Indian Student: ಕೆನಡಾದಲ್ಲಿ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಭಾರತೀಯ ವಿದ್ಯಾರ್ಥಿನಿ ಶವವಾಗಿ ಪತ್ತೆ
Indian Student Death in America: ಕೆನಡಾದ ಒಟ್ಟಾವಾದಲ್ಲಿ ಭಾರತೀಯ ವಿದ್ಯಾರ್ಥಿನಿ ವಂಶಿಕಾ ಅವರ ನಿಗೂಢ ಸಾವನ್ನು ಒಟ್ಟಾವಾದ ಭಾರತೀಯ ರಾಯಭಾರ ಕಚೇರಿ ದೃಢಪಡಿಸಿದೆ. ಸ್ಥಳೀಯ ಪೊಲೀಸರ ಪ್ರಕಾರ, ಸಾವಿನ ಕಾರಣವನ್ನು ತನಿಖೆ ಮಾಡಲಾಗುತ್ತಿದೆ. ವಂಶಿಕಾ ಕಾಣೆಯಾದ ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿದೆ.


ಒಟ್ಟಾವಾ: ಕೆನಡಾದ (Canada) ಒಟ್ಟಾವಾದಲ್ಲಿ (Ottawa) ಭಾರತೀಯ ವಿದ್ಯಾರ್ಥಿನಿ ವಂಶಿಕಾ (Indian Student Vanshika) ಅವರ ನಿಗೂಢ ಸಾವನ್ನು ಒಟ್ಟಾವಾದ ಭಾರತೀಯ ರಾಯಭಾರ ಕಚೇರಿ (Indian High Commission) ದೃಢಪಡಿಸಿದೆ. ಸ್ಥಳೀಯ ಪೊಲೀಸರ ಪ್ರಕಾರ, ಸಾವಿನ ಕಾರಣವನ್ನು ತನಿಖೆ ಮಾಡಲಾಗುತ್ತಿದೆ. ವಂಶಿಕಾ ಕಾಣೆಯಾಗಿ ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿದೆ. ವಂಶಿಕಾ, ಪಂಜಾಬ್‌ನ ಡೇರಾ ಬಸ್ಸಿಯ ಎಎಪಿ ನಾಯಕ ಮತ್ತು ಶಾಸಕ ಕುಲ್ಜಿತ್ ಸಿಂಗ್ ರಂಧಾವಾ ಅವರ ಆಪ್ತರಾದ ದೇವಿಂದರ್ ಸಿಂಗ್ ಅವರ ಪುತ್ರಿಯಾಗಿದ್ದಾರೆ. ಶಾಲಾ ಶಿಕ್ಷಣ ಮುಗಿಸಿದ ಬಳಿಕ, ಎರಡೂವರೆ ವರ್ಷಗಳ ಹಿಂದೆ ಒಟ್ಟಾವಾಕ್ಕೆ ತೆರಳಿ ಡಿಪ್ಲೊಮಾ ಕೋರ್ಸ್‌ಗೆ ಸೇರಿದ್ದರು.
“ಒಟ್ಟಾವಾದಲ್ಲಿ ಭಾರತೀಯ ವಿದ್ಯಾರ್ಥಿನಿ ವಂಶಿಕಾ ಅವರ ಸಾವಿನ ಸುದ್ದಿಯಿಂದ ನಾವು ತೀವ್ರವಾಗಿ ದುಃಖಿತರಾಗಿದ್ದೇವೆ. ಸ್ಥಳೀಯ ಪೊಲೀಸರು ಸಾವಿನ ಕಾರಣವನ್ನು ತನಿಖೆ ಮಾಡುತ್ತಿದ್ದಾರೆ. ದುಃಖತಪ್ತ ಕುಟುಂಬದವರೊಂದಿಗೆ ಮತ್ತು ಸ್ಥಳೀಯ ಸಮುದಾಯ ಸಂಘಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದು, ಎಲ್ಲ ಸಾಧ್ಯವಾದ ಸಹಾಯವನ್ನು ಒದಗಿಸುತ್ತಿದ್ದೇವೆ,” ಎಂದು ಒಟ್ಟಾವಾದ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
ಒಟ್ಟಾವಾದ ಹಿಂದೂ ಸಮುದಾಯವು ಒಟ್ಟಾವಾ ಪೊಲೀಸ್ ಸೇವೆಗೆ ಬರೆದ ಪತ್ರದ ಪ್ರಕಾರ, ವಂಶಿಕಾ ಏಪ್ರಿಲ್ 25 ರಂದು ಸಂಜೆ 8-9 ಗಂಟೆ ಸುಮಾರಿಗೆ ಬಾಡಿಗೆ ಕೊಠಡಿಯೊಂದನ್ನು ವೀಕ್ಷಿಸಲು ಮನೆಯಿಂದ ಹೊರಟಿದ್ದರು. ಆ ರಾತ್ರಿ 11:40 ರ ಸುಮಾರಿಗೆ ಅವರ ಫೋನ್ ಸ್ವಿಚ್ ಆಫ್ ಆಗಿತ್ತು. ಮರುದಿನ ಅವರು ಪ್ರಮುಖ ಪರೀಕ್ಷೆಗೆ ಗೈರಾಗಿದ್ದರು, ಇದು ಅವರ ಸ್ವಭಾವಕ್ಕೆ ವಿರುದ್ಧವಾಗಿತ್ತು. ಇದರಿಂದ ಕುಟುಂಬದವರಲ್ಲಿ ಆತಂಕ ಮೂಡಿತು.
