ ಹಳಿಯಾಳದ ಕೆನರಾ ಬ್ಯಾಂಕ್-ದೇಶಪಾಂಡೆ ಆರ್‌ಸೆಟಿ ಸಂಸ್ಥೆಯ ಪಾಲುದಾರಿಕಾ ಸಭೆ

ಹಳಿಯಾಳ: ಕಳೆದ ಎರಡು ದಶಕಗಳಿಂದ ಸಮುದಾಯದ ವಿವಿಧ ಕ್ಷೇತ್ರಗಳ ಸರ್ವತೋಮುಖ ಅಭಿವೃಧ್ದಿಯ ಗುರಿಯೊಂದಿಗೆ ಶ್ರಮಿಸುತ್ತಿರುವ ಕೆನರಾ ಬ್ಯಾಂಕ್-ದೇಶಪಾಂಡೆ ಆರ್‌ಸೆಟಿಯ ತನ್ನ ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸುವ ಹಾಗೂ ಮೇಲ್ದರ್ಜೆಗೇರಿಸುವ ದೃಷ್ಠಿಕೋನದೊಂದಿಗೆ ರಾಜಧಾನಿಯಲ್ಲಿರುವ ಬೆಂಗಳೂರು ಕ್ಲಬ್‌ನಲ್ಲಿ ಕಾರ್ಪೋರೆಟ್ ಸಂಸ್ಥೆಯ ಮುಖ್ಯಸ್ಥರ/ಸಿ.ಎಸ್.ಆರ್. ಪ್ರತಿನಿಧಿಗಳ ಪಾಲುದಾರಿಕಾ ಸಭೆಯನ್ನು ಬುಧವಾರ ಆಯೋಜಿಸಲಾಗಿತ್ತು,

ದೇಶದಲ್ಲಿ ಮಾದರಿ ಸಂಸ್ಥೆ ಎನಿಸಿಕೊಂಡಿರುವ ಕೆನರಾ ಬ್ಯಾಂಕ್-ದೇಶಪಾಂಡೆ ಆರ್‌ಸೆಟಿ ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ದಿ ಹಾಗೂ ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗುವಂತಹ ವಿವಿಧ ಉಚಿತ ತರಬೇತಿ ಗಳು ಮತ್ತು ಇತರೇ ಕ್ಷೇತ್ರದಲ್ಲಿ ಮಾಡಿರುವ ಸುಧಿರ್ಘ ಸಾಧನೆಯನ್ನು ಟ್ರಸ್ಟ್ ಧರ್ಮದರ್ಶಿಗಳಾದ ಪ್ರಸಾದ ದೇಶಪಾಂಡೆ ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ ತಿಳಿಸಿದರು.

ಬೆಂಗಳೂರಿನಲ್ಲಿರುವ ಪ್ರತಿಷ್ಠಿತ ಕಾರ್ಪೋರೆಟ್ ಸಂಸ್ಥೆಗಳಾದ ಸ್ಪರ್ಶ ಆರೋಗ್ಯ ಸೇವಾ ಸಂಸ್ಥೆಯ ಮುಖ್ಯಸ್ಥರಾದ ಡಾ. ಶರಣ್ ಪಾಟೀಲ್, ಹ್ಯಾವ-ಎ-ಹಾರ್ಟ್ ಫೌಂಡೇಶನ್ ಸಂಸ್ಥಾಪಕರಾದ ಮನೋಹರ ಚೆಟ್ಲಾನಿ, ಶಿಬುಲಾಲ ಫೌಂಡೇಶನ್ನಿನ ಶ್ರೀಮತಿ ಸುಜಾತಾ ಮತ್ತು ಶ್ರೀಹರ್ಷಾ ಮಹಾವೀರ ಜೈನ್ ಆಸ್ಪತ್ರೆಯ ಶಸ್ತçಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ. ಮಹೇಶ ಬಿ.ಎಚ್., ಬ್ರಿಟಾನಿಯಾ ಸಿಎಸ್‌ಆರ್ ವಿಭಾಗದ ಮುಖ್ಯಸ್ಥರಾದ ಪ್ರಿಯಾಂಕಾ ಸಿಂಗ್, ಮಣಿಪಾಲ ಫೌಂಡೇಶನ್ ಮುಖ್ಯಕಾರ್ಯ ನಿರ್ವಾಹಕ ಅಧಿಕಾರಿಗಳಾದ ಹರಿನಾರಾಯಣ ಶರ್ಮಾ, ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಿಎಸ್‌ಆರ್ ಮುಖ್ಯಸ್ಥರಾದ ಹೇಮಂತ ಮದೆಗೌಡಾ ಮುಂತಾದ ೨೪ ವಿವಿಧ ಕಾರ್ಪೊರೇಟ್ ಸಂಸ್ಥೆಗಳ ಸಿಎಸ್‌ಆರ್ ಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.

