ಜಕಾರ್ತಾ: ಇಂಡೋನೇಷ್ಯಾದ ಜಾವಾ ದ್ವೀಪದ ಜೈಲಿನಲ್ಲಿ ಬೆಂಕಿ ಕಾಣಿಸಿಕೊಂಡು 41 ಕೈದಿಗಳು ಮೃತಪಟ್ಟಿದ್ದು, ಹಲವರು ಗಾಯಗೊಂಡಿರುವ ಘಟನೆ ನಡೆದಿದೆ.
ಜಕಾರ್ತಾದ ಹೊರಗಿರುವ ಟಾಂಗರಾಂಗ್ ಪೆನಿಟರಿಯಲ್ಲಿ ಕೈದಿಗಳು ಮಲಗಿದ್ದಾಗ ಬೆಂಕಿ ಕಾಣಿಸಿ ಕೊಂಡಿತು. ರಕ್ಷಣಾ ತಂಡಗಳು ಬೆಂಕಿಯನ್ನು ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಮಾದಕ ದ್ರವ್ಯ ಆರೋಪದ ಮೇಲೆ ಜೈಲು ಶಿಕ್ಷೆಗೆ ಗುರಿಯಾದ ಕೈದಿಗಳನ್ನು ಹೊಂದಿದ್ದ ಒಂದು ಬ್ಲಾಕ್ ನಲ್ಲಿ ಅಗ್ನಿ ಅವಘಡ ಸಂಭವಿ ಸಿದೆ ಎಂದು ವರದಿಯಾಗಿದೆ.
ಅವಘಡದಲ್ಲಿ 41 ಕೈದಿಗಳು ಮೃತಪಟ್ಟಿದ್ದು, ಎಂಟು ಮಂದಿ ತೀವ್ರವಾಗಿ ಗಾಯಗೊಂಡಿದ್ದು, 72 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಜಕಾರ್ತಾ ಪೊಲೀಸ್ ಮುಖ್ಯಸ್ಥ ಫಾದಿಲ್ ಇಮ್ರಾನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಗಂಭೀರ ಗಾಯಗಳೊಂದಿಗೆ ಸಂತ್ರಸ್ತರನ್ನು ಚಿಕಿತ್ಸೆಗಾಗಿ ಟಾಂಗರಾಂಗ್ ನ ಸಾಮಾನ್ಯ ಆಸ್ಪತ್ರೆಗಳಿಗೆ ಸಾಗಿಸಲಾಯಿತು, ಸಣ್ಣ ಗಾಯಗಳೊಂದಿಗೆ ಕೈದಿಗಳಿಗೆ ಆರೋಗ್ಯ ಚಿಕಿತ್ಸಾಲಯದಲ್ಲಿ ಚಿಕಿತ್ಸೆ ನೀಡಲಾಯಿತು.