Thursday, 26th December 2024

Ration card: ಸಮರ್ಪಕ ಪಡಿತರ ವ್ಯವಸ್ಥೆಗೆ ಆಗ್ರಹಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದಿಂದ ಪ್ರತಿಭಟನೆ

ಅವೈಜ್ಞಾನಿಕ ರೇಷನ್ ಕಾರ್ಡ್ ತಿದ್ದುಪಡಿ ವಿರೋಧಿಸಿ

ಬಾಗೇಪಲ್ಲಿ: ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೃಷಿಕೂಲಿ ಕಾರ್ಮಿಕರ, ರೈತರ ಬಿಪಿಎಲ್ ಕಾರ್ಡ್ ಗಳನ್ನು ರದ್ಧತಿ ಮಾಡಿ, ಬಡವರ ಅನ್ನ ಮತ್ತು ಆರೋಗ್ಯ ಸೌಲಭ್ಯಗಳನ್ನು ಕಸಿದುಕೊಳ್ಳುತ್ತಿವೆ ಎಂದು ಆರೋಪಿಸಿ ಪಟ್ಟಣದಲ್ಲಿ ಕರ್ನಾಟಕ ಪ್ರಾಂತ ಕೃಷಿಕೂಲಿ ಕಾರ್ಮಿಕರ ಸಂಘಟನೆಯ ನೇತೃತ್ವದಲ್ಲಿ ಸೋಮವಾರ ಬೃಹತ್ ಬೈಕ್ ಜಾಥಾ ಮತ್ತು ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ತಹಶೀಲ್ದಾರರ ಕಚೇರಿ ಮುಂದೆ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಪ್ರತಿಭಟನಾಕಾರರನ್ನು ಉದ್ದೇಶಿ ಮಾತನಾಡಿದ ಕರ್ನಾಟಕ ಪ್ರಾಂತ ಕೃಷಿಕೂಲಿಕಾರ್ಮಿಕರ ಸಂಘಟನೆಯ ಜಿಲ್ಲಾಧ್ಯಕ್ಷ ಕೆ.ನಾಗರಾಜ್ ಅವರು ರಾಜ್ಯ ಮತ್ತು ಕೇಂದ್ರ ಸರಕಾರಗಳು ಬಡವರನ್ನು ಬೀದಿಗೆ ತರಲು ಯತ್ನಿಸುತ್ತಿವೆ. ಬಿಪಿಎಲ್ ಕಾರ್ಡಿನ ಪಡಿತರ ಅಕ್ಕಿ ತಿಂದು ಬದುಕುತ್ತಿರುವ ಬಡವರಿಗೆ ಇರುವ ಕಾರ್ಡನ್ನು ರದ್ದುಗೊಳಿಸಿ ಅನ್ಯಾಯ ಮಾಡುತ್ತಿವೆ. ಇದರಿಂದಾಗಿ ಆಸ್ಪತ್ರೆಗಳಲ್ಲಿ ಬಿಪಿಎಲ್ ಕಾರ್ಡ್ ಇಲ್ಲದಿದ್ದರೆ ಆರೋಗ್ಯ ಸೌಲಭ್ಯಗಳು ದೊರೆಯುವುದಿಲ್ಲ. ಇಂತಹ ಅವೈಜ್ಞಾನಿಕ ಮತ್ತು ಅಸಂವಿಧಾನಿಕ ನಿರ್ಧಾರಗಳಿಂದ ತಾಲೂಕಿನಲ್ಲಿ ಸುಮಾರು ಒಂದು ಸಾವಿರ ಬಿಪಿಎಲ್ ಕಾರ್ಡ್ ರದ್ದು ಮಾಡಿ,ಬಡವರನ್ನು ಬೀದಿಗೆ ತರುವ ಕೆಲಸಗಳು ಸರಕಾರಗಳು ಮಾಡುತ್ತಿವೆ. ಕೂಡಲೇ ಇಂತಹ ನಿರ್ಧಾರಗಳನ್ನು ಕೈಬಿಡಬೇಕು. ಯಾವುದೇ ಬಡವನಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕೃಷಿ ಕೂಲಿ ಕಾರ್ಮಿಕರ ಸಂಘಟನೆಯು ಬೃಹತ್ ಪ್ರತಿಭಟನೆಗಳು ನಡೆಸಿ ಸರಕಾರಗಳಿಗೆ ಬಿಸಿ ಮುಟ್ಟಿಸಬೇಕಾಗುತ್ತದೆ ಎಂದರು.

