Thursday, 21st November 2024

Benjamin Netanyahu: ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ವಿರುದ್ಧ ಅರೆಸ್ಟ್‌ ವಾರೆಂಟ್‌

Benjamin Netanyahu

ಜೆರುಸಲೇಂ: ಕಳೆದ ಅಕ್ಟೋಬರ್‌ನಿಂದಲೂ ಪ್ಯಾಲಸ್ತೀನ್‌ನ ಗಾಜಾ ನಗರದ ಮೇಲೆ ಇಸ್ರೇಲ್‌ ದಾಳಿ ಮಾಡುತ್ತಿದೆ. ಹಮಾಸ್‌ ಉಗ್ರರ ದಾಳಿಗೆ ಪ್ರತಿಯಾಗಿ ಇಸ್ರೇಲ್‌ ಈ ಕ್ರಮ ಕೈಗೊಂಡಿದೆ. ಇದೀಗ ಮಹತ್ವದ ಬೆಳವಣಿಗೆಯೊಂದರಲ್ಲಿ ಯುದ್ಧಾಪರಾಧದ ಹಿನ್ನೆಲೆಯಲ್ಲಿ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು (Benjamin Netanyahu) ಅವರ ವಿರುದ್ಧ ನೆದರ್‌ಲ್ಯಾಂಡ್‌ನ ಹೇಗ್‌ನಲ್ಲಿರುವ ಅಂತಾರಾಷ್ಟ್ರೀಯ ಕ್ರಿಮಿನಲ್‌ ನ್ಯಾಯಾಲಯ (International Criminal Court)ವು ಬಂಧನದ ವಾರೆಂಟ್‌ ಜಾರಿ ಮಾಡಿದೆ.

ʼʼಬೆಂಜಮಿನ್‌ ನೆತನ್ಯಾಹು, ಇಸ್ರೇಲ್‌ ಮಾಜಿ ರಕ್ಷಣಾ ಸಚಿವ ಯೊಯಾವ್‌ ಗ್ಯಾಲಂಟ್‌, ಹಮಾಸ್ ನಾಯಕ ಮುಹಮ್ಮದ್ ದಿಯಾಬ್ ಇಬ್ರಾಹಿಂ ಅಲ್-ಮಸ್ರಿ ಅವರ ವಿರುದ್ಧ ಗುರುವಾರ (ನ. 21) ಅಂತಾರಾಷ್ಟ್ರೀಯ ಕ್ರಿಮಿನಲ್‌ ನ್ಯಾಯಾಲಯ ಬಂಧನದ ವಾರೆಂಟ್‌ ಹೊರಡಿಸಿದೆʼʼ ಎಂದು ಸುದ್ದಿಸಂಸ್ಥೆ ರಾಯಿಟರ್ಸ್‌ ವರದಿ ಮಾಡಿದೆ. ಯುದ್ಧಾಪರಾಧ ಮತ್ತು ಮಾನವೀಯತೆಯ ವಿರುದ್ಧದ ಅಪರಾಧದ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ.

ಇಸ್ರೇಲ್‌ ಹಾಗೂ ಪ್ಯಾಲೆಸ್ತೀನ್‌ನಲ್ಲಿ ನಡೆದ ಹಿಂಸಾಚಾರ, ಮಾನವ ಹಕ್ಕುಗಳ ದಮನ, ಪ್ರಾದೇಶಿಕ ಅಸ್ಥಿರತೆಗೆ ಧಕ್ಕೆ ತಂದ ಹಿನ್ನೆಲೆಯಲ್ಲಿ ಇವರ ವಿರುದ್ಧ ಅರೆಸ್ಟ್‌ ವಾರೆಟ್‌ ಹೊರಡಿಸಬೇಕು ಎಂದು ಅಂತಾರಾಷ್ಟ್ರೀಯ ಕ್ರಿಮಿನಲ್‌ ನ್ಯಾಯಾಲಯ (ICC)ದ ಮುಖ್ಯ ಪ್ರಾಸಿಕ್ಯೂಟರ್‌ ಆಗಿರುವ ಕರೀಮ್‌ ಖಾನ್‌ ಘೋಷಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

“ಇವರು ಉದ್ದೇಶಪೂರ್ವಕವಾಗಿ ಗಾಜಾದಲ್ಲಿನ ನಾಗರಿಕ ಜನಸಂಖ್ಯೆಯನ್ನು ಆಹಾರ, ನೀರು ಮತ್ತು ಔಷಧಿ ಮತ್ತು ವೈದ್ಯಕೀಯ ಸರಬರಾಜುಗಳು ಜತೆಗೆ ಇಂಧನ ಮತ್ತು ವಿದ್ಯುತ್ ಸೇರಿದಂತೆ ತಮ್ಮ ಉಳಿವಿಗೆ ಅನಿವಾರ್ಯವಾದ ಸೌಲಭ್ಯಗಳಿಂದ ವಂಚಿತಗೊಳಿಸಿದ್ದಾರೆ ಎನ್ನುವುದಕ್ಕೆ ಬಲವಾದ ಕಾರಣಗಳಿವೆʼʼ ಎಂದು ನ್ಯಾಯಾಲಯ ತಿಳಿಸಿದೆ. ನ್ಯಾಯಾಲಯದ ಈ ತೀರ್ಪು 2023ರ ಅ. 8ರಿಂದ 2024ರ ಮೇ 20ರವರೆಗಿನ ಸಾಕ್ಷಿಯನ್ನು ಆಧರಿಸಿದೆ.

