ವಿದ್ಯಾನಿಧಿ ಶಾಲೆಯಲ್ಲಿ ಎರಡನೇ ದಿನದ ಅದ್ದೂರಿ ಬೆಳ್ಳಿ ಹಬ್ಬದ ಸಂಭ್ರಮ # ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ & ಸಾಂಪ್ರದಾಯಿಕ ನೃತ್ಯ ಪ್ರದರ್ಶನದ ಝಲಕ್ # ಗಣ್ಯರಿಗೆ ಅಭಿನಂಧನೆ
ಗೌರಿಬಿದನೂರು : ಶಾಲೆಯ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಮತ್ತು ಬೆಳ್ಳಿ ಮಹೋತ್ಸವ ಸಂಭ್ರಮಕ್ಕೆ ಶಾಲೆಯ ಶಿಕ್ಷಕರ ಮತ್ತು ಆಡಳಿತ ಮಂಡಳಿಯ ಎಲ್ಲ ನಿರ್ದೇಶಕರ ಬದ್ಧತೆ, ಅವಿರತ ಶ್ರಮ ಮತ್ತು ಪ್ರಾಮಾಣಿಕ ಪ್ರಯತ್ನ ಪ್ರಮುಖ ಕಾರಣವಾಗಿದೆ ಎಂದು ಶಾಸಕ ಕೆ.ಎಚ್. ಪುಟ್ಟಸ್ವಾಮಿಗೌಡ ತಿಳಿಸಿದರು.
ನಗರದ ವಿದ್ಯಾನಿಧಿ ಪಬ್ಲಿಕ್ ಶಾಲೆಯಲ್ಲಿ ಡಿಸೆಂಬರ್ ೦೧, ಭಾನುವಾರ ಆಯೋಜಿಸಿದ್ದ ಶಾಲೆಯ ಬಳ್ಳಿ ಮಹೋತ್ಸವ ಸಂಭ್ರಮ ವಿರಾಸತ್ – ೨೦೨೪ ರ ಎರಡನೇ ದಿನದ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ರಾಜ್ಯದ ಗಡಿ ಭಾಗದಲ್ಲಿನ ನಗರದಲ್ಲಿ ಕಳೆದ ೨೫ ವರ್ಷಗಳಿಂದಲೂ ಸತತವಾಗಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಆಸರೆಯಾಗಿರುವ ವಿದ್ಯಾನಿಧಿ ಸಂಸ್ಥೆ ಬೆಳ್ಳಿ ಸಂಭ್ರಮದಲ್ಲಿರುವುದು ನಿಜಕ್ಕೂ ಸಂತಸದ ವಿಚಾರವಾಗಿದೆ. ಆಧುನಿಕ ಜಗತ್ತಿನಲ್ಲಿ ವಿದ್ಯಾರ್ಥಿಗಳಿಗೆ ಕೇವಲ ಶಿಕ್ಷಣದಿಂದ ಮಾತ್ರ ಬದುಕನ್ನು ರೂಪಿಸಲು ಸಾಧ್ಯವಿಲ್ಲ. ಅದಕ್ಕೆ ಪೂರಕವಾಗಿ ಕಲೆ, ಸಾಹಿತ್ಯ, ನೃತ್ಯ, ಭಾಷೆ, ಸಂಸ್ಕೃತಿ, ಸಂಸ್ಕಾರ ಮತ್ತು ನಾಗರೀಕತೆ ಸೇರಿದಂತೆ ಎಲ್ಲವೂ ಅಗತ್ಯವಾಗಿದೆ. ಇವೆಲ್ಲವುಗಳನ್ನು ಒಳಗೊಂಡ ಗುಣಮಟ್ಟದ ಶಿಕ್ಷಣವನ್ನು ಈ ಸಂಸ್ಥೆ ಪಾರದರ್ಶಕವಾಗಿ ನೀಡುವ ಮೂಲಕ ಪೋಷಕರ ನಿರೀಕ್ಷೆಯಂತೆ ನೀಡುತ್ತಿದೆ. ಮಕ್ಕಳಲ್ಲಿನ ಪ್ರತಿಭೆಯ ಅನಾವರಣಕ್ಕೆ ಇಂತಹ ವಾರ್ಷಿಕೋತ್ಸವ ಸಂಭ್ರಮಾಚರಣೆಗಳು ಉತ್ತಮ ವೇದಿಕೆಗಳಾಗಿವೆ. ಪ್ರತೀ ಶೈಕ್ಷಣಿಕ ಸಾಲಿನಲ್ಲಿ ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಯ ಸಾಧನೆ ಇದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಅಂತರಾಷ್ಟಿçÃಯ ಪ್ಯಾರಾ ಅಥ್ಲೆಟಿಕ್, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಹಾಗೂ ಮಾತೃಶ್ರೀ ಫೌಂಡೇಷನ್ ನ ಮುಖ್ಯಸ್ಥರಾದ ಮಾಲತಿ ಕೆ.ಹೊಳ್ಳ ಮಾತನಾಡಿ, ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ ಭವಿಷ್ಯದಲ್ಲಿ ಫಲ ನೀಡಲಿದೆ ಎಂಬ೦ತೆ ವಿದ್ಯಾನಿಧಿ ಶಾಲೆಯ ೨೫ ವರ್ಷಗಳ ಶೈಕ್ಷಣಿಕ ಪ್ರಗತಿಯಿಂದ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಾಕ್ಷಿಯಾಗಿದೆ. ಈ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ದೇಶದ ವಿವಿದೆಡೆಗಳಲ್ಲಿ ಮುತ್ತು, ರತ್ನಗಳಂತೆ ಪ್ರಜ್ವಲಿಸುತ್ತಾರೆ. ವಿದ್ಯಾರ್ಥಿಗಳು ಅಕ್ಷರ ಕಲಿತ ಶಾಲೆ ಮತ್ತು ಜನ್ಮ ನೀಡಿದ ಪೋಷಕರ ಹೆಸರನ್ನು ಉಳಿಸಿ ಬೆಳೆಸುವ ಪ್ರಯತ್ನ ಮಾಡಬೇಕು ಎಂಬುದೇ ಎಲ್ಲರ ಕನಸಾಗಿದೆ ಎಂದರು.
