Thursday, 28th November 2024

Talent Day 2024: ಪ್ರತಿಭಾ ದಿನಾಚರಣೆ “ಕಲರವ – 2024” : ಬದುಕಿನ ಉತ್ತಮ ಅಂಶಗಳು ಸ್ಫೂರ್ತಿಯಾಗಬೇಕು – ಪಟ್ ಪಟ್ ಪಟಾಕಿ ಶೃತಿ

ಬೆಂಗಳೂರು: ನಗರದ ಎ.ಪಿ.ಎಸ್. ಕಲೆ ಮತ್ತು ವಿಜ್ಞಾನ ಕಾಲೇಜಿನಲ್ಲಿ ಪ್ರತಿಭಾ ದಿನಾಚರಣೆಯ ಪ್ರಯುಕ್ತ “ಕಲರವ 2024” – ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳ ಪ್ರತಿಭಾನ್ವೇಷಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಪ್ರಾಂಶುಪಾಲರಾದ ಪ್ರೊ. ಬಿ. ಜಯಶ್ರೀ ವಿವಿಧ ವಿಭಾಗಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸಿ, ಪ್ರತಿಭೆ ಯಾರಲ್ಲೂ ಮೇಲ್ಮುಖ ವಾಗಿ ಗೋಚರಿಸುವುದಿಲ್ಲ. ಅದು ಸದಾ ಅಂತರ್ಮುಖಿ. ಹಾಗಾಗಿ ಅವಕಾಶ ದೊರೆತಾಗ ಸದುಪಯೋಗಪಡಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿರಬೇಕು ಎಂದರು.

ರೇಡಿಯೋ ಮತ್ತು ಟಿ.ವಿ. ನಿರೂಪಕಿ ಪಟ್ ಪಟ್ ಪಟಾಕಿ ಶ್ರುತಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಬಾಲ್ಯ ಹಾಗೂ ಕಾಲೇಜು ದಿನಗಳನ್ನು ಸದಾ ಸ್ಮರಿಸಿಕೊಳ್ಳಬೇಕು. ಬದುಕಿನ ಉತ್ತಮ ಅಂಶಗಳು ಮುಂದಿನ ಹಾದಿಗೆ ಸ್ಪೂರ್ತಿಯಾಗಬೇಕು ಎಂದರು.

ಎ.ಪಿ.ಎಸ್. ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಸಿಎ ವಿಷ್ಣುಭರತ್ ಎ.ಎಸ್. ಮಾತನಾಡಿ, ವಿದ್ಯಾರ್ಥಿಗಳು ತಮ್ಮಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರ ಹಾಕಲು ಇದೊಂದು ಸೂಕ್ತ ವೇದಿಕೆಯಾಗಿದೆ. ಎಲ್ಲಾ ವಿದ್ಯಾರ್ಥಿಗಳು ಪ್ರತಿಭಾ ದಿನಾಚರಣೆಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಎ.ಪಿ.ಎಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎಸ್. ನಾಗರಾಜ್, ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರೊ. ಎ. ಪ್ರಕಾಶ್, ಜಂಟಿ ಕಾರ್ಯದರ್ಶಿ ಪಿ. ಕೃಷ್ಣಸ್ವಾಮಿ ಮತ್ತು ಟ್ರಸ್ಟಿಗಳಾದ ಪ್ರೊ. ಎ. ರಾಮಪ್ರಸಾದ್ ಉಪಸ್ಥಿತರಿದ್ದರು.