ತಿಪಟೂರು : ಗ್ರಾಮೀಣ ಭಾಗದ ಜನರ ಸಮಸ್ಯೆಗಳು, ಕಷ್ಟ, ತೊಂದರೆಗಳನ್ನು ಅರಿಯುವ ಸಲುವಾಗಿ ಕಾಂಗ್ರೆಸ್ ವತಿಯಿಂದ ಕ್ಷೇತ್ರ ಸಂಚಾರ ಮಾಡಿ ಬಿಜೆಪಿ ದುರಾಡಳಿತದ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದು ಕಾಂಗ್ರೆಸ್ ಮುಖಂಡ ಸಿ.ಬಿ.ಶಶಿಧರ್ ತಿಳಿಸಿದರು.
ನಗರದ ಕಲ್ಲೇಶ್ವರಸ್ವಾಮಿ ದೇವಾಲಯದ ಬಳಿ ಗುರುವಾರ ಕಾಂಗ್ರೆಸ್ ಮುಖಂಡ ಸಿ.ಬಿ.ಶಶಿಧರ್ ಪೂಜೆ ಸಲ್ಲಿಸಿ ಬೆಂಬಲಿಗ ರೊ0ದಿಗೆ ಕ್ಷೇತ್ರ ಸಂಚಾರಕ್ಕೆ ಚಾಲನೆ ನೀಡಿದರು. ಕಳೆದ ಮೂರು ವರ್ಷದಲ್ಲಿ ಗ್ರಾಮೀಣ ಭಾಗದ ಜನರು ಹೆಚ್ಚಿನ ಸಮಸ್ಯೆಯನ್ನು ಎದುರಿಸಿದ್ದು, ಹಲವು ಸಮಸ್ಯೆಗಳಿಂದ ತೊಂದರೆಯಲ್ಲಿ ಸಿಲುಕಿದ್ದಾರೆ.
ಅಂತಹವರಿಗೆ ಸರ್ಕಾರದ ಸೌಕರ್ಯ ಅಥವಾ ವೈಯಕ್ತಿಕ ಸಹಕಾರ ನೀಡುವ ಆಲೋಚನೆ ಮಾಡಲಾಗಿದೆ. ಬಿಜೆಪಿ ಸರ್ಕಾರ ಕೇವಲ ಕೇಂದ್ರ ಸರ್ಕಾರದ ಯೋಜನೆ ಯನ್ನು ತೋರಿಸುತ್ತಾ ಜನರನ್ನು ಮೋಸ ಮಾಡುತ್ತಿದ್ದು ಇದರ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಲಾಗುವುದು. ಅಲ್ಲದೇ ಬೂತ್ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆಯನ್ನು ಮಾಡಲು ಕ್ಷೇತ್ರ ಸಂಚಾರ ಸಹಕಾರಿ ಆಗಲಿದೆ ಎಂದರು.
ಹಾಲ್ಕುರಿಕೆ ಗ್ರಾ.ಪಂ.ಅಧ್ಯಕ್ಷ ಉಮಾಮಹೇಶ್ ಮಾತನಾಡಿ ಕಾಂಗ್ರೆಸ್ ಪಕ್ಷದಿಂದ ಸಿ.ಬಿ.ಶಶಿಧರ್‌ಗೆ ಟಿಕೆಟ್ ನಿಗದಿಯಾಗಿದ್ದು ಎಲ್ಲರ ಸಹಕಾರ ಅಗತ್ಯವಾಗಿದೆ. ಕಾಂಗ್ರೆಸ್ ಪಕ್ಷವೂ ಯುವಜನತೆಗೆ ಹೆಚ್ಚಿನ ಆದ್ಯತೆ ನೀಡಲಿದ್ದು ಕಾರ್ಯಕರ್ತರೂ ಹೆಚ್ಚಿನ ಸಹಕಾರ ನೀಡಬೇಕಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಜಿ.ಪಂ.ಸದಸ್ಯ ತ್ರಿಯಯಂಬಕ, ವಕೀಲ ಮಲ್ಲೇಶ್, ದಿನೇಶ್ ಅನಿವಾಳ, ಶರತ್ ಕಲ್ಲೇಗೌಡನಪಾಳ್ಯ, ಆಲ್ಬೂರು ಮಹಲಿಂಗಪ್ಪ, ಮಾಗೇನಹಳ್ಳಿ ಶಂಕರ್, ಸ್ವಾಮಿ ಬಳುವನೆರಲು ಇದ್ದರು.