ಬಡವರ ಪರ ಕಾಳಜಿ ಎಲ್ಲಿದೆ?

ಇದೇ ವೇಳೆ ಅಖಿಲ ಭಾರತ ಎಐಎಡಬ್ಲ್ಯೂಯುನ ರಾಜ್ಯ ಉಪಾಧ್ಯಕ್ಷ ಎಂ.ಪಿ ಮುನಿವೆಂಕಟಪ್ಪ ಮಾತನಾಡಿ, ರಾಜ್ಯದಲ್ಲಿ ಸಿದ್ಧರಾಮಯ್ಯನವರ ಬಡವರ ಪರ ಸರಕಾರ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ಬಡವರಿಗೆ ಇರುವಂತಹ ಬಿಪಿಎಲ್ ಕಾರ್ಡುಗಳನ್ನು ರದ್ದು ಮಾಡುತ್ತಿರುವುದು ಏಕೆ? ನೀವು ನಿಜವಾಗಿ ಬಡವರ ಪರ ಕಾಳಜಿ ಇದ್ದರೆ ಕೇಂದ್ರ ಸರಕಾರಕ್ಕೆ ಸೆಡ್ಡು ಹೊಡೆದು ಮತ್ತಷ್ಟು ಬಡವರಿಗೆ ಕಾರ್ಡುಗಳನ್ನು ವಿತರಿಸಲು ಕ್ರಮ ಕೈಗೊಳ್ಳಬೇಕು. ನೀವು ಶ್ರೀಮಂತರ ಕಾರ್ಡ್ ರದ್ದು ಮಾಡುತ್ತಿರುವುದಾಗಿ ಉತ್ತರಿಸುತ್ತೀರಿ. ಹಾಗಾದರೆ ಬಡವರ ಕಾರ್ಡುಗಳಿಗೆ ಶ್ರೀಮಂತರಿಗೆ ಏಕೆ ಕೊಟ್ಟಿದ್ದೀರಿ? ಇಂತಹ ಕೃತ್ಯವೆಸಗಿದವರ ವಿರುದ್ಧ ನಿಮ್ಮ ಕ್ರಮವೇನು ಎಂದು ಮುಖ್ಯಮಂತ್ರಿಯವರನ್ನು ಪ್ರಶ್ನಿಸಿದರು.

ಕಾರ್ಪೋರೇಟ್ ಪರವಾದ ಸರಕಾರಗಳು

ನಂತರ ಸಿಪಿಎಂ ಪಕ್ಷದ ತಾಲೂಕು ಕಾರ್ಯದರ್ಶಿ ರಘುರಾಮರೆಡ್ಡಿ ಮಾತನಾಡಿ,ಕೇಂದ್ರ ಸರಕಾರವು ಬಡವರಿಗೆ ಅನುಕೂಲವಾದ ಸಾರ್ವಜನಿಕ ಉದ್ಯಮಗಳನ್ನು ಸಂಪೂರ್ಣ ಹದೋಗತಿಗೆ ತಂದು, ಬಂಡವಾಳಶಾಹಿ ಕಾರ್ಪೋರೇಟ್ ಕಂಪನಿಗಳ ಅಭಿವೃದ್ಧಿಗೆ ಶ್ರಮಿಸುತ್ತಿದೆ.ಈ ಮೂಲಕ ಬಡವರಿಗೆ ದೊರೆಯಬೇಕಾದ ಸೌಲಭ್ಯ ಗಳನ್ನು ಕಿತ್ತುಕೊಳ್ಳುವ ಹುನ್ನಾರ ನಡೆಸಿವೆ ಎಂದು ಆಕ್ರೋಶ ಹೊರ ಹಾಕಿದರು. ಅರ್ಜಿ ಹಾಕಿರುವ ಎಲ್ಲಾ ಅರ್ಹ ಬಡವರಿಗೆ ತಕ್ಷಣ ಬಿಪಿಎಲ್ ರೇಷನ್ ಕಾರ್ಡ್ ನೀಡಬೇಕು.

