ಕಿಡಿಕಾರಿದ ಸರಕಾರಿ ನ್ಯಾಯ ಬೆಲೆ ಅಂಗಡಿ ಮಾಲೀಕರು
ತುಮಕೂರು: ಬಡವರಿಗೆ ಸರಕಾರ ನೀಡುವ ಉಚಿತ ಅಕ್ಕಿ ಮತ್ತಿತರರ ದಿನಸಿ ಪದಾರ್ಥಗಳನ್ನು ವಿತರಿಸುತ್ತಿರುವ ಸರಕಾರಿ ನ್ಯಾಯಬೆಲೆ ಅಂಗಡಿಗಳ ಮೇಲೆ ಕೆ.ಆರ್.ಎಸ್ ಪಕ್ಷದ ಕಾರ್ಯಕರ್ತರು ಏಕಾಎಕಿ ದಾಳಿ ನಡೆಸಿ, ಅನಗತ್ಯ ಕಿರುಕುಳ ನೀಡುತ್ತಿದ್ದು, ಇವರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಮಂಗಳವಾರ ತುಮಕೂರು ಜಿಲ್ಲಾ ಸರಕಾರಿ ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದವತಿಯಿಂದ ಟೌನ್‌ಹಾಲ್ ವೃತ್ತ ದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿ ಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ಅಧ್ಯಕ್ಷ ಕೃಷ್ಣಪ್ಪ, ನ್ಯಾಯಬೆಲೆ ಅಂಗಡಿಗಳು ಕೋರೋನ ಅಂತಹ ಸಂದರ್ಭದಲ್ಲಿ ತಮ್ಮ ಪ್ರಾಣದ ಹಂಗು ತೊರೆದು,ರಾಜ್ಯದ ಸುಮಾರು 4.85 ಕೋಟಿ ಜನರಿಗೆ ಪಡಿತರ ಹಂಚುವ ಮೂಲಕ ಉದಾತ್ತ ಸೇವೆ ಮಾಡಿದೆ.
ಆದರೆ ಕೆ.ಆರ್.ಎಸ್.ಪಕ್ಷದ ಕಾರ್ಯಕರ್ತರು ಏಕಾಎಕಿ ಅಂಗಡಿಗೆ ನುಗ್ಗಿ, ದಾಖಲೆಗಳನ್ನು ಪರಿಶೀಲಿಸುವುದು, ತೂಕದಲ್ಲಿ ಸಣ್ಣ ವೆತ್ಯಾಸ ಬಂದರೂ ಕೆಲಸಗಾರರು ಮತ್ತು ಅಂಗಡಿ ಮಾಲೀಕರನ್ನು ಬಾಯಿಗೆ ಬಂದ0ತೆ ಬೈಯುವುದರಲ್ಲದೆ, ಈ ದೃಶ್ಯಗಳನ್ನು ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು, ಇಡಿ ವ್ಯವಸ್ಥೆಯನ್ನು ಕೆಟ್ಟದ್ದು ಎಂದು ಬಿಂಬಿಸುವ ಕೆಲಸ ಮಾಡುತ್ತಿದ್ದಾರೆ.ಇದಕ್ಕೆ ನಮ್ಮ ವಿರೋಧವಿದೆ. ನಾವು ತಪ್ಪು ಮಾಡಿದರೆ ಶಿಕ್ಷಿಸಲು ಆಹಾರ ಇಲಾಖೆ ಇದೆ.ಜಿಲ್ಲಾಡಳಿತವಿದೆ. ಅದನ್ನು ಬಿಟ್ಟು ಒಂದು ಪಕ್ಷದ ಹೆಸರಿನಲ್ಲಿ ಅಂಗಡಿ ಮಾಲೀಕರಿಗೆ,ಪಡಿತರ ಚೀಟಿದಾರರಿಗೆ ತೊಂದರೆ ನೀಡುವುದು ಸರಿಯಲ್ಲ ಎಂದರು.
ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ನಟರಾಜು ಮಾತನಾಡಿ, ಕಳೆದ 60-70 ವರ್ಷಗಳಿಂದ ನ್ಯಾಯಬೆಲೆ ಅಂಗಡಿ ತೆರೆದು ಬಡವರಿಗೆ ಪಡಿತರ ಹಂಚುವ ಕೆಲಸ ಮಾಡುತ್ತಿದ್ದೇವೆ.ಬಯೋಮೆಟ್ರಿಕ್ ಬಂದ ನಂತರ ಪ್ರತಿಯೊಬ್ಬರ ಪಡಿತರ ಹಂಚಿಕೆ ಮಾಡಿದ ತಕ್ಷಣವೇ ಪಡಿತರದಾರರ ಮೊಬೈಲ್ ಸಂಖ್ಯೆಗೆ ಮೇಸೆಜ್ ಬರುತ್ತದೆ. ಮೋಸ ಮಾಡಲು ಸಾಧ್ಯವಿಲ್ಲ. ಹೀಗಿದ್ದೂ ಪಡಿತರ ಅಂಗಡಿ ಮಾಲೀಕರು ಮೋಸ ಮಾಡುತ್ತಿದ್ದಾರೆ ಎಂದು ಬಿಂಬಿಸಲು ಹೊರಟಿದ್ದಾರೆ.ಇವರಿಗೆ ಕಾನೂನು ಕೈಗೆತ್ತಿಕೊಳ್ಳಲು ಅಧಿಕಾರ ನೀಡಿದವರು ಯಾರು ?, ಆರು ತಿಂಗಳಿನಿ0ದ ಕಮಿಷನ್ ನೀಡಿಲ್ಲ.ಆದರೂ ಸಹ ಕೈಯಿಂದ ಕೆಲಸಗಾರರಿಗೆ ಕೂಲಿ ನೀಡಿ, ಅಂಗಡಿ ನಡೆಸುತ್ತಿದ್ದೇವೆ. ಪಡಿತರದಾರರೇ ನಮ್ಮ ಆಸ್ತಿ ಎಂದರು.
ಹೆಬ್ಬೂರಿನ ಆರ್. ರಂಗಯ್ಯ ಮಾತನಾಡಿ, ನಾವು 30 ವರ್ಷಗಳಿಂದಲೂ ನ್ಯಾಯ ಬೆಲೆ ಅಂಗಡಿ ನಡೆಸಿಕೊಂಡು ಬರುತ್ತಿದ್ದೇವೆ. ಎಂದೂ ಸಹ ಬಡವರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡಿಲ್ಲ. ಈ ಕಾರ್ಯವನ್ನು ಸಮಾಜ ಸೇವೆ ರೀತಿಯ ಮಾಡಿ ಕೊಂಡು ಬರುತ್ತಿದ್ದೇವೆ.
ಆದರೆ ಈಗ ಕೆ.ಆರ್.ಎಸ್. ಪಕ್ಷದವರು ವಿನಾ ಕಾರಣ ಆರೋಪ ಮಾಡುತ್ತಿದ್ದಾರೆ. ಇವರ ಆರೋಪದಲ್ಲಿ ಸತ್ಯಾಂಶವಿಲ್ಲ. ಕೆ.ಆರ್.ಎಸ್. ಪಕ್ಷದವರು ನಮ್ಮ ಧೋರಣೆಯನ್ನು ಬದಲಿಸಿಕೊಳ್ಳಬೇಕು ಎಂದರು. ಪ್ರತಿಭಟನಾಕಾರರನ್ನು ಉದ್ದೇಶಿಸಿ ರಾಕ್‌ಲೈನ್ ರವಿಕುಮಾರ್, ಗುಬ್ಬಿ ಶಿವಕುಮಾರ್,ಕೊರಟಗೆರೆಯ ಚಿಕ್ಕರಂಗಣ್ಣ ಸೇರಿದಂತೆ ಹಲವರು ಮಾತನಾಡಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಪಡಿತರ ಅಂಗಡಿ ಮಾಲೀಕರಾದ ಆರ್.ಕಾಮರಾಜು, ರಂಗಧಾಮಯ್ಯ, ಸೇರಿದಂತೆ ನೂರಾರು ಮಂದಿ ನ್ಯಾಯ ಬೆಲೆ ಅಂಗಡಿ ಮಾಲೀಕರು, ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಭ್ರಷ್ಟತೆ ಪ್ರಶ್ನಿಸುತ್ತಿದ್ದೇವೆ
ಕಾನೂನಾತ್ಮಕವಾಗಿ ಕಾರ್ಯನಿರ್ವಹಿಸುವ ನ್ಯಾಯ ಬೆಲೆ ಅಂಗಡಿಗಳನ್ನು ಪ್ರಶ್ನಿಸುತ್ತಿಲ್ಲ.ಸರಕಾರಿ ನಿಯಮ ಗಾಳಿಗೆ ತೂರಿ ಗ್ರಾಹಕರಿಗೆ ದಾಸ್ತಾನು ವಿತರಿಸುವಲ್ಲಿ ಮೋಸ ಮಾಡುತ್ತಿರುವ ಅನ್ಯಾಯ ಬೆಲೆ ಅಂಗಡಿಗಳ ಕಾರ್ಯವೈಖರಿಯನ್ನು ಪ್ರಶ್ನಿಸು ತ್ತಿದ್ದೇವೆ. ಯಾವುದೇ ಕಾರಣಕ್ಕೂ ಅಂಗಡಿ ಮಾಲೀಕರಿಗೆ ಕಿರುಕುಳ ನೀಡುತ್ತಿಲ್ಲ ಎಂದು ಕೆ.ಆರ್,ಎಸ್ ಪಕ್ಷದ ಜಿಲ್ಲಾ ಪದಾಧಿಕಾರಿ ಗಳು ತಿಳಿಸಿದ್ದಾರೆ.