ಗೌರಿಬಿದನೂರು: ನಾನು ಶಾಸಕನಾಗಿ ಒಂದೂವರೆ ವರ್ಷದ ಅವಧಿಯಲ್ಲಿಯೇ ನಗರಗೆರೆ ಹೋಬಳಿಯ ಅಭಿವೃದ್ಧಿಗಾಗಿ ಸುಮಾರು ಮುವತ್ತು ಕೋಟಿ ರೂಪಾಯಿಗಳನ್ನು ವಿವಿಧ ಯೋಜನೆಗಳಿಗೆ ವಿನಿಯೋಗಿಸಲಾಗಿದ್ದು, ಹಲವಾರು ಕಾಮಗಾರಿಗಳು ಪ್ರಗತಿಯ ಹಂತದಲ್ಲಿ ಇದ್ದು ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಮೊದಸ ಆಧ್ಯತೆ ನೀಡಲಾಗುವುದು ಎಂದು ಶಾಸಕ ಕೆಎಚ್.ಪುಟ್ಟಸ್ವಾಮಿಗೌಡರು ತಿಳಿಸಿದರು.
ತಾಲೂಕಿನ ವಾಟದಹೊಸಹಳ್ಳಿ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ನಗರಗೆರೆ ಹೋಬಳಿ ಮಟ್ಟದ ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ನಗರಗೆರೆ ಹೋಬಳಿ ತಾಲೂಕು ಕೇಂದ್ರದಿಂದ ದೂರವಿರುವ ಕಾರಣ ನಗರಗೆರೆ ಹೋಬಳಿಯಲ್ಲಿಯೇ ಜನರ ಕುಂದುಕೊರತೆ ಸಭೆಯನ್ನು ಮಾಡಬೇಕೆಂದು ಅಧಿಕಾರಿಗಳೊಂದಿಗೆ ಚರ್ಚಿಸಿ, ಇಂದು ತಾಲೂಕು ಆಡಳಿತದ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಈ ಭಾಗದಲ್ಲಿ ಜನ ಸಂಪರ್ಕ ಸಭೆಯನ್ನು ಏರ್ಪಡಿಸಲಾಗಿದೆ.
ಸಾರ್ವಜನಿಕರು ನೀಡುವ ಅರ್ಜಿಗಳನ್ನು ಹದಿನೈದು ದಿನದೊಳಗೆ ವಿಲೇವಾರಿ ಮಾಡಿ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ.ಹೋಬಳಿಯ ಜನರಿಗೆ ಅಗತ್ಯವಾಗಿ ಬೇಕಾಗಿರುವ ಗ್ರಾಮ ಸಂಪರ್ಕ ರಸ್ತೆಗಳು, ಸ್ಮಶಾನ, ಕುಡಿಯುವ ನೀರು, ಚರಂಡಿ ವ್ಯವಸ್ಥೆಗಳಿಗೆ ಆದ್ಯತೆ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸಗಳು ಹೋಬಳಿಯಲ್ಲಿ ಕೈಗೊಳ್ಳಲಾಗುವುದು ಎಂದು ಶಾಸಕ ಕೆಎಚ್.ಪುಟ್ಟಸ್ವಾಮಿಗೌಡರು ಭರವಸೆ ನೀಡಿದರು.
ತಹಶೀಲ್ದಾರ್ ಮಹೇಶ್ ಎಸ್ ಪತ್ರಿ ಅವರು ಮಾತನಾಡಿ,ಶಾಸಕರ ಸೂಚನೆಯಂತೆ ಇಂದು ತಾಲೂಕು ಆಡಳಿತದ ವಿವಿಧ ಇಲಾಖೆಯ ಅಧಿಕಾರಿಗಳು ನಿಮ್ಮ ಕುಂದುಕೊರತೆಗಳನ್ನು ಆಲಿಸಿ ಅವುಗಳನ್ನು ಬಗೆಹರಿಸಲು ನಿಮ್ಮ ಬಳಿ ಬಂದಿದ್ದೇವೆ. ಸಾರ್ವಜನಿಕರು ನಿಮ್ಮ ಕೆಲಸ ಕಾರ್ಯಗಳಿಗಾಗಿ ಮಧ್ಯವರ್ತಿಗಳ ಮೊರೆಹೋಗದೆ ನೇರವಾಗಿ ಸಂಬಂಧಿಸಿದ ಅಧಿಕಾರಿಗಳನ್ನು ಭೇಟಿಯಾಗಿ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ ಎಂದು ಸಾರ್ವಜನಿಕರಿಗೆ ಕಿವಿ ಮಾತನ್ನು ಹೇಳಿದರು.
ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ,ಒಟ್ಟು ೨೫೦ ಅರ್ಜಿಗಳನ್ನು ಸಾರ್ವಜನಿಕರಿಂದ ಸ್ವೀಕರಿಸಲಾಗಿದ್ದು ಅವುಗಳಲ್ಲಿ ಬಹುತೇಕ ಅರ್ಜಿಗಳು,ನಿವೇಶನ ರಹಿತರು,ವಸತಿ ರಹಿತರು ಮತ್ತು ಸಾಗುವಳಿಗೆ ಜಮೀನುಗಳಿಗೆ ಸಂಬAಧಿಸಿದ್ದವು.ಇದೇ ವೇಳೆ ಸಭೆಯಲ್ಲಿ ನೂರಕ್ಕೂ ಹೆಚ್ಚು ಮಂದಿ ಫಲಾನುಭವಿಗಳಿಗೆ ಪಿಂಚಣಿ ಯೋಜನೆಯ ಆದೇಶ ಪತ್ರಗಳನ್ನು ಮತ್ತು ನೂರು ಮಂದಿ ರೈತರಿಗೆ ಫವತಿ ಖಾತೆಗಳನ್ನು ಶಾಸಕರು ವಿತರಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಇಲಾಖೆಗಳಿಂದ ಫಲಾನುಭವಿಗಳಿಗೆ ಗಂಗಾ ಕಲ್ಯಾಣ ಯೋಜನೆಯಡಿ ಪಂಪು ಮೋಟಾರ್ ಹಾಗೂ ಇನ್ನಿತರೆ ಪರಿಕರಗಳನ್ನು ವಿತರಿಸಲಾಯಿತು.
ಸಭೆಯಲ್ಲಿ ತಾಲೂಕು ಪಂಚಾಯತಿ ಇಒ ಜಿ.ಕೆ.ಹೊನ್ನಯ್ಯ,ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀನಿವಾಸ್ ಮೂರ್ತಿ,ವಾಟದ ಹೊಸಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಸುನಿತಾ ಮಹೇಶ್,ಲೋಕೋಪಯೋಗಿ ಎಇಇ ಪ್ರಕಾಶ್, ಅರಣ್ಯಾಧಿಕಾರಿ ಹಂಸವಿ, ಪಶು ಅಧಿಕಾರಿ ಡಾ.ಮಾರುತಿ, ಸಿಡಿಪಿಓ ಇಲಾಖೆಯ ಮೂಕಾಂಭಿಕೆ,ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮೋಹನ್, ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ನಾರಾಯಣಸ್ವಾಮಿ,ಎಇಇ ರಘುನಾಥ್, ಪಿಡಿಓ ಬಾಲಕೃಷ್ಣ, ಶ್ರೀನಿವಾಸ್, ಆಶ್ರಯ ಸಮಿತಿಯ ಸದಸ್ಯ ನಾಗೇಂದ್ರ ಹಾಗೂ ಇನ್ನಿತರೆ ಇಲಾಖೆಯ ಅಧಿಕಾರಿಗಳು ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಮುಖಂಡರಾದ ಆರ್ ಆರ್.ರೆಡ್ಡಿ,ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಸಭೆಯಲ್ಲಿ ಭಾಗವಹಿಸಿದ್ದರು.