We are deeply saddened to be informed of the death of Ms. Vanshika, student from India in Ottawa. The matter has been taken up with concerned authorities and the cause is under investigation as per local police. We are in close contact with the bereaved kin and local community… https://t.co/7f4v8uGtuk
— India in Canada (@HCI_Ottawa) April 28, 2025
“ವಂಶಿಕಾ ಏಪ್ರಿಲ್ 25, 2025 ರ ಸಂಜೆಯಿಂದ ಕಾಣೆಯಾಗಿದ್ದಾರೆ. ಅವರು 7 ಮೆಜೆಸ್ಟಿಕ್ ಡ್ರೈವ್ ಬಳಿ ಬಾಡಿಗೆ ಕೊಠಡಿಯನ್ನು ವೀಕ್ಷಿಸಲು ಹೊರಟಿದ್ದರು. ರಾತ್ರಿ 11:40 ರ ಸುಮಾರಿಗೆ ಅವರ ಫೋನ್ ಸ್ವಿಚ್ ಆಫ್ ಆಗಿತ್ತು. ಮರುದಿನ ಅವರು ಪ್ರಮುಖ ಪರೀಕ್ಷೆಯನ್ನು ತಪ್ಪಿಸಿದ್ದಾರೆ. ಈ ರೀತಿ ಅವರು ಯಾವತ್ತೂ ಮಾಡಿರಲಿಲ್ಲ. ಕುಟುಂಬ ಮತ್ತು ಸ್ನೇಹಿತರ ಶ್ರಮದ ಹೊರತಾಗಿಯೂ, ಅವರ ಬಗ್ಗೆ ಯಾವುದೇ ಮಾಹಿತಿ ಲಭಿಸಿಲ್ಲ,” ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಒಟ್ಟಾವಾದ ಹಿಂದೂ ಸಮುದಾಯವು ಆತಂಕ ವ್ಯಕ್ತಪಡಿಸಿ, ಒಟ್ಟಾವಾ ಪೊಲೀಸ್ ಸೇವೆಯನ್ನು ತನಿಖೆಯನ್ನು ತೀವ್ರಗೊಳಿಸಲು ಒತ್ತಾಯಿಸಿತ್ತು. “ನಾವು ತೀವ್ರವಾಗಿ ಆತಂಕಗೊಂಡಿದ್ದೇವೆ. ಒಟ್ಟಾವಾದ ಹಿಂದೂ ಸಮುದಾಯವು ಆತಂಕದಲ್ಲಿದೆ ಮತ್ತು ಪ್ರತಿ ಗಂಟೆಯೂ ಆತಂಕವನ್ನು ಹೆಚ್ಚಿಸುತ್ತಿದೆ. ಕಾಣೆಯಾದ ವ್ಯಕ್ತಿಯ ದುರ್ಬಲತೆ ಮತ್ತು ಆತಂಕಕಾರಿ ಸಂದರ್ಭಗಳನ್ನು ಗಮನಿಸಿ, ಈ ಪ್ರಕರಣಕ್ಕೆ ನಿಮ್ಮ ವೈಯಕ್ತಿಕ ಗಮನ ಮತ್ತು ಹಸ್ತಕ್ಷೇಪವನ್ನು ಕೋರುತ್ತೇವೆ. ಒಟ್ಟಾವಾ ಪೊಲೀಸ್ ಸೇವೆಯು ಈ ಪ್ರಕರಣವನ್ನು ಆದ್ಯತೆಯಾಗಿ ಪರಿಗಣಿಸಿ, ವಂಶಿಕಾ ಅವರ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಲು ನಾವು ವಿನಂತಿಸುತ್ತೇವೆ.” ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.
ಮಾಧ್ಯಮ ವರದಿಗಳ ಪ್ರಕಾರ, ವಂಶಿಕಾ ಅವರ ಮೃತದೇಹವು ಕಡಲತೀರದಲ್ಲಿ ಪತ್ತೆಯಾಗಿದೆ. ಸಾವಿನ ನಿಖರ ಕಾರಣ ಅಸ್ಪಷ್ಟವಾಗಿದ್ದು, ತನಿಖೆ ನಡೆಯುತ್ತಿದೆ. ಕುಟುಂಬವು ಕೊಲೆಯ ಶಂಕೆಯನ್ನು ವ್ಯಕ್ತಪಡಿಸಿದೆ.