ಈ ಸಂದರ್ಭದಲ್ಲಿ ಸಮಾಜದ ಸುಸ್ಥಿರ ಅಭಿವೃದ್ದಿಗೆ ಭವಿಷ್ಯದಲ್ಲಿ ಕೈಗೊಳ್ಳಬೇಕಾದ ಪೂರಕ ಯೋಜನೆಗಳು, ಮೂಲಸೌಕರ್ಯಗಳ ಅಭಿವೃದ್ದಿ, ಪರಿಣಾಮಕಾರಿ ಮಾರ್ಗಸೂಚಿಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸಿ ಪಾಲುದಾರಿಕಾ ಸದಸ್ಯರ ಒಡಂಬಡಿಕೆಗೆ ಮತ್ತು ಮಾರ್ಗದರ್ಶನವನ್ನು ಕೋರಲಾಯಿತು.

ಸಭೆಯಲ್ಲಿ ಕೆನರಾ ಬ್ಯಾಂಕ್-ದೇಶಪಾಂಡೆ ಆರ್‌ಸೆಟಿ ಸಂಸ್ಥೆಯ ಹಿರಿಯ ಮಾರ್ಗದರ್ಶಕರಾದ ಅನಂತಯ್ಯಾ ಆಚಾರ ಸಂಸ್ಥೆಯ ಭವಿಷ್ಯದ ಕಾರ್ಯ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.

ಸದಸ್ಯ ಕಾರ್ಯದರ್ಶಿ ಶ್ಯಾಮ್ ಕಾಮತ್ ಕಾರ್ಪೊರೇಟ್ ಸಂಸ್ಥೆಗಳ ಸಂದೇಹ ಹಾಗೂ ಪ್ರಶ್ನೆಗಳಿಗೆ ಉತ್ತರಿಸಿದರು. ಸಂಸ್ಥೆಯ ಕಾರ್ಯಕಾರಿಣಿ ಮಂಡಳಿ ಸದಸ್ಯರಾದ ವಾಸು ದೇಶಪಾಂಡೆ ಕಾರ್ಯಕ್ರಮವನ್ನು ಸಮರ್ಪಕವಾಗಿ ನಿರ್ವಹಿಸಿದರು. ಹಾಗೂ ಇನ್ನೊಬ್ಬ ಕಾರ್ಯಕಾರಿಣಿ ಮಂಡಳಿ ಸದಸ್ಯರಾದ ನವೀನ್ ಪಶುಪತಿ ಅತ್ಯುತ್ತಮವಾಗಿ ಸಂಯೋಜಿಸಿದ್ದರು.

ಇದನ್ನೂ ಓದಿ: Self Harming: ಪ್ರೀತಿಗೆ ಮನೆಯಲ್ಲಿ ವಿರೋಧ; ಪ್ರಿಯಕರನ ಜತೆ ನೇಣಿಗೆ ಶರಣಾದ ವಿದ್ಯಾರ್ಥಿನಿ