Saturday, 27th July 2024

ಮಕ್ಕಳಿಗೆ ಲಸಿಕಾಕರಣ ಕಾರ್ಯಕ್ರಮಕ್ಕೆ ಸಚಿವ ಎಸ್. ಟಿ. ಸೋಮಶೇಖರ್ ಚಾಲನೆ

ಮೈಸೂರು: ಮೈಸೂರಿನ ಮಹಾರಾಣಿ ಮಹಿಳಾ ಕಾಲೇಜಿನಲ್ಲಿ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ಸೋಮವಾರ ಚಾಲನೆ ನೀಡಿದರು.

ಲಸಿಕಾ ಅಭಿಯಾನ ಆರಂಭಿಸಿ ಮಾತನಾಡಿದ ಸಚಿವರು, ಜಿಲ್ಲೆಯಲ್ಲಿ 1.50 ಲಕ್ಷ ಮಕ್ಕಳಿಗೆ ಲಸಿಕೆ ನೀಡುವ ಗುರಿ ಇಟ್ಟುಕೊಳ್ಳಲಾಗಿದೆ. ಜ.5ರಂದು 200 ತಂಡ ಮೈಸೂರಿನ ಗ್ರಾಮಾಂತರ ಭಾಗಗಳಿಗೆ ತೆರಳಿ ಶಾಲೆಗಳಲ್ಲೇ ಮಕ್ಕಳಿಗೆ ಲಸಿಕೆ ನೀಡಲಿದೆ” ಎಂದರು.

“15 ದಿನದಲ್ಲಿ ಜಿಲ್ಲೆಯ ಎಲ್ಲಾ ಮಕ್ಕಳಿಗೆ ಲಸಿಕೆ ನೀಡಲು ಜಿಲ್ಲಾಡಳಿತ, ನಗರ ಪಾಲಿಕೆ ಹಾಗೂ ಆರೋಗ್ಯ ಇಲಾಖೆ ನಿರ್ಧರಿಸಿದೆ. ಮಕ್ಕಳು ಭಯಭೀತ ರಾಗದೆ ಲಸಿಕೆಯನ್ನು ಪಡೆದುಕೊಳ್ಳಬೇಕು. ಲಸಿಕೆ ನೀಡುವ ಮುನ್ನ ಎಲ್ಲಾ ರೀತಿಯ ಪರೀಕ್ಷೆ ನಡೆಸಲಾಗಿದೆ” ಎಂದರು.

ಶಾಸಕ ಎಲ್. ನಾಗೇಂದ್ರ ಮಾತನಾಡಿ, “ಮೂರನೇ ಅಲೆಯ ಸೂಚನೆ ಇರುವುದರಿಂದ ಕೇಂದ್ರ ಸರಕಾರ ಮಕ್ಕಳಿಗೆ ಲಸಿಕೆ ನೀಡಲು ಮುಂದಾಗಿದೆ. ಮಕ್ಕಳು ಇದರ ಪ್ರಯೋಜನ ಪಡೆದುಕೊಳ್ಳಬೇಕು” ಎಂದು ಕರೆ ನೀಡಿದರು. ಜಿಲ್ಲೆಯಲ್ಲಿ ಶೇ 98ರಷ್ಟು ಮಂದಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ. ಶೇ 84ರಷ್ಟು ಮಂದಿಗೆ ಎರಡನೇ ಡೋಸ್ ಲಸಿಕೆ ಹಾಕಲಾಗಿದೆ.

ಮಹಾರಾಣಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿರುವ ರಕ್ಷಿತ, ಮೊದಲು ಭಯ ಇತ್ತು. ಎಲ್ಲಿ ಲಸಿಕೆ ತೆಗೆದುಕೊಂಡರೆ ಜ್ವರ ಬರುತ್ತದೆ ಎಂಬ ಆತಂಕ ಇತ್ತು. ಆದರೆ ಮನೆಯಲ್ಲಿ ಎಲ್ಲರೂ ನಾವೆಲ್ಲಾ ಲಸಿಕೆ ತೆಗೆದು ಕೊಂಡಿದ್ದೇವೆ ಎಂದು ಧೈರ್ಯ ತುಂಬಿದರು. ಹಾಗಾಗಿ ನಾನು ಲಸಿಕೆ ಪಡೆದುಕೊಂಡೆ. ತುಂಬಾ ಖುಷಿ ಆಗುತ್ತಿದೆ” ಎಂದರು.

ಕೋವಿಡ್-19 ಲಸಿಕೆಯ ಬಗ್ಗೆ ಪೋಷಕರು ವದಂತಿಗಳಿಗೆ ಕಿವಿಗೊಡಬಾರದು. ಶಾಲೆಯಿಂದ ಹೊರಗುಳಿದಿರುವ ಮಕ್ಕಳ ಪೋಷಕರು ಸ್ವಯಂ ಪ್ರೇರಿತವಾಗಿ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ, ಲಸಿಕೆ ಪಡೆಯಬೇಕು ಎಂದು ಮನವಿ ಮಾಡಿದರು. 44 ಲಕ್ಷ ಜನರಿಗೆ ಲಸಿಕೆ ಮೈಸೂರು ಜಿಲ್ಲೆಯಲ್ಲಿ ಇದುವರೆಗೆ 44.50 ಲಕ್ಷ ಜನರಿಗೆ ಕೋವಿಡ್ ಲಸಿಕಾ ಡೋಸ್‌ಗಳನ್ನು ನೀಡಲಾಗಿದೆ.

ಡಿ.25ರಂದು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದಂತೆ ಭಾರತದಲ್ಲಿ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡುವ ಕಾರ್ಯ ಸೋಮವಾರ ಆರಂಭಗೊಂಡಿದೆ.

error: Content is protected !!