Thursday, 25th April 2024

ಬಣಜಿಗ ಸಮಾಜದ ಕುರಿತು ಅವಹೇಳನ: ಪ್ರತಿಭಟನೆ

ವಿಜಯಪುರ : ಬಣಜಿಗ ಹಾಗೂ ಪಂಚಮಸಾಲಿ ಸಮಾಜವು ಸಮಾಜದ ಎರಡು ಕಣ್ಣುಗಳು, ಎರಡೂ ಸಮಾಜ ಸಹಬಾಳ್ವೆ ಯಿಂದ ಜೀವನ ಸಾಗಿಸು ತ್ತಿದ್ದಾರೆ. ಆದರೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಮಾಜಿ ಶಾಸಕ ವಿಜಯಾನಂದ ಕಾಶೆಪ್ಪನವರ್ ಹುಳಿ ಹಿಂಡುವ ಪ್ರಯತ್ನ ಮಾಡುತ್ತಿದ್ದಾರೆ. ಕೂಡಲೇ ಬಣಜಿಗ ಸಮಾಜದ ಕ್ಷಮೆ ಕೇಳಬೇಕು ಎಂದು ಸಮಾಜದ ಮುಖಂಡರು ಆಗ್ರಹಿಸಿದ್ದಾರೆ.

ಬಣಜಿಗ ಸಮಾಜದ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಬಣಜಿಗ ಸಮಾಜದವರು ಗುರು ವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಮುಖಂಡ ಶರಣು ಸಬರದ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ ಹಾಗೂ ವಿಜಯಾನಂದ ಕಾಶೆಪ್ಪನವರ್ ನಮ್ಮ ಸಮಾಜ ದವರ ವಿರುದ್ಧ ಏನು ಮಾತನಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು, ಕೂಡಲೇ ಇಬ್ಬರು ನಾಯಕರು ನಮ್ಮ ಸಮಾಜದವರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

ನಾವು ಹಾಗೂ ಪಂಚಮಸಾಲಿ ಸಮಾಜದವರು ಒಗ್ಗಟ್ಟಿನಿಂದ ಸಹಬಾಳ್ವೆ ಯಿಂದ ಜೀವನ ಸಾಗಿಸುತ್ತಿದ್ದೇವೆ. ನಮ್ಮ ಪ್ರತಿಭಟನೆ ಯಾವುದೇ ಪಕ್ಷ ಅಥವಾ ಯಾವುದೇ ಸಮಾಜದ ವಿರುದ್ಧ ಅಲ್ಲ ಬದಲಾಗಿ ನಮ್ಮ ಸಮಾಜದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದವರ ವಿರುದ್ಧ, ಕೂಡಲೇ ಇವರಿಬ್ಬರೂ ನಮ್ಮ ಸಮಾಜದವರ ಕ್ಷಮೆ ಕೇಳಬೇಕು, ಇಲ್ಲದಿದ್ದರೆ ಮುಂದಿನ ಚುನಾವಣೆ ಯಲ್ಲಿ ನಮ್ಮ ಶಕ್ತಿ ತೋರಿಸಬೇಕಾಗುತ್ತದೆ ಎಂದು ಮುಖಂಡ ಗುರುಲಿಂಗಪ್ಪ ಅಂಗಡಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಬೆಳಗಾವಿ ಜಿಲ್ಲಾ ಬಣಜಿಗ ಸಮಾಜದ ಅಧ್ಯಕ್ಷ ಮಾಜಿ ಸಚಿವ ಉಮೇಶ ಕತ್ತಿ ಅವರ ಕುಟುಂಬದವರ ವಿರುದ್ದ ಮಾಜಿ ಶಾಸಕ ವಿಜಯಾನಂದ ಕಾಶೆಪ್ಪನವರ ನಾಲಿಗೆ ಹರಿಬಿಟ್ಟಿದ್ದಾರೆ. ಕತ್ತಿ ಕುಟುಂಬದವರ ವಿರುದ್ಧ ಹುಕ್ಕೇರಿಯಲ್ಲಿ ಸ್ಪರ್ದಿಸುತ್ತೇನೆ ಅಂತ ಸವಾಲು ಹಾಕಿದ್ದಾರೆ. ಧೈರ್ಯವಿದ್ರೆ ಸ್ಪರ್ಧೆ ಮಾಡಿ ಸೋಲಿಸಲಿ, ಇಲ್ಲದಿದ್ರೆ ಬರುವ ಚುನಾವಣೆಯಲ್ಲಿ ಹುನಗುಂದ ಕ್ಷೇತ್ರದಲ್ಲಿ ಬಣಜಿಗ ಸಮಾಜ ಏನು ಅಂತ ತೋರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನಾವೂ ಯಾವುದೇ ಕಾರಣಕ್ಕೂ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಡ ಅಂತ ಹೇಳಿಲ್ಲ, ನಾವೂ ಯಾರೂ ಇದಕ್ಕೆ ವಿರೋಧ ವ್ಯಕ್ತಪಡಿಸಿಲ್ಲ. ಪಂಚಮಸಾಲಿಯಲ್ಲಿ ಎಲ್ಲರೂ ಶ್ರೀಮಂತರಲ್ಲ ಬಡವರಿದ್ದಾರೆ ಅವರಿಗೂ 2ಎ ಸವಲತ್ತು ನೀಡಿ ಎಂದು ಒತ್ತಾಯಿಸುತ್ತೇವೆ. ಆದರೆ ಈ ಇಬ್ಬರೂ ನಾಯಕರಿಂದ ಪಂಚಮಸಾಲಿ ಸಮುದಾಯ ತಲೆ ತಗ್ಗಿಸುವಂತಾಗಿದೆ ಎಂದು ಹೇಳಿದರು.

