ವಿಜಯಪುರ : ಮಾಜಿ ಸಿಎಂ ಸಿದ್ದರಾಮಯ್ಯ ಅವರ 75ನೇ ಜನ್ಮದಿನಾಚರಣೆಗೂ 2023 ರ ಚುನಾವಣೆಗೂ ಯಾವುದೇ ಸಂಬಂಧವಿಲ್ಲ. ಜೊತೆಗೆ ಇದಕ್ಕೆ ಯಾರ ಅಸಮಾಧಾನವೂ ಇಲ್ಲ ಎಂದು ಮಾಜಿ ಸಚಿವ ಹಾಗೂ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅವರ ಹಿತೈಷಿಗಳ,ಕಾಂಗ್ರೆಸ್ ಅಭಿಮಾನಿಗಳ ಒತ್ತಾಯದ ಮೇಲೆ 75 ನೇ ಜನ್ಮ ದಿನೋತ್ಸವ ಆಚರಣೆ ಮಾಡಿಕೊಳ್ಳ ಲಿದ್ದಾರೆ. ಈ ಕಾರ್ಯಕ್ರಮಕ್ಕೆ ರಾಹುಲ್ ಗಾಂಧಿ ಅವರು ಬರುತ್ತಾರೆ ಎಂದು ಡಿ.ಕೆ.ಶಿವಕುಮಾರ್ ಅವರೇ ಹೇಳಿದ್ದಾರೆ. ಹೀಗಾಗಿ ಇದಕ್ಕೆ ಬೇರೆ ಅರ್ಥ ಕೊಡಬೇಕಾಗಿಲ್ಲ. ನಾವೆಲ್ಲಾ ಸೇರಿ ಅರ್ಥಪೂರ್ಣವಾಗಿ ಕಾರ್ಯಕ್ರಮವನ್ನು ಮಾಡುತ್ತೇವೆ ಎಂದು ಎಂ.ಬಿ.ಪಾಟೀಲ್ ಸ್ಪಷ್ಟಪಡಿಸಿದರು.
ಅದು ಸಿದ್ದರಾಮೋತ್ಸವ ಅಲ್ಲಾ ಸಿದ್ದರಾಮಯ್ಯ ಅವರ 75 ನೇ ಜನ್ಮದಿನೋತ್ಸವ. ನೀವೆಲ್ಲ ಸೇರಿ ಸಿದ್ದರಾಮೋತ್ಸವ ಮಾಡಿದ್ದೀರಿ, ಸಿದ್ದರಾಮೋತ್ಸವ ಅಂದರೂ ತಪ್ಪಿಲ್ಲ, ಗ್ರಾಮೀಣ ಪ್ರದೇಶದಿಂದ ರೈತ ಕುಟುಂದಿಂದ ಬಂದವರು. ಪರಿಶ್ರಮದಿಂದ ರಾಜಕೀಯದಲ್ಲಿ ಬೆಳದಿ ದ್ದಾರೆ. ಹಣಕಾಸು ಸಚಿವರಾಗಿ, ಸಿಎಂ ಆಗಿ, ವಿರೋಧ ಪಕ್ಷ ನಾಯಕರಾಗಿ ಕೆಲಸ ಮಾಡುತ್ತಿದ್ದಾರೆ. ಇಂತಹ ಮುತ್ಸದ್ದಿ ನಾಯಕನ ಹುಟ್ಟುಹಬ್ಬ ಆಚರಣೆ ಮಾಡುವುದರಲ್ಲಿ ತಪ್ಪಿಲ್ಲ ಎಂದು ಹೇಳಿದರು.
ಯಾವುದೇ ವ್ಯಕ್ತಿ 25 ವರ್ಷ, 50 ವರ್ಷ, 75 ವರ್ಷ, 100 ನೇ ವರ್ಷದ ಜನ್ಮದಿನೋತ್ಸವ ಆಚರಣೆ ಮಾಡಿಕೊಳ್ಳುವುದು ಎಲ್ಲಡೆ ಯಿದೆ. ಎಷ್ಟೋ ಜನರು 60 ನೇ ವರ್ಷಕ್ಕೆ ಷಷ್ಠಾಬ್ದಿಯನ್ನು ಮಾಡಿಕೊಳ್ಳುತ್ತಾರೆ, ಇವೆಲ್ಲ ಜೀವನದಲ್ಲಿ ಮೈಲಿಗಲ್ಲು ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಎಲ್ಲ ಮುಖಂಡರು ಭಾಗಿಯಾಗಲಿದ್ಧಾರೆ ಎಂದು ಎಂ ಬಿ ಪಾಟೀಲ್ ಮಾಹಿತಿ ನೀಡಿದರು.