ಬೇಡಿಕೆಗಳು
ಪ್ರತಿ ಬಿಪಿಎಲ್ ಕಾರ್ಡ್ಗೆ ೩೫ ಕೆ ಜಿ ಅಕ್ಕಿ ಮತ್ತು ಅಗತ್ಯ ಇರುವ ೧೪ ಆಹಾರ ವಸ್ತುಗಳನ್ನು ನ್ಯಾಯ ಬೆಲೆ ಅಂಗಡಿಗಳ ಮೂಲಕ ವಿತರಿಸಬೇಕು.ಅರ್ಹ ಬಡವರ ಬಿಪಿಎಲ್ ಕಾರ್ಡ್ಗಳನ್ನು ಎಪಿಎಲ್ ಗೆ ಮಾಡಿರುವುದನ್ನು ತಕ್ಷಣ ವಾಪಸ್ ಪಡೆಯಬೇಕು. ಈಗಾಗಲೇ ರದ್ದು ಪಡಿಸಿರುವ ಅರ್ಹ ಬಿಪಿಎಲ್ ಕಾರ್ಡ್ಗಳನ್ನು ತಕ್ಷಣವೇ ಬಡವರಿಗೆ ಹಂಚಿಕೆ ಮಾಡಬೇಕು. ಬಿಪಿಎಲ್ ಕಾರ್ಡ್ಗಳಿಗೆ ಹಾಕಿರುವ ೮ ಅವೈಜ್ಞಾನಿಕ ಮಾನದಂಡಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಾಪಸ್ ಪಡೆಯಬೇಕು.ಇ-ಕೆವೈಸಿ, ಪಾನ್ ಕಾರ್ಡ್ ಜೋಡಣೆಯ ಹೆಸರಿನಲ್ಲಿ ಬಡವರಿಗೆ ಹಿಂಸೆ ನೀಡುವುದನ್ನು ತಡೆಯಬೇಕು. ಹಿರಿಯ ವಯಸ್ಸಿನ ಪಡಿತರ ಚೀಟಿದಾರರಿಗೆ ಬೆರಳಚ್ಚನ್ನು ಆನ್ ಲೈನ್ ತೆಗೆದು ಕೊಳ್ಳದೇ ಇರುವುದರಿಂದ ಇವರಿಗೆ ಪಡಿತರಗಳು ಸಮರ್ಪಕವಾಗಿ ಸಿಗುತ್ತಿಲ್ಲ. ಕೂಡಲೇ ಇವರಿಗೆ ಮೊಬೈಲ್ ನ ಓಟಿಪಿ ಮೂಲಕ ಪಡಿತರಗಳನ್ನು ವಿತರಣೆ ಮಾಡಲು ಕ್ರಮ ಕೈಗೊಳ್ಳಬೇಕು.ಅಕ್ಕಿ ಹಣವನ್ನು ಬ್ಯಾಂಕ್ ಖಾತೆಗೆ  ಹಣವನ್ನು ತಕ್ಷಣ ಬಿಡುಗಡೆ  ಮಾಡಬೇಕು. ಗೃಹಲಕ್ಷೀ ಯೋಜನೆಗೆ ಬಾಕಿ ಹಣವನ್ನು ತಕ್ಷಣ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು.ಬ್ಯಾಂಕ್ ಖಾತೆಗೆ ಹಣ ಹಾಕುವುದರ ಬದಲಿಗೆ ಪಡಿತರ ಚೀಟಿದಾರರಿಗೆ ನೇರವಾಗಿ ಅಕ್ಕಿಯನ್ನು ವಿತರಿಸಬೇಕು

ಈ ಸಂದರ್ಭದಲ್ಲಿ ನಾನಾ ಸಂಘಟನೆಗಳ ಮತ್ತು ಸಿಪಿಎಂ ಮುಖಂಡರಾದ ಬಿ.ಸಾವಿತ್ರಮ್ಮ, ಎಂ.ಎನ್.ರಘುರಾಮ ರೆಡ್ಡಿ, ಚನ್ನರಾಯಪ್ಪ,ವಾಲ್ಮೀಕಿ ಅಶ್ವಥಪ್ಪ,ಜಿ.ಕೃಷ್ಣಪ್ಪ, ಮುನಿಯಪ್ಪ ಮುಸ್ತಫಾ, ಡಿ.ಸಿ.ಶ್ರೀನಿವಾಸ್, ಮಂಜುನಾಥ್, ಎಲ್. ವೆಂಕಟೇಶ್, ಜಹೀರ್ ಬೇಗ್, ಮುಸ್ತಾಫಾ, ಚಲಪತಿ ಸೇರಿದಂತೆ ಹಲವಾರು ಗಣ್ಯರು ಇದ್ದರು.