| ಶೀಲಾ ಸಿ. ಶೆಟ್ಟಿ, ಬೆಂಗಳೂರು
ವಿಭಿನ್ನ ವಿನ್ಯಾಸ ಹೊಂದಿರುವ ಡಿಸೈನರ್ ಲೆಹೆಂಗಾ ಕಮ್ ಲಂಗ-ದಾವಣಿ (Ganesh Chaturthi 2024) ಡಿಸೈನರ್‌ವೇರ್‌ಗಳು ಈ ಫೆಸ್ಟಿವ್ ಸೀಸನ್‌ನಲ್ಲಿ ಯುವತಿಯರನ್ನು ಆಕರ್ಷಿಸಿವೆ.
ಹೌದು, ಈ ವಿನೂತನ ಶೈಲಿಯ ಲೆಹೆಂಗಾ ಡಿಸೈನ್‌ನ ಟ್ರೆಡಿಷನಲ್ ಲಂಗ-ದಾವಣಿ ಡಿಸೈನರ್‌ವೇರ್‌ಗಳು ಗೌರಿ-ಗಣೇಶ ಹಬ್ಬದ ಈ ಫೆಸ್ಟಿವ್ ಸೀಸನ್ನಲ್ಲಿ ಫ್ಯಾಷನ್ ಲೋಕದ ಬಾಗಿಲು ಬಡಿದಿದ್ದು, ಸಾಂಪ್ರದಾಯಿಕವಾಗಿ ಹಬ್ಬ ಆಚರಿಸುವ ಮಾನಿನಿಯರನ್ನು ಮಾತ್ರವಲ್ಲ, ಜೆನ್ ಜಿ ಹುಡುಗಿಯರನ್ನು ಸೆಳೆದಿವೆ.
ನಟಿ ಅನಿಕಾ ಲೆಹೆಂಗಾ ಶೈಲಿಯ ಲಂಗ-ದಾವಣಿ
ಇದಕ್ಕೆ ಪೂರಕವಾಗಿ, ನಟಿ ಕಮ್ ಮಾಡೆಲ್ ಅನಿಕಾ ಕಾಣಿಸಿಕೊಂಡಿರುವ ಲೆಹೆಂಗಾ ಕಮ್ ಪ್ರಿ ಡ್ರೇಪ್ ಲಂಗ-ದಾವಣಿ ಡಿಸೈನರ್‌ವೇರ್ ಇತ್ತೀಚಿನ ವಿನೂತನ ವಿನ್ಯಾಸಕ್ಕೆ ಕನ್ನಡಿ ಹಿಡಿದಂತಿದೆ. ಅಲ್ಲದೇ, ಈ ಡಿಸೈನರ್‌ವೇರ್ ಸದ್ಯ ಟ್ರೆಂಡಿಯಾಗಿದೆ.
ಲೆಹೆಂಗಾ – ಲಂಗ – ದಾವಣಿಯ ಸಮಾಗಮ
“ಮೂಲತಃ ಲೆಹೆಂಗಾ ಉತ್ತರ ಭಾರತದ ಡಿಸೈನರ್‌ವೇರ್. ಲಂಗ-ದಾವಣಿ ನಮ್ಮ ಸ್ಥಳೀಯ ಉಡುಪು. ಇವೆರೆಡು ಸಮಾಗಮಗೊಂಡು ವಿನ್ಯಾಸಗೊಂಡ ಡಿಸೈನರ್‌ವೇರ್ ಲೆಹೆಂಗಾ ಶೈಲಿಯ ರೇಷ್ಮೆಯ ಲಂಗ-ದಾವಣಿ ಎನ್ನಬಹುದು. ಇತ್ತೀಚೆಗಂತೂ ಈ ಶೈಲಿಯ ಲಂಗ-ದಾವಣಿ ಡಿಸೈನರ್‌ವೇರ್‌ಗಳು ಅತಿ ಹೆಚ್ಚು ಯುವತಿಯರ ಮನಗೆದ್ದಿವೆ. ಪರಿಣಾಮ, ಇವುಗಳಲ್ಲೆ ನಾನಾ ಡಿಸೈನ್‌ನವು ಈಗಾಗಲೇ ಬೋಟಿಕ್ ಡಿಸೈನರ್‌ಗಳ ಕೈ ಚಳಕದಲ್ಲಿ ಮೂಡಿ ಬರುತ್ತಿವೆ” ಎನ್ನುತ್ತಾರೆ ಬೋಟಿಕ್‌ವೊಂದರ ಡಿಸೈನರ್.