ಇದೇವೇಳೆ ರಾಜ್ಯದಲ್ಲಿ ಪ್ರವಾಹ ಪರಸ್ಥಿತಿ ಕುರಿತಂತೆ ಪ್ರತಿಕ್ರಿಯೆ ನೀಡಿದ ಅವರು, ಜನರ ಸಂಕಷ್ಟ, ಅಭಿವೃದ್ದಿ ಪ್ರವಾಹ ಪೀಡಿತರ ಸಮಸ್ಯೆ ಬಗೆ ಹರಿಸೋ ಯೋಚನೆ ಸರಕಾರಕ್ಕೆ ಇಲ್ಲ. ಅವರ ಆದ್ಯತೆಯೇ ಬೇರೆಯಾಗಿದೆ. ಪ್ರವಾಹ ಪೀಡಿತ ಪ್ರದೇಶಗಳಿಗೆ ಮುಖ್ಯ ಮಂತ್ರಿಗಳು ಹೋಗಬೇಕಾಗಿತ್ತು, ಕಂದಾಯ ಸಚಿವ ಅಶೋಕ ಮಾತ್ರ ಹೋಗಿದ್ದಾರೆ ಎಂದು ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರವಾಹ ಉಂಟಾದ ವೇಳೆ ಸಿಎಂ ವೈಮಾನಿಕ ಸಮೀಕ್ಷೆ ಮಾಡಿ ಜನರ ಸಹಾಯಕ್ಕೆ ಬರಬೇಕು. ಬರೀ ಕಣ್ಣೋರೆಸೋ ತಂತ್ರವಾಗ ಬಾರದು. ಈ ಹಿಂದೆ ಪ್ರವಾಹ ಉಂಟಾದಾಗ ಸರಿಯಾಗಿ ಪರಿಹಾರ ನೀಡಿಲ್ಲ. ತಾಂತ್ರಿಕ ನೆಪವೊಡ್ಡಿ ಪರಿಹಾರ ತಿರಸ್ಕರಿಸಿದ್ದಾರೆ. ತಕ್ಷಣ ಪರಿಹಾರ ಕೊಡದೇ, ಮುಂದೂಡಿ ಜನರು ಮರೆಯುವಂತೆ ಮಾಡುತ್ತಾರೆ ಇಂಥ ಕೆಲಸ ಆಗಬಾರದು. ಸರ್ಕಾರ ಜವಾಬ್ದಾರಿ ಯಿಂದ ವರ್ತನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಈ ಹಿಂದೆ ನಾನು ಗೃಹ ಸಚಿವನಾಗಿದ್ದಾಗ ಔರಾದ್ಕರ್ ನೇತೃತ್ವದಲ್ಲಿ ನೇಮಕಾತಿ ಮಾಡಿದ್ದೇವೆ. ನೇಮಕಾತಿಯಲ್ಲಿ ಒಂದೇ ಒಂದು ಅಕ್ರಮ ನಡೆದಿಲ್ಲ. ಈ ಸರಕಾರದಲ್ಲಿ ಓರ್ವ ಮೇಲಾಧಿಕಾರಿಯೇ ಅಕ್ರಮದಲ್ಲಿ ಶಾಮೀಲಾಗಿ ಬಂಧನಕ್ಕೊಳಗಾಗಿದ್ದಾರೆ.
ಒಂದು ಕಡೆ 40% ಕಮೀಷನ್, ಇನ್ನೊಂದು ಕಡೆ ಅಭಿವೃದ್ದಿ ಇಲ್ಲ. ಸಚಿವರು ಯಾವ ದಿಕ್ಕಿಗೆ ಕೆಲಸ ಮಾಡುತ್ತಿದ್ಧಾರೆ ಎಂಬುದು ಗೊತ್ತಿಲ್ಲ. 2023 ರಲ್ಲಿ ಈ ಸರಕಾರ ಕಿತ್ತು ಹಾಕಲು ಜನರು ಕಾಯುತ್ತಿದ್ದಾರೆ. ಈ ರೀತಿ ಸರ್ಕಾರ ಬೇಕಿತ್ತಾ? ಎಂದು ಸ್ವತಃ ಬಿಜೆಪಿ ಕಾರ್ಯಕರ್ತರೇ ಬೇಸರಗೊಂಡಿದ್ದಾರೆ. ಆಪರೇಷನ್ ಕಮಲದ ಪಾಪದ ಕೂಸಿದು ಎಂದು ಸರ್ಕಾರದ ವಿರುದ್ದ ಶಾಸಕ ಎಂ. ಬಿ. ಪಾಟೀಲ್ ವಾಗ್ದಾಳಿ ನಡೆಸಿದರು.