ತುಮಕೂರು: ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ ಅ. 11ರಂದು ಕುಮಾರಿ ಬಿ.ಎನ್ ರೇಖಾಶ್ರೀ ಒಂದು ದಿನದ ಯುವ ಕ್ರೀಡಾ ಅಧಿಕಾರಿಯಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಯಲ್ಲಿ ಕರ್ತವ್ಯ ನಿರ್ವಹಿಸಿದರು.
ರೇಖಾಶ್ರೀ ಅವರು ಯುವ ಕ್ರೀಡಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಬಗ್ಗೆ ಸಂತೋಷ ವ್ಯಕ್ತಪಡಿಸುತ್ತಾ, ಇಲಾಖೆಯ ಕಾರ್ಯ ಕ್ರಮಗಳನ್ನು ಸಂಘಟಿಸುವ ಬಗ್ಗೆ, ಕ್ರೀಡಾ ಶಾಲೆ, ನಿಲಯಕ್ಕೆ ಭೇಟಿ ನೀಡಿ ಕ್ರೀಡಾಪಟುಗಳಿಗೆ ಇಲಾಖೆಯಿಂದ ನೀಡುವ ಊಟೋಪಹಾರ, ತರಬೇತಿ ಇತ್ಯಾದಿಗಳ ಬಗ್ಗೆ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ್ ಅವರು ತಾಲ್ಲೂಕು ಕ್ರೀಡಾಂಗಣದಲ್ಲಿರುವ ಪೆವಿಲಿಯನ್ ಕಟ್ಟಡದಲ್ಲಿ ನಿರ್ಮಿಸಿರುವ ವಿವಿಧ ಅಂಕಣಗಳ ಬಗ್ಗೆ, ಜಿಲ್ಲಾ ಕ್ರೀಡಾಂಗಣಗಳ ನಿರ್ವ ಹಣೆ, ಯುವಕ,ಯುವತಿ ಸಂಘಗಳ ನೋಂದಣಿ, ಸ್ವಾಮಿ ವಿವೇಕಾನಂದ ಯುವ ಸ್ವ-ಸಹಾಯ ಸಂಘಗಳನ್ನು ರಚಿಸುವ ಬಗ್ಗೆ ಮಾಹಿತಿ ನೀಡಿದರು.
ನಂತರ ರೇಖಾಶ್ರೀ ಅವರು ಜಿಲ್ಲಾ ಕ್ರೀಡಾಂಗಣಕ್ಕೆ ಭೇಟಿ ನೀಡಿ ಜಿಮ್ನಾಸ್ಟಿಕ್, ಜಿಮ್ ಹಾಲ್, ಅಥ್ಲೆಟಿಕ್ಸ್, ಕಬಡ್ಡಿ, ವಾಲಿಬಾಲ್, ಬ್ಯಾಸ್ಕೆಟ್ ಬಾಲ್ ಇನ್ನಿತರೆ ಕ್ರೀಡಾ ಅಂಕಣಗಳನ್ನು ವೀಕ್ಷಿಸಿದರು. ಜಿಲ್ಲಾ ಮತ್ತು ಕೇಂದ್ರ ಕಚೇರಿಯಲ್ಲಿ ನಡೆಯುವ ವಿವಿಧ ಸಭೆ ಹಾಗೂ ಕಾರ್ಯಕ್ರಮಗಳ ಬಗ್ಗೆ ಅಧಿಕಾರಿಗಳಿಂದ ಮಾರ್ಗದರ್ಶನ ಪಡೆದರು.