ನಾನು ವಿಕಲಚೇತನ ವಿದ್ಯಾರ್ಥಿ ಎಂದು ತಿಳಿದಿದ್ದರೂ ಕೂಡ ಬದುಕಿನಲ್ಲಿ ಎಂದಿಗೂ ಆತ್ಮಸ್ಥೈರ್ಯ ಕಳೆದುಕೊಂಡಿಲ್ಲ. ನನ್ನ ಬದುಕಿಗೆ ಹೊಸ ರೂಪ ನೀಡಿದ ನನ್ನ ಪೋಷಕರೇ ನನ್ನ ಪಾಲಿಗೆ ಹಿರೋಗಳು, ವೀಲ್ ಚೇರ್ ನನಗೆ ರಥವಿದ್ದಂತೆ ಇಂದಿಗೂ ನಾನು ರಾಣಿಯಂತೆ ನೆಮ್ಮದಿ ಯಾಗಿ ಬದುಕು ಸಾಗಿಸುತ್ತಿದ್ದೇನೆ. ವಿಕಲಚೇತನೆ ಎಂಬ ಅಳುಕಿಲ್ಲ, ನನ್ನಂತಹವರಿಗೆ ಗುಣಮಟ್ಟದ ಶಿಕ್ಷಣ ನೀಡಿದರೆ ವಿಶ್ವವನ್ನೆ ಗೆಲ್ಲುವ ಶಕ್ತಿ ನೀಡಿದಂತಾಗುತ್ತದೆ. ಪೋಷಕರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಮೌಲ್ಯಾಧಾರಿತ ಸಂಸ್ಕಾರ ಕಲಿಸಿದಲ್ಲಿ ಸಮಾಜದಲ್ಲಿ ನಿಜವಾದ ಸಾಧಕರಾಗಿ ಬೆಳಗುತ್ತಾರೆ. ನಮ್ಮ ಮಾತೃ ಫೌಂಡೇಶನ್ ನಲ್ಲಿ ೫೯ ಮಂದಿ ವಿಕಲಚೇತನ ಮಕ್ಕಳಿದ್ದಾರೆ, ಕಳೆದ ೨೦ ವರ್ಷಗಳಿಂದ ಸುಮಾರು ೨೯ ಮಕ್ಕಳಿಗೆ ಪದವಿ ಶಿಕ್ಷಣ ನೀಡಿದ್ದೇವೆ. ಪ್ರತೀ ಸಮಸ್ಯೆಗೂ ಪರಿಹಾರವಿದೆ, ಆತ್ಮಸ್ಥೈರ್ಯವನ್ನು ಸದೃಢಗೊಳಿಸಿಕೊಳ್ಳುವ ಶಕ್ತಿ ನಮ್ಮದಾಗ ಬೇಕು. ಪೋಷಕರು ಮತ್ತು ಶಿಕ್ಷಕರು ಮಾನಸಿಕ ಸ್ಥಿರತೆಯನ್ನು ಹೊಂದಿದರೆ ಮಾತ್ರ ಮಕ್ಕಳ ಬದುಕು ಹಸನಾಗುತ್ತದೆ ಎಂದು ಹೇಳಿದರು.