ತಿರಸ್ಕರಿಸಿದ ಇಸ್ರೇಲ್‌

ಇಸ್ರೇಲ್ ಐಸಿಸಿಯ ಈ ತೀರ್ಪನ್ನು ತಿರಸ್ಕರಿಸಿದೆ ಮತ್ತು ಗಾಜಾದಲ್ಲಿ ಯುದ್ಧಾಪರಾಧಗಳನ್ನು ನಿರಾಕರಿಸಿದೆ. ವೈಮಾನಿಕ ದಾಳಿಯಲ್ಲಿ ಮೊಹಮ್ಮದ್ ದೀಫ್ ಎಂದೂ ಕರೆಯಲ್ಪಡುವ ಅಲ್-ಮಸ್ರಿಯನ್ನು ಕೊಂದಿರುವುದಾಗಿ ಹೇಳಿಕೊಂಡಿದೆ. ಆದರೆ ಹಮಾಸ್ ಈ ಹೇಳಿಕೆಗಳನ್ನು ದೃಢಪಡಿಸಿಲ್ಲ.

ಬಂಧನ ಸಾಧ್ಯವಿಲ್ಲ

ಅರೆಸ್ಟ್‌ ವಾರಂಟ್‌ ಹೊರಡಿಸಿದರೂ ಬೆಂಜಮಿನ್‌ ನೆತನ್ಯಾಹು ಹಾಗೂ ಯೊಯಾವ್‌ ಗ್ಯಾಲಂಟ್‌ ಬಂಧನ ಆಗುವುದಿಲ್ಲ ಎನ್ನಲಾಗಿದೆ. ಇಸ್ರೇಲ್‌ ಇಂಟರ್‌ನ್ಯಾಷನಲ್‌ ಕ್ರಿಮಿನಲ್‌ ಕೋರ್ಟ್‌ನ ಸದಸ್ಯತ್ವವನ್ನು ಪಡೆದಿಲ್ಲ. ಹೀಗಾಗಿ ಕೋರ್ಟ್‌ ಅರೆಸ್ಟ್‌ ವಾರೆಂಟ್‌ ಹೊರಡಿಸಿದರೂ ಬಂಧನ ಸಾಧ್ಯವಿಲ್ಲ ಎಂದೇ ಮೂಲಗಳು ತಿಳಿಸಿವೆ.

1 ವರ್ಷಕ್ಕಿಂತ ಹೆಚ್ಚು ಸಮಯದಿಂದ ನಡೆಯುತ್ತಿರುವ ಪ್ಯಾಲಸ್ತೀನ್‌-ಇಸ್ರೇಲ್‌ ಸಂಘರ್ಷದಲ್ಲಿ ಇದುವರೆಗೆ 44,056 ಮಂದಿ ಮೃತಪಟ್ಟಿದ್ದಾರೆ. ಅದರಲ್ಲಿಯೂ ಕಳೆದ 24 ಗಂಟೆಯಲ್ಲಿ ಗಾಜಾದಲ್ಲಿ 71 ಮಂದಿ ಅಸುನೀಗಿದ್ದಾರೆ. ಇದುವರೆಗೆ ಒಟ್ಟು 1,04,268 ಮಂದಿ ಗಾಯಗೊಂಡಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ತಿಳಿಸಿದೆ. ಹಮಾಸ್ 2023ರ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ದಾಳಿ ನಡೆಸಿ 1,200 ನಾಗರಿಕರ ಸಾವಿಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಇಸ್ರೇಲ್, ಗಾಜಾಪಟ್ಟಿಯಲ್ಲಿನ ಹಮಾಸ್ ಉಗ್ರರನ್ನು ನಾಶ ಮಾಡುವ ಪಣತೊಟ್ಟು, ಸೇನಾ ಕಾರ್ಯಾಚರಣೆಯನ್ನು ಕೈಗೆತ್ತಿಕೊಂಡಿದೆ.

ಈ ಸುದ್ದಿಯನ್ನೂ ಓದಿ: Benjamin Netanyahu: ಯಹ್ಯಾ ಸಿನ್ವಾರ್‌ ಹತ್ಯೆ ಬೆನ್ನಲ್ಲೇ ನೆತಹ್ಯಾಹು ನಿವಾಸದ ಮೇಲೆ ಡ್ರೋನ್‌ ದಾಳಿ!