ಮಡಿಕೇರಿ: ಮಡಿಕೇರಿಯಲ್ಲಿ ಫೆಬ್ರವರಿ 3 ರಿಂದ 6 ರವರೆಗೆ ಫಲಪುಷ್ಪ ಪ್ರದರ್ಶನ ಮತ್ತು ವೈನ್ ಉತ್ಸವ ಆಯೋಜನೆ ಮಾಡಲಾಗಿದೆ. ರಾಜ ಸೀಟಿನಲ್ಲಿ ಈ ಪ್ರದರ್ಶನ ನಡೆಯಲಿದೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ತೋಟಗಾರಿಕೆ ಇಲಾಖೆಯ ಸಹಯೋಗದೊಂದಿಗೆ ರಾಜಾಸೀಟ್ ಉದ್ಯಾನವನ ದಲ್ಲಿ ಫಲಪುಷ್ಪ ಪ್ರದರ್ಶನ ನಡೆಯಲಿದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಪ್ರಮೋದ್ ತಿಳಿಸಿದ್ದಾರೆ.
ಫಲಪುಷ್ಪ ಪ್ರದರ್ಶನದ ಪ್ರಯುಕ್ತ ಈಗಾಗಲೇ ರಾಜಾಸೀಟು ಉದ್ಯಾನ ವನದಲ್ಲಿ 10 ರಿಂದ 12 ಸಾವಿರ ಸಂಖ್ಯೆಯ 15-20 ರೀತಿಯ ಹೂವು ಗಳಾದ ಪೇಟೂನಿಯ, ಕ್ಯಾನ, ಸಾಲ್ವಿಯ, ಸೇವಂತಿಗೆ, ಚಂಡು ಹೂ, ಜೀನಿಯಾ, ಕ್ಯಾಲಾಂಡೂಲಾ, ಪ್ಲಾಕ್ಸ್, ವಿಂಕಾ ರೋಸಿಯಾ, ಡೇಲಿಯಾ, ಅಲಿಸಂ ಮತ್ತಿತರ ಗಿಡಗಳನ್ನು ಪಾತಿಯಲ್ಲಿ ಹಾಗೂ ಕುಂಡಗಳಲ್ಲಿ ನಾಟಿ ಮಾಡಲಾಗಿದ್ದು, ಪ್ರದರ್ಶನದಲ್ಲಿ ಜೋಡಿಸಲಾಗುತ್ತದೆ.
ಮುಖ್ಯ ಆರ್ಕಷಣೆಯಾಗಿ ವಿವಿಧ ಹೂಗಳಿಂದ ಕಲಾಕೃತಿಗಳನ್ನು ನಿರ್ಮಿಸಿ ಪ್ರದರ್ಶನಕ್ಕೆ ಇಡಲಾಗುತ್ತದೆ. ಅಲಂಕಾರಿಕ ವಿವಿಧ ಹೂ ಕುಂಡಗಳ ಪ್ರದರ್ಶನ, ಬೋನ್ ಸಾಯ್ ಪ್ರದರ್ಶನ, ತರಕಾರಿ ಕೆತ್ತನೆ ಪ್ರದರ್ಶಿಸಲಾಗುತ್ತದೆ.
ಗಾಂಧಿ ಮೈದಾನದಲ್ಲಿ ವಿವಿಧ ನರ್ಸರಿ ಗಿಡಗಳ ಮಾರಾಟ ಮಳಿಗೆ, ಕೃಷಿ ಪರಿಕರಗಳ ಪ್ರದರ್ಶನ, ತೋಟಗಾರಿಕೆ, ಇತರೆ ಇಲಾಖೆಯ ವಸ್ತು ಪ್ರದರ್ಶನದ ಮಳಿಗೆ ಆಯೋಜಿಸಲಾಗುತ್ತದೆ. ರೈತರು ಬೆಳೆದಿರುವ ವಿಶಿಷ್ಟವಾದ ಹಣ್ಣುಗಳು, ತರಕಾರಿ, ತೋಟದ ಬೆಳೆಗಳು, ಸಂಬಾರ ಬೆಳೆಗಳನ್ನು ಪ್ರದರ್ಶಿಸಲು ಉದ್ದೇಶಿಸಲಾಗಿದೆ.
ಮಡಿಕೇರಿ ರಾಜಸೀಟು ಸೇರಿದಂತೆ ವಿವಿಧ ಪ್ರದೇಶಗಳಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರಿಂದ ಎರಡನೇ ಮತ್ತು ನಾಲ್ಕನೇ ಶನಿವಾರ ಮತ್ತು ಭಾನುವಾರ ವಿಶೇಷ ಮೇಳವನ್ನು ಆಯೋಜಿಸಲಾಗುತ್ತಿದೆ.