ವಿದ್ಯಾನಿಧಿ ಶಾಲೆಯ ಪ್ರಾಂಶುಪಾಲರಾದ ಪಿ.ಮಧುಸೂದನ್ ಮಾತನಾಡಿ, ವಿದ್ಯಾನಿಧಿ ಶಾಲೆಯು ೨೫ ನೇ ವರ್ಷದ ಬೆಳ್ಳಿ ಸಂಭ್ರಮದ ಆಚರಣೆಗೆ ಕಾರಣೀಭೂತರಾಗಿರುವ ಆಡಳಿತ ಮಂಡಳಿಯ ಎಲ್ಲ ನಿರ್ದೇಶಕರು, ಶಾಲೆಯ ಶಿಕ್ಷಕರು ಮತ್ತು ಪೋಷಕರು ಶಾಲೆಯ ಮೇಲಿಟ್ಟಿರುವ ವಿಶ್ವಾಸ ಮತ್ತು ನಂಭಿಕೆಯೇ ಕಾರಣವಾಗಿದೆ. ಶಾಲೆಯಲ್ಲಿನ ಪ್ರತೀ ವಿದ್ಯಾರ್ಥಿಯ ಶೈಕ್ಷಣಿಕ ಪ್ರಗತಿಯೇ ನಮ್ಮ ಪ್ರಮುಖ ಧ್ಯೇಯವಾಗಿದೆ. ಶೀಘ್ರದಲ್ಲೇ ಸಂಸ್ಥೆಯು ಪದವಿ ಪೂರ್ವ ಶಿಕ್ಷಣವನ್ನು ಆರಂಭಿಸಿ ಮಕ್ಕಳ ಬದುಕಿಗೆ ಆಸರೆಯಾಗಲಿದೆ. ಪೋಷಕರ ಆಶಯದಂತೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಮತ್ತು ಮೌಲ್ಯಾಧಾರಿತ ಶಿಕ್ಷಣವನ್ನು ಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.
ಬೆಳ್ಳಿ ಮಹೋತ್ಸವ ಸಂಭ್ರಮದ ವೇದಿಕೆಯಲ್ಲಿ ಗಣ್ಯರು ಮತ್ತು ಶಾಲಾ ಆಡಳಿತ ಮಂಡಳಿಯ ನಿರ್ದೇಶಕರು ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಸಾಧನೆ ಮಾಡಿರುವ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಅಭಿನಂಧಿಸಿದರು. ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ಗೀತೆ ಗಳಿಗೆ ಅದ್ಭುತವಾಗಿ ನೃತ್ಯ ಪ್ರದರ್ಶನ ಮಾಡುವ ಮೂಲಕ ಬೆಳ್ಳಿ ಸಂಭ್ರಮ ವಿರಾಸತ್ ೨೦೨೪ ಕ್ಕೆ ಮೆರಗು ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಮಾತೃ ಫೌಂಡೇಶನ್ ನ ಮುಖ್ಯಸ್ಥೆ ಹಾಗೂ ಅಂತರಾಷ್ಟಿçÃಯ ಪ್ಯಾರಾ ಅಥ್ಲೆಟಿಕ್ ಮಾಲತಿ ಕೆ ಹೊಳ್ಳ ರವರನ್ನು ಶಾಲಾ ಆಡಳಿತ ಮಂಡಳಿಯ ನಿರ್ದೇಶಕರು ಮಾತೃ ಫೌಂಡೇಶನ್ ಗೆ ಉದಾರವಾಗಿ ಆರ್ಥಿಕ ಸಹಕಾರ ನೀಡಿ, ಆತ್ಮೀಯವಾಗಿ ಅಭಿನಂಧಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಇಸ್ತೂರಿ ರಮೇಶ್ ಕುಮಾರ್, ಉಪಾಧ್ಯಕ್ಷರಾದ ಎ.ಆರ್.ನಾಗರಾಜ, ಜೆ.ಎಚ್.ವಿಶ್ವನಾಥ್ ರಾವ್, ಜಂಟಿ ಕಾರ್ಯದರ್ಶಿ ಕೆ.ವೆಂಕಟೇಶ್ ಬಾಬು, ನಿರ್ದೇಶಕರಾದ ಜಿ.ಆರ್.ಅರುಣ್ ಕುಮಾರ್, ಎಸ್.ಜಿ.ಸುಬ್ರಮಣ್ಯ, ಕೆ.ಬಾಬುರಾಜ್, ಕೆ.ಎಸ್. ಮಹೇಶ್, ಕೆ.ಆರ್.ಸುರೇಶ್, ಡಿ.ಎಸ್.ರಮೇಶ್ ಕುಮಾರ್, ಎನ್.ಸಿ.ಶ್ರೀನಿವಾಸಮೂರ್ತಿ, ಉಪ ಪ್ರಾಂಶುಪಾಲರಾದ ಕೆ.ಮನುಜಾಕ್ಷಿ, ಆಡಳಿತಾಧಿಕಾರಿ ಶರ್ಮಿಳಾ ಸೇರಿದಂತೆ ಶಿಕ್ಷಕರು ಮತ್ತು ಪೋಷಕರು ಭಾಗವಹಿಸಿದ್ದರು.