ನಮ್ಮ ಸಮಾಜದ ಕೊಡುಗೆ ಏನು ಎಂಬುದು ಜಗತ್ತಿಗೆ ಗೊತ್ತಿದೆ. ಕೇವಲ ಶೇ.2 ರಷ್ಟು ಜನಸಂಖ್ಯೆ ಇದೆ ಅಂತ ಯತ್ನಾಳರು ಹೇಳಿದ್ದಾರೆ. ಆದರೆ ರಾಜ್ಯಕ್ಕೆ 7 ಜನ ಮುಖ್ಯಮಂತ್ರಿಗಳನ್ನು ನೀಡಿದ ಸಮಾಜ ನಮ್ಮದು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ ಎಂದು ಹೇಳಿದರು.

ನಗರದ ಸಿದ್ದೇಶ್ವರ ದೇವಸ್ಥಾನದಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿಯವರೆಗೂ ನಡೆಯಿತು. ನಂತರ ಈ ಇಬ್ಬರೂ ನಾಯಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ರಾಜ್ಯ ಬಣಜಿಗ ಸಮಾಜದ ಅಧ್ಯಕ್ಷ ಅಂದಪ್ಪ ಜವಳಿ, ಕಾರ್ಯದರ್ಶಿ ರವಿ ಕುಮಟಗಿ, ಶಿವಬಸಪ್ಪ ಹೆಸರೂರು, ಬೆಳಗಾವಿ ಜಿಲ್ಲಾ ಬಣಜಿಗ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಕನಶೆಟ್ಟಿ, ವಿಜಯಪುರ ಜಿಲ್ಲಾ ಬಣಜಿಗ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಎಸ್.ರೂಡಗಿ, ಮುಖಂಡರಾದ ಗುರುಲಿಂಗಪ್ಪ ಅಂಗಡಿ, ಶರಣು ಸಬರದ, ಸುನಿಲ್ ರಬಶೆಟ್ಟಿ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಬಣಜಿಗ ಸಮಾಜದವರು ಭಾಗವಹಿಸಿದ್ದರು.

error: Content is protected !!