Monday, 6th January 2025

Donald Trump: ಪ್ರಮಾಣ ವಚನಕ್ಕೂ ಮುನ್ನ ಟ್ರಂಪ್​ಗೆ ಭಾರೀ ಸಂಕಷ್ಟ! ಹಶ್‌ ಕೇಸ್‌ನಲ್ಲಿ ಜೈಲು ಸೇರ್ತಾರಾ ಅಮೆರಿಕ ಅಧ್ಯಕ್ಷ ?

Donald Trump

ವಾಷಿಂಗ್ಟನ್‌: ನವೆಂಬರ್‌ನಲ್ಲಿ ನಡೆದ ಅಮೆರಿಕದ ಅಧ್ಯಕ್ಷೀಯ (America President) ಚುನಾವಣೆಯಲ್ಲಿ ಡೊನಾಲ್ಡ್‌ ಟ್ರಂಪ್‌ (Donald Trump) ಜಯಭೇರಿ ಬಾರಿಸಿದ್ದು, ಜನವರಿ 20ರಂದು 2ನೇ ಬಾರಿಗೆ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅದಕ್ಕೂ ಮೊದಲು ಟ್ರಂಪ್‌ಗೆ ಕಾನೂನು ಸಂಕಷ್ಟವೊಂದು ಎದುರಾಗಿದೆ. ನ್ಯೂಯಾರ್ಕ್‌ನಲ್ಲಿ ಹಶ್‌ ಹಣ ವಂಚನೆ (Hush Money Case) ಪ್ರಕರಣದಲ್ಲಿ ಡೊನಾಲ್ಡ್ ಟ್ರಂಪ್‌ಗೆ ಜನವರಿ 10ರಂದು ಶಿಕ್ಷೆ ವಿಧಿಸಲಾಗುವುದು ಎಂದು ನ್ಯಾಯಾಧೀಶರು ಆದೇಶಿಸಿದ್ದಾರೆ. ಟ್ರಂಪ್‌ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು  ಈ ಆದೇಶ ಹೊರಬಿದ್ದಿದೆ.

ನ್ಯೂಯಾರ್ಕ್ ನ್ಯಾಯಾಧೀಶ ಜುವಾನ್ ಮಾರ್ಚೆನ್ ಅವರು ಟ್ರಂಪ್‌ಗೆ ಜೈಲು ಶಿಕ್ಷೆ ಅಥವಾ ದಂಡವನ್ನು ವಿಧಿಸುವುದಿಲ್ಲ ಎಂದು ಈಗಾಗಲೇ ಸೂಚಿಸಿದ್ದಾರೆ. ಬದಲಿಗೆ ಅವರಿಗೆ “ಷರತ್ತುಬದ್ಧ ಬಿಡುಗಡೆ” ನೀಡಲಾಗುವುದು ಎಂದು ತಿಳಿಸಿದ್ದಾರೆ. ಚುನಾಯಿತ ಅಧ್ಯಕ್ಷರು ವಿಚಾರಣೆಗೆ ಹಾಜರಾಗಬೇಕು ಎಂದು ಅವರು ತಮ್ಮ ಆದೇಶದಲ್ಲಿ ಬರೆದಿದ್ದಾರೆ.

ಏನಿದು ಅಕ್ರಮ ಹಣ ವರ್ಗಾವಣೆ ಪ್ರಕರಣ ?

ನೀಲಿ ಚಿತ್ರ ತಾರೆ ಸ್ಟೊರ್ಮಿ ಡೇನಿಯಲ್ಸ್‌ ಜತೆ ಟ್ರಂಪ್‌ ಲೈಂಗಿಕ ಸಂಬಂಧ ಹೊಂದಿದ್ದು, ಅದನ್ನು ಮುಚ್ಚಿಹಾಕಲು 2016ರ ಚುನಾವಣಾ ಪ್ರಚಾರದ ಸಮಯದಲ್ಲಿ ಟ್ರಂಪ್‌ ತಮ್ಮ ವಕೀಲ ಮೈಕೆಲ್ ಕೋಹೆನ್ ಅವರಿಗೆ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದರು ಎನ್ನುವ ಆರೋಪವಿದೆ. ಇದೀಗ ಆ ಪ್ರಕರಣದ ವಿಚಾರಣೆ ಮುಗಿದಿದ್ದು, ತೀರ್ಪು ಪ್ರಕಟವಾಗಲಿದೆ.

ಟ್ರಂಪ್ ಅವರು ತಮ್ಮ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಈ ಎಲ್ಲ ಆರೋಪಗಳನ್ನು ತಳ್ಳಿ ಹಾಕಿದ್ದಾರೆ ಮತ್ತು ತಪ್ಪಿತಸ್ಥರಲ್ಲ ಎಂದಿದ್ದರು. ಅಲ್ಲದೇ ಈ ಪ್ರಕರಣವು ಅವರ 2024ರ ಅಧ್ಯಕ್ಷೀಯ ಪ್ರಚಾರವನ್ನು ಹಾನಿ ಮಾಡುವ ಪ್ರಯತ್ನವಾಗಿದೆ ಎಂದು ಅವರು ಹೇಳಿದ್ದರು. ಇನ್ನು ಶುಕ್ರವಾರ, ಟ್ರಂಪ್ ವಕ್ತಾರರು ನ್ಯಾಯಾಧೀಶ ಮಾರ್ಚೆನ್ ಅವರ ಶಿಕ್ಷೆಯ ಆದೇಶವನ್ನು ಟೀಕಿಸಿದ್ದಾರೆ.

ಪ್ರಕರಣದ ವಿರುದ್ಧ ಇತ್ತೀಚಿನ ಹೇಳಿಕೆಯಲ್ಲಿ ಟ್ರಂಪ್ ಇದು ತನ್ನ ಅಧ್ಯಕ್ಷ ಸ್ಥಾನದ ಮೇಲೆ ಪ್ರಭಾವ ಬೀರುತ್ತದೆ ಹಾಗೂ ಆಡಳಿತದ ಸಾಮರ್ಥ್ಯಕ್ಕೆ ಅಡ್ಡಿಯಾಗುತ್ತದೆ ಎಂದು ವಾದಿಸಿದ್ದರು. ಇಂತಹ ಪರಿಸ್ಥಿತಿಯಲ್ಲಿ ಟ್ರಂಪ್‌ ಅವರು ಅಳವಡಿಸಿಕೊಳ್ಳಬಹುದಾದ ಹಲವಾರು ಕ್ರಮಗಳ ಬಗ್ಗೆ ಸಲಹೆ ನೀಡಲಾಗಿದೆ ಎಂದು ನ್ಯಾಯಮೂರ್ತಿ ಮಾರ್ಚೆನ್ ಹೇಳಿದ್ದಾರೆ . ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವಾಗ ಕ್ರಿಮಿನಲ್ ಪ್ರಕರಣದಿಂದ ವಿಚಲಿತರಾಗುವ ಬಗ್ಗೆ ಟ್ರಂಪ್ ಅವರ ಕಳವಳವನ್ನು ಇದು ಸರಾಗಗೊಳಿಸಬಹುದು.

ಈ ಸುದ್ದಿಯನ್ನೂ ಓದಿ : Donald Trump: ಯುದ್ಧ ನಿಲ್ಲಿಸುವುದೇ ನಮ್ಮ ಗುರಿ: ಡೊನಾಲ್ಡ್‌ ಟ್ರಂಪ್‌ ಘೋಷಣೆ