ಪ್ರಿ ಡ್ರೇಪ್ ದಾವಣಿ ವಿನ್ಯಾಸ
ಇನ್ನು, ಕೆಲವು ಡಿಸೈನರ್‌ವೇರ್‌ಗಳು ದಾವಣಿ ಅಥವಾ ದುಪಟ್ಟಾ ಪ್ರಿ ಡ್ರೇಪ್ ಆಗಿರುವಂತಹ ಡಿಸೈನ್‌ನಲ್ಲೂ ಕಾಣಿಸಿಕೊಂಡಿವೆ ಎನ್ನುತ್ತಾರೆ ಸ್ಟೈಲಿಸ್ಟ್ ಕಾವ್ಯಾ.
ಏನಿದು ಲೆಹೆಂಗಾ ಕಮ್ ಲಂಗ-ದಾವಣಿ?
ಒಮ್ಮೆ ನೋಡಲು ಥೇಟ್ ಲಂಗ-ದಾವಣಿಯಂತೆ ಕಂಡರೇ, ಇನ್ನೊಮ್ಮೆ ಲೆಹೆಂಗಾದಂತೆ ಕಾಣಿಸುತ್ತದೆ. ಲಂಗ-ದಾವಣಿ ನಮ್ಮ ದಕ್ಷಿಣ ಭಾರತದ ಟ್ರೆಡಿಷನಲ್ ಲುಕ್ ನೀಡುವ ಉಡುಪು. ಇನ್ನು, ಲೆಹೆಂಗಾ ಉತ್ತರ ಭಾರತದ ಔಟ್‌ಫಿಟ್. ಇವೆರಡನ್ನು ಮಿಕ್ಸ್ ಮಾಡಿ ವಿನ್ಯಾಸಗೊಳಿಸಲಾದ ಡಿಸೈನರ್‌ವೇರ್ ಇದು ಎನ್ನುತ್ತಾರೆ ನಟಿ ಕಮ್ ಮಾಡೆಲ್ ಅನಿಕಾ.
ಈ ಡಿಸೈನರ್‌ವೇರ್ ಧರಿಸುವವರು ಒಂದಿಷ್ಟು ಸ್ಟೈಲ್ ಸ್ಟೇಟ್‌ಮೆಂಟ್ ಫಾಲೋ ಮಾಡಬೇಕು ಎನ್ನುವ ಅನಿಕಾ ಒಂದಿಷ್ಟು ಸಿಂಪಲ್ ಟಿಪ್ಸ್ ಕೂಡ ನೀಡಿದ್ದಾರೆ.
- ಧರಿಸುವವರ ಲುಕ್ ಕಂಪ್ಲೀಟ್ ಟ್ರೆಡಿಷನಲ್ ಆಗಿರಬೇಕು.
- ಇದಕ್ಕಾಗಿ ಟ್ರೆಡಿಷನಲ್ ಆಭರಣ ಧರಿಸುವುದು ಅಗತ್ಯ.
- ಹೇರ್‌ಸ್ಟೈಲ್ ಕೂಡ ಈ ಔಟ್‌ಫಿಟ್‌ಗೆ ಹೊಂದಬೇಕು.
- ಫೆಸ್ಟಿವ್ ಲುಕ್ ನೀಡುವ ಮೇಕಪ್ ಮಾಡಬೇಕು.( ಲೇಖಕಿ ಫ್ಯಾಷನ್ ಪತ್ರಕರ್ತೆ )