ಯಾದಗಿರಿ: ಕಲ್ಯಾಣ ಕರ್ನಾಟಕ ಉತ್ಸವ ಅಂಗವಾಗಿ ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ರಾಷ್ಟ್ರ ಧ್ವಜಾರೋಹಣವನ್ನು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ನೆರವೇರಿಸಿದರು.
ನಂತರ ವಿವಿಧ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿದರು. ಇದಾದ ಬಳಿಕ ಆಕರ್ಷಕ ಪಥ ಸಂಚಲನ ನಡೆಯಿತು.
ಈ ವೇಳೆ ಮಾತನಾಡಿದ ಸಚಿವರು, ಹೈದರಾಬಾದ್ ಪ್ರಾಂತ್ಯವು ಸ್ವತಂತ್ರವಾಗಿ ಭಾರತದೊಂದಿಗೆ ವಿಲೀನವಾದ ದಿನವನ್ನು ನೆನಪಿಸಿಕೊಳ್ಳಲು ಆಗ ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ ಆಚರಿಸಲಾಗುತ್ತಿದ್ದು, ಈಗ ಕಲ್ಯಾಣ ಕರ್ನಾಟಕ ಉತ್ಸವವಾಗಿ ಮಾಡಲಾಗುತ್ತಿದೆ ಎಂದು ಹೇಳಿದರು.
1947 ರ ಆಗಸ್ಟ್ 15 ರಂದು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು. ಆದರೆ, ಅಂದಿನ ಹೈದರಾಬಾದ್ ಪ್ರಾಂತ್ಯ ವಿಲೀನಕ್ಕೆ ಒಪ್ಪದೇ ಇದ್ದಾಗ ನಿಜಾಮರ ವಿರುದ್ಧ ಆಪರೇಷನ್ ಪೊಲೋ ಮಾಡಿ ನಿಜಾಮರ ಸೈನ್ಯವನ್ನು ಹತ್ತಿಕ್ಕುವಲ್ಲಿ ಯಶಸ್ವಿಯಾಯಿತು ಎಂದರು.
ಯಾದಗಿರಿಯಲ್ಲಿ ಸರ್ದಾರ್ ವಲ್ಲಭಭಾಯ್ ಪಟೇಲ್ ಮೂರ್ತಿ ಸ್ಥಾಪನೆಗೆ ಈಗಾಗಲೇ ಯೋಜನೆ ರೂಪಿಸಿದ್ದೇವೆ. ನಿಜಾಮರ ಆಳ್ವಿಕೆಯಲ್ಲಿ ಈ ಭಾಗ ಹಿಂದುಳಿದಿವೆ. ಈ ಭಾಗಕ್ಕೆ ವಿಶೇಷ ಸ್ಥಾನಮಾನ ನೀಡಿದ್ದರಿಂದ ರಾಜ್ಯದ ಇನ್ನಿತರರೊಂದಿಗೆ ಸ್ಪರ್ಧಿಸಲು ಅವಕಾಶವಾಗಿದೆ. ಗುಲಾಮಗಿರಿಯೊಂದಿಗೆ ಇದ್ದೇವು. ಈಗ ಅದು ನೀಗಿದೆ. ರಾಜ್ಯದ ಅಭಿವೃದ್ಧಿಗೆ ಪಂಚ ಗ್ಯಾರಂಟಿ ಜಾರಿ ಮಾಡಲಾಗಿದೆ ಎಂದರು.
ಈ ಭಾಗದಲ್ಲಿ ಸ್ವತಂತ್ರಕ್ಕಾಗಿ ಎರಡು ಬಾರಿ ಹೋರಾಟ ಮಾಡಲಾಗಿದೆ. ಇತಿಹಾಸ ಓದಬೇಕು. ಮೈಸೂರು ಮಹಾ ರಾಜರು ಪ್ರಗತಿಪರ ಚಿಂತಕರಾಗಿದ್ದು, ನೀರಾವರಿ ಸೌಲಭ್ಯ ಒದಗಿಸಿದ್ದರು ಎಂದು ಹೇಳಿದರು.
ಇದೇ ವೇಳೆ, ಸ್ವಚ್ಛಯೇ ಹೇ ಸೇವೆಗೆ ಚಾಲನೆ ನೀಡಲಾಯಿತು. ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಯೂಡಾ ಅಧ್ಯಕ್ಷ ವಿನಾಯಕ ಮಾಲಿಪಾಟೀಲ, ಜಿಲ್ಲಾಧಿಕಾರಿ ಡಾ.ಸುಶೀಲಾ, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಲವೀಶ್ ಒರ್ಡಿಯಾ, ಅರಣ್ಯ ಸಂರಕ್ಷಣಾ ಅಧಿಕಾರಿ ಕಾಜೋಲ್ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ ಸಂಗೀತ, ಹೆಚ್ಚುವರಿ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ, ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್ ಸೇರಿದಂತೆ ಜಿಲ್ಲಾಮಟ್ಟದ, ತಾಲೂಕು ಮಟ್ಟದ ಅಧಿಕಾರಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ: Yadgir News: ಬಪ್ಪರಗಾ ಗ್ರಾಮದ ದಲಿತರಿಗೆ ಬಹಿಷ್ಕಾರ; ಸಾಮರಸ್ಯದಿಂದ ಬದುಕಲು ಮನವೊಲಿಸಿದ ಅಧಿಕಾರಿಗಳು