Thursday, 7th November 2024

Elon Musk: ಡೊನಾಲ್ಡ್‌ ಟ್ರಂಪ್‌ ಕುಟುಂಬದೊಂದಿಗೆ ಪೋಸ್‌ ಕೊಟ್ಟ ಎಲಾನ್‌ ಮಸ್ಕ್‌; ಫೋಟೊದಲ್ಲಿ ಟ್ರಂಪ್‌ ಪತ್ನಿ ಮಿಸ್ಸಿಂಗ್‌

Elon Musk

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷೀಯ ಚುನಾವಣೆ (US presidential election)ಯಲ್ಲಿ ಡೊನಾಲ್ಡ್‌ ಟ್ರಂಪ್‌ (Donald Trump) ಅಭೂತಪೂರ್ವ ಜಯ ದಾಖಲಿಸಿದ್ದಾರೆ. ಈ ಮೂಲಕ 2ನೇ ಬಾರಿಗೆ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದಾರೆ. ಟ್ರಂಪ್‌ ಜಯ ಗಳಿಸುತ್ತಿದ್ದಂತೆ ಕುಟುಂಬಸ್ಥರೆಲ್ಲ ಸೇರಿ ವಿಜಯೋತ್ಸವ ಆಚರಿಸುತ್ತಿರುವ ಫೋಟೊವನ್ನು ಅವರ ಮೊಮ್ಮಗಳು ಕೈ ಟ್ರಂಪ್‌ (Kai Trump) ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವಿಶೇಷ ಎಂದರೆ ಈ ಫೋಟೊದಲ್ಲಿ ಟ್ರಂಪ್‌ ಕುಟುಂಬದೊಂದಿಗೆ ಅವರ ಸ್ನೇಹಿತ, ವಿಶ್ವದ ನಂ.1 ಶ್ರೀಮಂತ, ಟೆಸ್ಲಾ, ಸ್ಪೇಸ್‌ಎಕ್ಸ್‌ನ ಸಿಇಒ ಎಲಾನ್‌ ಮಸ್ಕ್‌ (Elon Musk) ಕಾಣಿಸಿಕೊಂಡಿದ್ದಾರೆ. ಆದರೆ ಟ್ರಂಪ್‌ ಅವರ ಪತ್ನಿ ಮೆಲಾನಿಯಾ (Melania) ಫೋಟೊದಲ್ಲಿ ಕಾಣಿಸಿಕೊಂಡಿಲ್ಲ.

ಎಲಾನ್‌ ಮಸ್ಕ್‌ ತಮ್ಮ ಪುತ್ರ X Æ A-12ನನ್ನು ಎತ್ತಿಕೊಂಡಿರುವುದು ಫೋಟೊದಲ್ಲಿ ಕಂಡು ಬಂದಿದೆ. ಟ್ರಂಪ್‌ ಅವರ ಕುಟುಂಬದ ಸದಸ್ಯರೊಂದಿಗೆ ನಿಂತು ಎಲಾನ್‌ ಮಸ್ಕ್‌ ನಸುನಗುತ್ತಾ ಪೋಸ್‌ ಕೊಟ್ಟಿದ್ದಾರೆ. ʼʼಇಡೀ ತಂಡʼʼ (The whole squad) ಎಂದು ಕ್ಯಾಪ್ಶನ್‌ ನೀಡಿ ಕೈ ಈ ಫೋಟೊ ಹಂಚಿಕೊಂಡಿದ್ದಾರೆ. ಎಲಾನ್‌ ಮಸ್ಕ್‌ ಇದೀಗ ಟ್ರಂಪ್‌ ಕುಟುಂಬದ ಭಾಗವಾಗಿದ್ದಾರೆ ಎಂದು ಹಲವರು ಕಾಮೆಂಟ್‌ ಮಾಡಿದ್ದಾರೆ. ಈ ಕುಟುಂಬಸ್ಥರೊಂದಿಗೆ ಎಲಾನ್‌ ಮಸ್ಕ್‌ ಹೊಂದಿಕೆಯಾಗುತ್ತಿದ್ದಾರೆ ಎಂದು ಇನ್ನು ಕೆಲವರು ಹೇಳಿದ್ದಾರೆ.

