ತುಮಕೂರು: ಬ್ಯಾಂಕಿಂಗ್ ಕ್ಷೇತ್ರದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಟಿಎಂಸಿಸಿ ಬ್ಯಾಂಕ್ ಎಟಿಎಂ ನಲ್ಲಿ ಚಿನ್ನದ ನಾಣ್ಯ ಪಡೆಯುವ ಗೋಲ್ಡ್ ಕಾಯಿನ್ ಎಟಿಎಂ ಸೇವೆಯನ್ನು ಆರಂಭಿಸಿರುವುದು ಶ್ಲಾಘನೀಯ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ನಗರದ ಟಿಎಂಸಿಸಿ ಬ್ಯಾಂಕ್ ಗೋಲ್ಡ್ ಕಾಯಿನ್ ಎಟಿಎಂ ಸೇವೆ ಉದ್ಘಾಟಿಸಿ ಮಾತನಾಡಿ, ಎಟಿಎಂನಲ್ಲಿ ಚಿನ್ನದ ನಾಣ್ಯ ಪಡೆಯುವುದೆಂದರೆ ಇದೊಂದು ವಿಶಿಷ್ಟ, ವಿಶೇಷ ಸೇವೆ. ಪ್ರಪಂಚದಲ್ಲೇ ಮೊದಲ ಬಾರಿಗೆ ನಮ್ಮ ತುಮಕೂರಿನಲ್ಲಿ ಈ ಸೇವೆ ಒದಗಿಸಿದ ಟಿಎಂಸಿಸಿ ಅಧ್ಯಕ್ಷ ಡಾ.ಎನ್.ಎಸ್.ಜಯಕುಮಾರ್ ಹಾಗೂ ತಂಡವನ್ನು ಅಭಿನಂದಿಸುತ್ತೇನೆ. ಬ್ಯಾಂಕಿAಗ್ ಕ್ಷೇತ್ರದಲ್ಲಿ ಆಧುನಿಕ ಸೇವೆ ಒದಗಿಸಿದ ಇವರ ಕೊಡುಗೆ ಪ್ರಶಂಸನೀಯ ಎಂದರು.
ತುಮಕೂರು ನಗರ ಬೆಂಗಳೂರಿನ ಭಾಗವಾಗಿ ಬೆಳವಣಿಗೆಯಾಗುತ್ತಿದೆ. ಬ್ರ್ಯಾಂಡ್ ಬೆಂಗಳೂರು ಯೋಜನೆಯಲ್ಲಿ ತುಮಕೂರು ನಗರವೂ ಅದರ ಭಾಗವಾಗಲಿದೆ, ಅದಕ್ಕೆ ಪೂರಕವಾಗಿ ಗೋಲ್ಡ್ ಕಾಯಿನ್ ಎಟಿಎಂ ಸೇವೆ ವಿಶೇಷ ವಾಗಿದೆ. ಇಂತಹ ಸೇವೆ ನನಗೆ ಆಶ್ಚರ್ಯ ಹಾಗೂ ಆನಂದ ತಂದಿದೆ ಎಂದು ಟಿಎಂಸಿಸಿಯ ಆಡಳಿತ ಮಂಡಳಿ ಸೇವಾಕಾರ್ಯವನ್ನು ಸಚಿವ ಡಾ.ಪರಮೇಶ್ವರ್ ಶ್ಲಾಘಿಸಿದರು.
ಟಿಎಂಸಿಸಿ ಅಧ್ಯಕ್ಷ ಡಾ.ಎನ್.ಎಸ್.ಜಯಕುಮಾರ್ ಮಾತನಾಡಿ, ಭಾರತದ ಬ್ಯಾಂಕಿಂಗ್ ಕ್ಷೇತ್ರದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಟಿಎಂಸಿಸಿವತಿಯಿಂದ ನಗರದಲ್ಲಿ ಗೋಲ್ಡ್ ಕಾಯಿನ್ ಎಟಿಎಂ ಸೇವೆ ಆರಂಬಿಸಲಾಗಿದೆ. ಸಾಮಾನ್ಯ ಎಟಿಎಂಗಳಲ್ಲಿ ಹಣ ಪಡೆಯುವಂತೆ ಇಲ್ಲಿ ಚಿನ್ನದ ನಾಣ್ಯಗಳನ್ನು ಪಡೆಯಬಹುದು. ಅರ್ಧ ಗ್ರಾಂನಿಂದ ಹತ್ತು ಗ್ರಾಂವರೆಗೆ ಚಿನ್ನದ ನಾಣ್ಯಗಳನ್ನು ಗ್ರಾಹಕರು ಎಟಿಎಂನಲ್ಲಿ ಖರೀದಿ ಮಾಡಬಹುದು ಎಂದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸದಾ ಅತ್ಯಾಧುನಿಕ ಸೇವೆ ನೀಡುತ್ತಾ ಬಂದಿರುವ ಟಿಎಂಸಿಸಿ ಬ್ಯಾಂಕ್ ಗೋಲ್ಡ್ ಕಾಯಿನ್ ಎಟಿಎಂ ಸೇವೆ ಆರಂಭಿಸಿದೆ. ಈ ಮೂಲಕ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವುದರೊಂದಿಗೆ ತಮ್ಮ ಬ್ಯಾಂಕ್ ಬೆಳವಣ ಗೆಗೂ ಸಹಕಾರಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಿದ್ಧಗಂಗಾ ಮಠದ ಸಿದ್ಧಲಿಂಗಸ್ವಾಮೀಜಿ ಗೋಲ್ಡ್ ಕಾಯಿನ್ ಎಟಿಎಂ ಸೇವೆಗೆ ಚಾಲನೆ ನೀಡಿ ಶುಭ ಆಶೀರ್ವಾದ ನೀಡಿದರು. ಮಾಜಿ ಸಚಿವ ಸೊಗಡು ಶಿವಣ್ಣ ಸೇರಿದಂತೆ ಟಿಎಂಸಿಸಿಯ ಆಡಳಿತ ಮಂಡಳಿ ನಿರ್ದೇಶಕರು, ಅಧಿಕಾರಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ: Tumkur News: ವಿಷಮುಕ್ತ ಆಹಾರ ಬೆಳೆಯುವವನು ನಿಜವಾದ ರೈತ-ಸಿದ್ಧಲಿಂಗ ಸ್ವಾಮೀಜಿ