ಟ್ರಂಪ್‌ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿದ್ದ ಮಸ್ಕ್‌

ಎಲಾನ್‌ ಮಸ್ಕ್‌ ಚುನಾವಣೆಯಲ್ಲಿ ಬಹಿರಂಗವಾಗಿ ಡೊನಾಲ್ಡ್ ಟ್ರಂಪ್‌ ಅವರನ್ನು ಬೆಂಬಲಿಸಿದ್ದರು. ಅವರ ಚುನಾವಣಾ ಪ್ರಚಾರ ಸಭೆಗಳಲ್ಲೂ ಭಾಗವಹಿಸಿದ್ದರು. ಫ್ಲೋರಿಡಾದ ಪಾಮ್‌ ಬೀಚ್‌ ಕೌಂಟಿಯಲ್ಲಿ ನಡೆದ ವಿಜಯೋತ್ಸವ ಸಂಭ್ರದಲ್ಲಿ ಪಾಲ್ಗೊಂಡಿದ್ದ ಮಸ್ಕ್‌ ತಮ್ಮ 4 ವರ್ಷದ ಮಗನನ್ನು ಎತ್ತಿಕೊಂಡು ಅತಿಥಿಗಳ ಜತೆ ಓಡಾಡಿಕೊಂಡಿದ್ದರು. ಕೈ ಟ್ರಂಪ್‌ ಅವರ ಫೋಟೊವನ್ನು ರಿಪೋಸ್ಟ್‌ ಮಾಡಿದ ಮಸ್ಕ್‌ ಸಮಾರಂಭದಲ್ಲಿ ಮಗನನ್ನು ಹೆಗಲಲ್ಲಿ ಕೂರಿಸಿಕೊಂಡಿರುವ ತಮ್ಮ ಫೋಟೊವನ್ನೂ ಹಂಚಿಕೊಂಡಿದ್ದಾರೆ.

ಮಸ್ಕ್‌ಗೆ ಧನ್ಯವಾದ ತಿಳಿಸಿದ ಟ್ರಂಪ್‌

ವಿಜಯೋತ್ಸವದ ಬಹಿರಂಗ ಸಭೆಯಲ್ಲಿ ಮಾತನಾಡಿದ್ದ ಟ್ರಂಪ್‌ ಸಹಕಾರಕ್ಕಾಗಿ ಎಲಾನ್‌ ಮಸ್ಕ್‌ಗೆ ಧನ್ಯವಾದ ತಿಳಿಸಿದ್ದರು. ಅವರನ್ನು ವಿಶೇಷ ವ್ಯಕ್ತಿ ಎಂದು ಸಂಬೋಧಿಸಿದ್ದರು. ʼʼನಾವೀಗ ಹೊಸ ತಾರೆಯನ್ನು ಹೊಂದಿದ್ದೇವೆ. ಆ ತಾರೆಯ ಹೆಸರು ಎಲಾನ್‌. ಅವರೊಬ್ಬರು ಅದ್ಭುತ ವ್ಯಕ್ತಿʼʼ ಎಂದು ಬಹಿರಂಗವಾಗಿಯೇ ಹೊಗಳಿದ್ದರು. ಫಿಲಡೆಲ್ಫಿಯಾ, ಪೆನ್ಸಿಲ್ವೇನಿಯಾದ ವಿವಿಧ ಭಾಗಗಳಲ್ಲಿ ನಡೆದ ಪ್ರಚಾರದಲ್ಲಿ ತಮ್ಮೊಂದಿಗೆ ಸುಮಾರು 2 ವಾರಗಳನ್ನು ಕಳೆದ ಮಸ್ಕ್‌ನ ಸಹಾಯವನ್ನು ಟ್ರಂಪ್‌ ಸ್ಮರಿಸಿಕೊಂಡಿದ್ದರು. “ಎಲಾನ್‌ಗೆ ಮಾತ್ರ ಇದು ಸಾಧ್ಯ. ಅದಕ್ಕಾಗಿಯೇ ನಾನು ಅವರನ್ನು ಪ್ರೀತಿಸುತ್ತೇನೆʼʼ ಎಂದಿದ್ದರು.

ಟ್ರಂಪ್ ಅವರ ಚುನಾವಣೆ ಪ್ರಚಾರಕ್ಕೆ ಮಸ್ಕ್‌ ಸುಮಾರು 100 ಮಿಲಿಯನ್ ಡಾಲರ್‌ (8,42,73,00,000 ರೂ.) ದೇಣಿಗೆ ನೀಡಿದ್ದರು. ಟ್ರಂಪ್‌ ಆಡಳಿತದಲ್ಲಿ ಮಸ್ಕ್‌ ಅವರಿಗೆ ಪ್ರಮುಖ ಹುದ್ದೆ ಲಭಿಸುವ ನಿರೀಕ್ಷೆ ಇದೆ. ಡೊನಾಲ್ಡ್‌ ಟ್ರಂಪ್‌ ಸರ್ಕಾರಿ ದಕ್ಷತೆಯ ಆಯೋಗವನ್ನು ಮುನ್ನಡೆಸಲು ಎಲಾನ್‌ ಮಸ್ಕ್ ಅವರನ್ನು ನೇಮಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ: JD Vance: ಅಮೆರಿಕದ ಉಪಾಧ್ಯಕ್ಷರಾಗಿ ಜೆ.ಡಿ.ವ್ಯಾನ್ಸ್ ಆಯ್ಕೆ; ಭಾರತಕ್ಕೂ ಇವರಿಗೂ ಇದೆ ವಿಶೇಷ ನಂಟು